;Resize=(412,232))
ಬೆಂಗಳೂರು : ‘ಟೀಂ ಕರ್ನಾಟಕ ನಮ್ಮ ಗುರಿ. ಬೆಂಗಳೂರಿನಾಚೆಗೆ ಮತ್ತಷ್ಟು ಬೆಂಗಳೂರಿನಂಥ ನಗರಗಳ ನಿರ್ಮಿಸಲು ಎರಡು ಹಾಗೂ ಮೂರನೇ ಹಂತದ ನಗರಗಳಲ್ಲೂ ಮೂಲಸೌಕರ್ಯ ಒದಗಿಸಲು ಬದ್ಧವಾಗಿದ್ದೇವೆ. ಅಂತಹ ನಗರಗಳಲ್ಲಿ ಉದ್ಯೋಗ ಸೃಷ್ಟಿಸುವ ಕಂಪೆನಿಗಳಿಗೆ ಸೌಲಭ್ಯ ಒದಗಿಸುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಟಾರ್ಗೆಟ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬೆಂಗಳೂರಿನಲ್ಲಿ ಕಚೇರಿ ಜಾಗದ ಬಾಡಿಗೆ ಅಡಿಗೆ 1 ರಿಂದ 1.5 ಡಾಲರ್ ಇದೆ. ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಅರ್ಧ ಡಾಲರ್‌ಗೆ ಸಿಗುತ್ತದೆ. ಅಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ ಮಾಡುವವರಿಗೆ ಹಲವು ಸೌಲಭ್ಯ ನೀಡಲು ಮುಂದಾಗಿದ್ದು, ಡಬಲ್ ಎಫ್ಎಆರ್ ನೀಡಲು ಮುಂದಾಗಿದ್ದೇವೆ. ಆ ಮೂಲಕ ಅಲ್ಲಿಯೂ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡುತ್ತೇವೆ. ನಾವೆಲ್ಲರೂ ಟೀಂ ಕರ್ನಾಟಕ ಆಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಎಲ್ಲರೂ ಕಚೇರಿ ಕೆಲಸ ಮುಗಿಸಿ 30-40 ನಿಮಿಷಗಳಲ್ಲಿ ಮನೆ ಸೇರಲು ಬಯಸುತ್ತಾರೆ. ಕರ್ನಾಟಕ ಈ ಎಲ್ಲಾ ಆಯಾಮಗಳನ್ನು ಪರಿಗಣಿಸುತ್ತಿದೆ. ಸುಗಮ ಸಂಚಾರಕ್ಕೆ ಆದ್ಯತೆ ನೀಡುತ್ತಿದ್ದೇವೆ. ಬೆಂಗಳೂರಿನಲ್ಲಿ ಈಗಾಗಲೇ 350 ಕಿ.ಮೀ. ಮೆಟ್ರೋ ಸಂಪರ್ಕಕ್ಕೆ ಯೋಜನೆ ರೂಪಿಸಿದ್ದು, ಇದನ್ನು ಮುಂದಿನ ವರ್ಷದ ವೇಳೆಗೆ 500 ಕಿ.ಮೀ ಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಹೆಬ್ಬಾಳ ಬಳಿ ಸಣ್ಣ ಟನಲ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಜೊತೆಗೆ ಬೆಂಗಳೂರಿನಲ್ಲಿ 40 ಕಿ. ಮೀ. ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಆದಷ್ಟು ಬೇಗ ಆದೇಶ ಹೊರಡಿಸಲಾಗುವುದು. ಇವುಗಳ ಜೊತೆ 44 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಯೋಜನೆ ರೂಪಿಸಿದ್ದೇವೆ. 133 ಕಿ.ಮೀ ಉದ್ದದ ಮೇಲ್ಸೇತುವೆ ಯೋಜನೆ ರೂಪಿಸಿದ್ದೇವೆ. ಒಟ್ಟಾರೆ ಬೆಂಗಳೂರು ಅಭಿವೃದ್ಧಿಗೆ 1.5 ಲಕ್ಷ ಕೋಟಿ ರು. ವೆಚ್ಚ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ನಮ್ಮ ರಾಜ್ಯದಲ್ಲಿ ಪ್ರತಿಭಾನ್ವಿತ ಮಾನವ ಸಂಪನ್ಮೂಲ ಇದೆ. ನಮ್ಮ ರಾಜ್ಯದಲ್ಲಿ 257 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿ ವರ್ಷ 1.50 ಲಕ್ಷ ಎಂಜಿನಿಯರ್‌ಗಳನ್ನು ತಯಾರು ಮಾಡುತ್ತಿದ್ದೇವೆ. ದೇಶದಲ್ಲಿ 138 ಅಂತಾರಾಷ್ಟ್ರೀಯ ಶಾಲೆಗಳಿದ್ದು, ಆ ಪೈಕಿ 40 ಶಾಲೆಗಳು ಕರ್ನಾಟಕ ಹಾಗೂ ಬೆಂಗಳೂರಿನಲ್ಲಿವೆ. ಕರ್ನಾಟಕಕ್ಕೆ ಬಂದ ಕಂಪನಿಗಳು ಇಲ್ಲಿನ ಸಾಮರ್ಥ್ಯ, ಪ್ರತಿಭೆ ಬಗ್ಗೆ ಅರಿತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಮಹಾರಾಷ್ಟ್ರವು ಉದ್ಯಮಿಗಳಿಗೆ ದುಬಾರಿಯಾಗಿದೆ. ಇಲ್ಲಿನ ಸಂಸ್ಕೃತಿ ಹಾಗೂ ಹವಾಮಾನ ಬೆಂಗಳೂರಿನ ಅತಿ ದೊಡ್ಡ ಬಲ. ನಮ್ಮ ಸಂಸ್ಕೃತಿ ಉಳಿಸಿಕೊಂಡು ಪ್ರಗತಿ ಸಾಧಿಸುವ ಗುರಿ ಹೊಂದಿದ್ದೇವೆ ಎಂದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಶರತ್ ಬಚ್ಚೇಗೌಡ, ಐಟಿ ಮತ್ತು ಬಿಟಿ ಇಲಾಖೆ ಕಾರ್ಯದರ್ಶಿ ಮಂಜುಳಾ ಸೇರಿದಂತೆ ಹಲವರು ಹಾಜರಿದ್ದರು.
ಎಐ ವಿವಿ ಸ್ಥಾಪನೆಗೆ ಚಿಂತನೆ: ಸಿಎಂ
ಎಐ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಎಐ ವಿವಿ ಮಾಡುವ ಚಿಂತನೆ ಮಾಡುತ್ತಿದ್ದೇವೆ. ಈ ಬಗ್ಗೆ ಸಲಹೆ ಕೇಳಿದ್ದೇವೆ. ಪ್ರಪಂಚಕ್ಕೆ ಬೇಕಾಗಿರುವುದನ್ನು ಬೆಂಗಳೂರಿನಿಂದ ನೀಡಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.