8, 9, 10ನೇ ಕ್ಲಾಸ್‌ ಬೋರ್ಡ್‌ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂಕೋರ್ಟ್‌ ತಡೆ - ಕರ್ನಾಟಕ ಸರ್ಕಾರಕ್ಕೆ ತರಾಟೆ

ಸಾರಾಂಶ

ಮುಂದಿನ ಆದೇಶದವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 8, 9 ಹಾಗೂ 10ನೇ ತರಗತಿಗಳ ಅರ್ಧವಾರ್ಷಿಕ ಬೋರ್ಡ್‌ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸದಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

ನವದೆಹಲಿ : ಮುಂದಿನ ಆದೇಶದವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 8, 9 ಹಾಗೂ 10ನೇ ತರಗತಿಗಳ ಅರ್ಧವಾರ್ಷಿಕ ಬೋರ್ಡ್‌ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸದಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ನೇತೃತ್ವದ ದ್ವಿಸದಸ್ಯ ಪೀಠ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗಿದ್ದ ಅರ್ಧವಾರ್ಷಿಕ ಬೋರ್ಡ್‌ ಪರೀಕ್ಷೆಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿತು. ವಿದ್ಯಾರ್ಥಿಗಳನ್ನು ಏಕೆ ಶೋಷಿಸುತ್ತೀರಿ?. ಈ ರೀತಿ ವರ್ತಿಸಬೇಡಿ. ಸ್ವಪ್ರತಿಷ್ಠೆ ಬೇಡ. ವಿದ್ಯಾರ್ಥಿಗಳ ಏಳಿಗೆ ಕುರಿತು ಕಾಳಜಿ ಇದ್ದರೆ ಸರ್ಕಾರ ಉತ್ತಮ ಶಾಲೆಗಳನ್ನು ತೆರೆಯಲಿ ಎಂದು ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡಿತು. ರಾಜ್ಯ ಸರ್ಕಾರದ ಪರ ದೇವದತ್ತ ಕಾಮತ್ ವಾದ ಮಂಡಿಸಿದರು.

ದೇಶದ ಯಾವುದೇ ರಾಜ್ಯ ಇಂತಹ ವಿಧಾನವನ್ನು ಅಳವಡಿಸಿಕೊಂಡಿಲ್ಲ ಎಂದ ನ್ಯಾಯಪೀಠ, ಮುಂದಿನ ನಾಲ್ಕು ವಾರಗಳಲ್ಲಿ ವಾಸ್ತವಾಂಶ ಕುರಿತು ವರದಿ ಸಲ್ಲಿಸುವಂತೆ ರಾಜ್ಯಕ್ಕೆ ಸೂಚಿಸಿದೆ.

ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬೋರ್ಡ್ ಪರೀಕ್ಷೆ ನಡೆಸಲಾಗಿತ್ತು. ಉಳಿದ ಜಿಲ್ಲೆಗಳಲ್ಲಿ ಸಾರ್ವಜನಿಕರ ಗಮನಕ್ಕೆ ತರದೆ ಪರೀಕ್ಷೆ ನಡೆಸಲಾಗಿತ್ತು. ಒಟ್ಟು ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬೋರ್ಡ್‌ ಪರೀಕ್ಷೆ ವಿವಾದವಾಗುತ್ತಿದ್ದಂತೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಫಲಿತಾಂಶಕ್ಕೆ ಸರ್ಕಾರ ತಡೆ ನೀಡಿತ್ತು. ಸರ್ಕಾರದ ನಿಲುವು ಪ್ರಶ್ನಿಸಿ ಖಾಸಗಿ ಶಾಲೆಗಳು ಸುಪ್ರೀಂ ಮೆಟ್ಟಿಲೇರಿದ್ದವು.

Share this article