ಕೆಪಿಎಸ್ಸಿ ತಿದ್ದುವುದು, ಕದ್ದು ಬರೆಸುವುದು ಕಾಮನ್! - ಬಗೆದಷ್ಟೂ ಹೊರಬರುತ್ತಿದೆ ಕರ್ಮಕಾಂಡ

Published : Jul 28, 2026, 04:56 AM IST
KPSC

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ‘ಕನ್ನಡಪ್ರಭ’ ಜು.1ರಂದು ಸ್ಫೋಟಕ ವರದಿ ಮೂಲಕ ಬಯಲಿಗೆ ಎಳೆದ ಮೇಲೆ ಕೆಪಿಎಸ್‌ಸಿಯಲ್ಲಿನ ಮತ್ತಷ್ಟು ಸಾಲು ಸಾಲು ಅಕ್ರಮ ಅನಾವರಣಗೊಳ್ಳುತ್ತಿವೆ.

ಬೆಂಗಳೂರು :  ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ‘ಕನ್ನಡಪ್ರಭ’ ಜು.1ರಂದು ಸ್ಫೋಟಕ ವರದಿ ಮೂಲಕ ಬಯಲಿಗೆ ಎಳೆದ ಮೇಲೆ ಕೆಪಿಎಸ್‌ಸಿಯಲ್ಲಿನ ಮತ್ತಷ್ಟು ಸಾಲು ಸಾಲು ಅಕ್ರಮ ಅನಾವರಣಗೊಳ್ಳುತ್ತಿವೆ. ಒಂದೂವರೆ ವರ್ಷದ ಹಿಂದೆ ನಡೆಸಿದ್ದ ಎಇಇ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ. ಈ ಬಗ್ಗೆ ಸಿಸಿಟೀವಿ, ವಿಡಿಯೋ ಸಾಕ್ಷ್ಯಗಳಿದ್ದು ಸಿಐಡಿ ತನಿಖೆ ಸೂಕ್ತ ಎಂದು ತನಿಖಾ ಸಮಿತಿ ಶಿಫಾರಸು ಮಾಡಿದ್ದರೂ ಕೆಪಿಎಸ್‌ಸಿ ಅದನ್ನು ಮೂಲೆಗೆ ತಳ್ಳಿತ್ತು. ಅಕ್ರಮ ಎಸಗಿದ 10 ಅಭ್ಯರ್ಥಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ವರದಿ ಆಧರಿಸಿ ಈವರೆಗೆ ಎಫ್ಐಆರ್ ಕೂಡ ದಾಖಲು ಮಾಡಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಕೆಪಿಎಸ್‌ಸಿಯಲ್ಲಿ ಓಎಂಆರ್‌ ಶೀಟ್‌ ತಿದ್ದುವುದು, ಕದ್ದು ಪರೀಕ್ಷೆ ಬರೆಸುವುದು ಸಾಮಾನ್ಯ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ.

ಹೀಗಾಗಿ ಇದೀಗ ಪಶುಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ಪಟ್ಟಿ ತಡೆ ಹಿಡಿಯುವ ಜೊತೆಗೆ ತನಿಖೆಗಾಗಿ ಇಬ್ಬರು ಸದಸ್ಯರನ್ನು ಒಳಗೊಂಡ ಉಪ ಸಮಿತಿ ರಚಿಸಿರುವುದು ಕೇವಲ ಕಣ್ಣೊರೆಸುವ ಶಾಸ್ತ್ರ ಆಗಿರಬಹುದು ಎಂಬ ಗುಮಾನಿಯೂ ವ್ಯಕ್ತವಾಗಿದೆ.

ಏನಿದು ಹಗರಣ?:

ಹೌದು, ಈಗ ನಾವು ನಿಮ್ಮ ಮುಂದೆ ಹೇಳಲು ಹೊರಟಿರುವುದು ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ 24 ಎಇಇ (ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್) ನೇಮಕಾತಿಯಲ್ಲಿ ನಡೆದ ಅಕ್ರಮದ ಕುರಿತು. ಈ ಅಕ್ರಮದ 498 ಪುಟಗಳ ತನಿಖಾ ವರದಿಯ ಸಂಪೂರ್ಣ ಮಾಹಿತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಗ್ರಾಮೀಣ ಕುಡಿಯವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗೆ 24 ಎಇಇ (ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್)ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಹೈದ್ರಾಬಾದ್ ಕರ್ನಾಟಕ ಹಾಗೂ ಆರ್‌ಪಿಸಿ ಕೋಟಾದಡಿ ಆಯ್ಕೆ ಆಗಿರುವ ಅಭ್ಯರ್ಥಿಗಳ ಪೈಕಿ 10 ಅಭ್ಯರ್ಥಿಗಳು ಅಕ್ರಮ ನಡೆಸಿರುವುದು ಪತ್ತೆಯಾಗಿದೆ. ಇದನ್ನು ಸಿಐಡಿ ತನಿಖೆಗೆ ವಹಿಸಿ ಎಂದು ಸಿಸಿಟೀವಿ ವಿಡಿಯೋ ಸೇರಿದಂತೆ ಅನೇಕ ದಾಖಲೆ ಸಹಿತ ವಿಜಯಕುಮಾರ್ ಕುಚನೂರೆ ಅಧ್ಯಕ್ಷತೆಯ ಐವರನ್ನು ಒಳಗೊಂಡ ತನಿಖಾ ಸಮಿತಿಯು 2025 ಜ.23ರಂದು ವರದಿ ಸಲ್ಲಿಸಿತ್ತು.

ಇಂಥದ್ದೊಂದು ತನಿಖೆ ನಡೆದು ಆ ವರದಿ ಸಲ್ಲಿಕೆಗೆ ಮುನ್ನವೇ ಕೆಪಿಎಸ್ಸಿಯು ಪಟ್ಟಿ ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಸರ್ಕಾರವು ಆ ಪಟ್ಟಿ ಆಧರಿಸಿ ನೇಮಕಾತಿ ಆದೇಶವನ್ನೂ ನೀಡಿತ್ತು. ತನಿಖಾ ವರದಿಯ ಶಿಫಾರಸ್ಸು ಹೈಕೋರ್ಟ್‌ನಲ್ಲೂ ಗಂಭೀರ ಚರ್ಚೆಗೆ ಕಾರಣವಾಗಿತ್ತು. ಆದರೆ, ಇದನ್ನೇ ನೆಪವಾಗಿಸಿಕೊಂಡು ಈವರೆಗೆ ಆ ತನಿಖಾ ವರದಿಯ ಶಿಫಾರಸ್ಸುಗಳು ಜಾರಿಯಾಗಿಲ್ಲ. ಈಗ ಬಯಲಿಗೆ ಬಂದಿರುವ ಪಶುಸಂಗೋಪನಾ ಇಲಾಖೆ ವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಇದೇ ಬಗೆಯ ಅಕ್ರಮ ಬಯಲಾಗಿದೆ. ಹಳೆಯ ಅಪರಾಧಕ್ಕೆ ಶಿಕ್ಷೆಯಾಗಿದ್ದರೆ ಈ ಅಪರಾಧ ನಡೆಯುತ್ತಿರಲಿಲ್ಲ.

ಈ ಕುರಿತು ಕೆಪಿಎಸ್ಸಿ ಹಂಗಾಮಿ ಅಧ್ಯಕ್ಷರಾದ ಡಾ। ಬಿ.ಪ್ರಭುದೇವ ಅವರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ಆ ಹಳೇ ಪ್ರಕರಣದ ಕುರಿತು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಆಗ ಪಟ್ಟಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಈಗ ಬಯಲಾಗಿರುವ ಪ್ರಕರಣದಲ್ಲಿ ಮಧ್ಯವರ್ತಿಗಳು ಸಿಕ್ಕಿಬಿದ್ದಿದ್ದಾರೆ. ಪಟ್ಟಿಯನ್ನು ತಡೆಹಿಡಿದಿದ್ದೇವೆ. ಗ್ರಾಮೀಣ ಕುಡಿಯುವ ನೀರಿನ ಎಇಇಗಳ ಅಕ್ರಮದ ಮಾದರಿಯೇ ಇಲ್ಲೂ ಅನುಸರಿಸಿದಂತೆ ಕಾಣುತ್ತಿದೆ. ಇದಕ್ಕೊಂದು ತಾರ್ತಿಕ ಅಂತ್ಯ ಕಾಣಿಸುತ್ತೇವೆ. ಜೊತೆಗೆ ಹಳೇ ಪ್ರಕರಣವನ್ನೂ ಬಿಡುವುದಿಲ್ಲ ಎಂದರು.

ಆ ಹಳೇ ಪ್ರಕರಣದ ಕುರಿತು ನಿನ್ನೆಯ ತುರ್ತು ಸಭೆಯಲ್ಲಿ ಚರ್ಚೆಗೆ ಬಂತು. ಆ ಕುರಿತು ಏನೇನು ಮಾಡಲು ಅವಕಾಶವಿದೆ ಎಂದು ಪರಿಶೀಲಿಸಿ ವರದಿ ನೀಡಲು ಕಾನೂನು ವಿಭಾಗಕ್ಕೆ ತಿಳಿಸಿದ್ದೇನೆ. ಆ ಪ್ರಕರಣದ ವಿರುದ್ಧ ಕೈಗೊಳ್ಳಬಹುದಾದ ಎಲ್ಲ ಕ್ರಮ ಕೈಗೊಳ್ಳಲು ಕೆಪಿಎಸ್ಸಿ ಸಿದ್ಧವಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಪಶುವೈದ್ಯ ನೇಮಕ ಅಕ್ರಮದ ತನಿಖೆ ಕಣ್ಣೊರೆಸುವ ತಂತ್ರ?

ಪಶುಸಂಗೋಪನಾ ಇಲಾಖೆಯ ವೈದ್ಯ ಹುದ್ದೆ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷರ ಮೇಲೆ ಎಫ್ಐಆರ್ ದಾಖಲಾಗಿದೆ. ಇದಾಗುತ್ತಿದ್ದಂತೆ ಭಾನುವಾರ ಎಂಬುದನ್ನೂ ಮರೆತು ತುರ್ತು ಸಭೆ ಸೇರಿದ ಕೆಪಿಎಸ್ಸಿಯು, ನೇಮಕಾತಿ ಪಟ್ಟಿ ತಡೆ ಹಿಡಿಯುವ ಜೊತೆಗೆ ತನಿಖೆಗೆ ಇಬ್ಬರು ಸದಸ್ಯರ ಒಳಗೊಂಡ ಉಪ ಸಮಿತಿ ರಚಿಸಿದೆ. ಆದರೆ, ಇದು ಕೇವಲ ಕಣ್ಣೊರೆಸುವ ಶಾಸ್ತ್ರ ಎಂದು ಈ ಹಿಂದಿನ ಕರ್ಮಕಾಂಡ ಬಲ್ಲವರ ಮಾತಾಗಿದೆ.

ಏನಿದು ಹೊಸ ಪರೀಕ್ಷಾ ಅಕ್ರಮ?

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 244 ಎಇಇ ಹುದ್ದೆಗೆ 2025ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ನಡೆಸಿತ್ತು

ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಜಯಕುಮಾರ್ ಕುಚನೂರೆ ಅಧ್ಯಕ್ಷತೆಯ ತಂಡದಿಂದ ತನಿಖೆ

ಪರೀಕ್ಷೆಯಲ್ಲಿ 10 ಜನರಿಂದ ಅಕ್ರಮ ನಡೆದಿರುವ ಕುರಿತು 2025 ಜ.23ರಂದು ಕೆಪಿಎಸ್‌ಸಿಗೆ ವರದಿ ಸಲ್ಲಿಸಿದ್ದ ತನಿಖಾ ತಂಡ

ಈ ವರದಿಯಲ್ಲಿನ ಆರೋಪ ಸಂಬಂಧ ಸಿಸಿಟೀವಿ, ವಿಡಿಯೋ ಸಾಕ್ಷ್ಯಗಳನ್ನು ಒದಗಿಸಿ ಸಿಐಡಿ ತನಿಖೆ ನಡೆಸಲು ಶಿಫಾರಸು

ಆದರೆ ಸಮಿತಿ ಶಿಫಾರಸ್ಸಿಗೆ ಮುನ್ನವೇ ಎಇಇ ಆಯ್ಕೆಯ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದ್ದ ಕೆಪಿಎಸ್‌ಸಿ

ಈ ಹಿನ್ನೆಲೆಯಲ್ಲಿ ಎಐಐ ಆಯ್ಕೆಯ ಅಂತಿಮ ಪಟ್ಟಿಗೆ ತಡೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಹಲವು ಹುದ್ದೆ ಆಕಾಂಕ್ಷಿಗಳು

ಇದನ್ನೇ ಕಾರಣವಾಗಿಟ್ಟುಕೊಂಡು, 2025ರ ಅಕ್ರಮ ಕುರಿತ ತನಿಖಾ ವರದಿಯ ಶಿಫಾರಸು ಜಾರಿಗೆ ಕ್ರಮ ಕೈಗೊಳ್ಳದ ಸಂಸ್ಥೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪೀಣ್ಯ ಮೇಲ್ಸೇತುವೆ ಇಂದಿನಿಂದ 8 ದಿನ ರಾತ್ರಿ ಸಂಚಾರ ನಿರ್ಬಂಧ
ಗೌತಮ ಬುದ್ಧ ಮನುಕುಲದ ಆದರ್ಶ: ಡಾ.ಮಲ್ಲಪ್ಪ