ಬೆಂಗಳೂರು: ಮುಂದೂಡಲ್ಪಟ್ಟಿದ್ದ ಸರ್ಕಾರಿ ಶಾಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರ ವರ್ಗಾವಣೆ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಶುಕ್ರವಾರದಿಂದಲೇ ಚಾಲನೆ ದೊರಕಿದೆ.
ವೇಳಾಪಟ್ಟಿ ಅನುಸಾರ ಕೌನ್ಸೆಲಿಂಗ್‌ಗೆ ಅರ್ಹ ಪ್ರೌಢಶಾಲಾ ಶಿಕ್ಷಕರ ವೃಂದದ ಖಾಲಿ ಹುದ್ದೆಗಳನ್ನು ಶುಕ್ರವಾರವೇ ಪ್ರಕಟಿಸಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಖಾಲಿ ಹುದ್ದೆಗಳನ್ನು ಸೆ.22ರಂದು ಪ್ರಕಟಿಸಲಾಗುತ್ತದೆ. ಕೋರಿಕೆ ವರ್ಗಾವಣೆ ಪೂರ್ವದಲ್ಲಿ ಅಂತಿಮ ಆದ್ಯತಾ ಪಟ್ಟಿಯಂತೆ ಗರಿಷ್ಠ ಅವಧಿ ಮುಗಿದ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರ ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಪ್ರೌಢ ಶಾಲಾ ವೃಂದಕ್ಕೆ ಸೆ.20ರಂದು, ಪ್ರಾಥಮಿಕ ಶಾಲಾ ವೃಂದಕ್ಕೆ ಸೆ.22ರಂದು ನಡೆಯಲಿದೆ. ಜಿಲ್ಲೆಯೊಳಗೆ ಖಾಲಿ ಹುದ್ದೆಗಳು ಲಭ್ಯವಿಲ್ಲದಿದ್ದಲ್ಲಿ ಪಿಟಿಆರ್ ಪ್ರಕಾರ ಸೆ.23ರಂದು ಕೌನ್ಸೆಲಿಂಗ್ ನಡೆಸಲು ಸೂಚಿಸಲಾಗಿದೆ.
ಉಳಿದಂತೆ ಸಾಮಾನ್ಯ ಕೋರಿಕೆ/ಪರಸ್ಪರ ವರ್ಗಾವಣೆ ಪ್ರಕ್ರಿಯೆಗಳು ಸೆ.22ರಿಂದ 24ರವರೆಗೆ, ಜಿಲ್ಲಾ ಹಂತದ ವರ್ಗಾವಣೆ ಕೌನ್ಸೆಲಿಂಗ್ ಕ್ರಮಗಳು ಸೆ.25ರಿಂದ ಅ.4ರವರೆಗೆ, ವಿಭಾಗೀಯ ಹಂತದ ವರ್ಗಾವಣೆ ಪ್ರಕ್ರಿಯೆಗೆ ಅ.6ರಿಂದ 18ರವರೆಗೆ ಮತ್ತು ಅಂತರ ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳನ್ನು ಅ.21ರಿಂದ ನ.4ರವರೆಗೆ ನಡೆಸಲು ಸೂಚಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆ ನಡೆಸುವ ಅಧಿಕಾರಿಗಳು ಯಾವುದೇ ಲೋಪಗಳಿಲ್ಲದೆ ಸರ್ಕಾರದ ಆದೇಶಾನುಸಾರ ಕಾರ್ಯನಿರ್ವಹಿಸಬೇಕು. ಕೌನ್ಸೆಲಿಂಗ್ ವೇಳೆ ಹೆಚ್ಚುವರಿ ಶಿಕ್ಷಕರು ಮತ್ತು ನಿರ್ದಿಷ್ಟಪಡಿಸಿದ ಹುದ್ದೆಯಲ್ಲಿ ಗರಿಷ್ಠ ಅವಧಿ ಪೂರೈಸಿದ ಶಿಕ್ಷಕರು ಕೌನ್ಸೆಲಿಂಗ್‌ಗೆ ಗೈರು ಹಾಜರಾದಲ್ಲಿ ಅಂಥ ಶಿಕ್ಷಕರನ್ನು ಕೌನ್ಸೆಲಿಂಗ್ ಮುಗಿದ ಬಳಿಕ ಡಮ್ಮಿ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸುವಂತೆ ಇಲಾಖಾ ಆಯುಕ್ತರು ಸೂಚಿಸಿದ್ದಾರೆ.