46 ಜಾತಿ ಜತೆ ಕ್ರಿಶ್ಚಿಯನ್‌ ನಂಟು ಈಗಲೂ ಕಗ್ಗಂಟು

Published : Sep 20, 2025, 06:46 AM IST
vidhan soudha

ಸಾರಾಂಶ

ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಯನ್ನು ಕೈಬಿಡಬೇಕೇ ಅಥವಾ ಮುಂದುವರೆಸಬೇಕೇ ಎಂಬ ಕುರಿತು ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗದ ನಡುವೆ ಒಮ್ಮತ ಅಭಿಪ್ರಾಯ ಮೂಡಿಲ್ಲ.

ಬೆಂಗಳೂರು : ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಯನ್ನು ಕೈಬಿಡಬೇಕೇ ಅಥವಾ ಮುಂದುವರೆಸಬೇಕೇ ಎಂಬ ಕುರಿತು ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗದ ನಡುವೆ ಒಮ್ಮತ ಅಭಿಪ್ರಾಯ ಮೂಡಿಲ್ಲ.

ಹೀಗಾಗಿ ಸಮೀಕ್ಷೆಯ ವಿವಾದದ ಕೇಂದ್ರಬಿಂದುವಾಗಿರುವ ಕ್ರಿಶ್ಚಿಯನ್‌ ಹೆಸರಿನ ಜಾತಿಗಳ ಪಟ್ಟಿ ಸಮೀಕ್ಷೆ ನಮೂನೆಯಲ್ಲಿ ಮುಂದುವರೆಯಲಿದೆ.

ಸಮೀಕ್ಷಾ ನಮೂನೆಯಿಂದ 46 ಜಾತಿಗಳನ್ನೂ ಕೈಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೂಚಿಸಿದರೂ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್‌ ಅವರು ಒಪ್ಪುತ್ತಿಲ್ಲ. ಈ ಪಟ್ಟಿ ಹಿಂದಿನ ಕಾಂತರಾಜ ಆಯೋಗದಲ್ಲೂ ಇತ್ತು. ಇದು ನಾವು ಸೇರಿಸಿದ್ದಲ್ಲ. ಹೀಗಾಗಿ ನಾವು ಕೈಬಿಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸಮೀಕ್ಷೆ ನಮೂನೆಯಲ್ಲಿ 46 ಕ್ರಿಶ್ಚಿಯನ್‌ ಜಾತಿಗಳ ಪಟ್ಟಿ ಇರಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಗೊಂದಲ ಮುಂದುವರೆದಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಅಂಶದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ಈ ವೇಳೆ 46 ಕ್ರಿಶ್ಚಿಯನ್‌ ಹೆಸರಿನ ಜಾತಿಗಳನ್ನು ಸಮೀಕ್ಷೆ ನಮೂನೆಯಿಂದ ಕೈಬಿಡಿ. ಒಂದು ವೇಳೆ ಮತಾಂತರಗೊಂಡಿರುವವರು ಮೂಲ ಜಾತಿ ಹೆಸರು ನಮೂದಿಸಬೇಕಿದ್ದರೆ ಇತರೆ ಕಾಲಂನಲ್ಲಿ ತಮ್ಮ ಜಾತಿ ನಮೂದಿಸಲಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು. ಆದರೆ ಕಾನೂನಿನ ಕಾರಣ ನೀಡಿ ಆಯೋಗದ ಅಧ್ಯಕ್ಷರು ಒಪ್ಪಿಗೆ ನೀಡಿಲ್ಲ. ಆಯೋಗವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಸರ್ಕಾರ ತನ್ನ ನಿಲುವನ್ನು ಹೇರಲು ಸಾಧ್ಯವಿಲ್ಲ. ಹೀಗಾಗಿ ಗೊಂದಲ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ವಿವಾದ?:

ಸೆ.22 ರಿಂದ ಶುರುವಾಗಲಿರುವ ಸಮೀಕ್ಷೆಯಲ್ಲಿ ಸಾರ್ವಜನಿಕರು ತಮ್ಮ ಜಾತಿ ನಮೂದಿಸಲು ಅನುವಾಗುವಂತೆ ಜಾತಿ, ಉಪಜಾತಿ ಹಾಗೂ ಧರ್ಮಗಳ ಪಟ್ಟಿಯನ್ನು ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿತ್ತು. ಈ ವೇಳೆ ಒಕ್ಕಲಿಗ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್‌, ವಾಲ್ಮೀಕಿ ಕ್ರಿಶ್ಚಿಯನ್‌ ಸೇರಿ 46 ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್‌ ಧರ್ಮದ ಜತೆ ಸೇರಿಸಿ ಪಟ್ಟಿ ಮಾಡಲಾಗಿತ್ತು.

ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಕೈಬಿಡುವ ಕುರಿತು ಚರ್ಚೆ ನಡೆಸಲಾಯಿತಾದರೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

46 ಜಾತಿಗಳ ಪಟ್ಟಿ ಯಾವುದು?

ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್‌, ವಾಲ್ಮೀಕಿ ಕ್ರಿಶ್ಚಿಯನ್‌, ಆದಿ ಆಂಧ್ರ ಕ್ರಿಶ್ಚಿಯನ್‌, ಆದಿ ದ್ರಾವಿಡ ಕ್ರಿಶ್ಚಿಯನ್‌, ಆದಿ ಕರ್ನಾಟಕ ಕ್ರಿಶ್ಚಿಯನ್‌, ಅಕ್ಕಸಾಲಿಗ ಕ್ರಿಶ್ಚಿಯನ್‌, ಬಣಜಿಗ ಕ್ರಿಶ್ಚಿಯನ್‌, ಬಂಜಾರ ಕ್ರಿಶ್ಚಿಯನ್‌, ಬಾರಿಕಾರ್‌ ಕ್ರಿಶ್ಚಿಯನ್‌, ಬೆಸ್ತರು ಕ್ರಿಶ್ಚಿಯನ್‌, ಬಿಲ್ಲವ ಕ್ರಿಶ್ಚಿಯನ್‌, ಬುಡುಗ ಜಂಗಮ ಕ್ರಿಶ್ಚಿಯನ್‌, ಚರೋಡಿ ಕ್ರಿಶ್ಚಿಯನ್‌, ದೇವಾಂಗ ಕ್ರಿಶ್ಚಿಯನ್‌, ಗೊಲ್ಲ ಕ್ರಿಶ್ಚಿಯನ್‌, ಗೌಡಿ ಕ್ರಿಶ್ಚಿಯನ್‌, ಹೊಲೆಯ ಕ್ರಿಶ್ಚಿಯನ್‌, ಜಲಗಾರ ಕ್ರಿಶ್ಚಿಯನ್‌, ಜಾಡರ್‌ ಕ್ರಿಶ್ಚಿಯನ್‌, ಜಂಗಮ ಕ್ರಿಶ್ಚಿಯನ್‌, ಕಮ್ಮ ಕ್ರಿಶ್ಚಿಯನ್‌, ಕಮ್ಮ ನಾಯ್ಡು ಕ್ರಿಶ್ಚಿಯನ್‌, ಲಮಾಣಿ ಕ್ರಿಶ್ಚಿಯನ್‌, ಲಂಬಾಣಿ ಕ್ರಿಶ್ಚಿಯನ್‌, ಮಾದಿಗ ಕ್ರಿಶ್ಚಿಯನ್‌, ಮಹಾರ್‌ ಕ್ರಿಶ್ಚಿಯನ್‌, ಮಾಲ ಕ್ರಿಶ್ಚಿಯನ್‌, ಮಾಂಗ ಕ್ರಿಶ್ಚಿಯನ್‌, ಮೊದಲಿಯಾರ್‌ ಕ್ರಿಶ್ಚಿಯನ್‌, ನಾಡರ್‌ ಕ್ರಿಶ್ಚಿಯನ್‌, ನೇಕಾರ ಕ್ರಿಶ್ಚಿಯನ್‌, ಪಡಯಾಚಿ ಕ್ರಿಶ್ಚಿಯನ್‌, ಪರಯ ಕ್ರಿಶ್ಚಿಯನ್‌, ರೆಡ್ಡಿ ಕ್ರಿಶ್ಚಿಯನ್‌, ಸೆಟ್ಟಿ ಬಲಿಜ ಕ್ರಿಶ್ಚಿಯನ್‌, ಸಿದ್ಧಿ ಕ್ರಿಶ್ಚಿಯನ್‌, ಸುದ್ರಿ ಕ್ರಿಶ್ಚಿಯನ್‌, ತಿಗಳ/ಥಿಗಳ ಕ್ರಿಶ್ಚಿಯನ್‌, ತುಳು ಕ್ರಿಶ್ಚಿಯನ್‌, ವೈಶ್ಯ/ಶೆಟ್ರು ಕ್ರಿಶ್ಚಿಯನ್‌, ವೊಡ್ಡ ಕ್ರಿಶ್ಚಿಯನ್‌.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭೂಪರಿವರ್ತನೆ ಇನ್ನು ಅತಿ ಸರಳ