ಫುಟ್ಪಾತ್ ತೆರವು ಕಾರ್ಯಾಚರಣೆ 8ನೇ ದಿನವೂ ಮುಂದುವರಿದಿದೆ. ನಗರದಾದ್ಯಂತ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಪಾಲಿಕೆಗಳ ವ್ಯಾಪ್ತಿಯಲ್ಲಿ 36ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳನ್ನು ಬಳಸಿದ ಸಿಬ್ಬಂದಿ ಬುಧವಾರ ಒಟ್ಟು 42.40 ಕಿ.ಮೀ. ಪಾದಚಾರಿ ಮಾರ್ಗಗಳಲ್ಲಿದ್ದ ಅಂಗಡಿ, ಹೆಚ್ಚುವರಿ ಮೆಟ್ಟಿಲುಗಳು, ತ್ಯಾಜ್ಯಗಳನ್ನು ತೆರವುಗೊಳಿಸಿದ್ದಾರೆ.

 ಬೆಂಗಳೂರು : ಫುಟ್ಪಾತ್ ತೆರವು ಕಾರ್ಯಾಚರಣೆ 8ನೇ ದಿನವೂ ಮುಂದುವರಿದಿದೆ. ನಗರದಾದ್ಯಂತ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಪಾಲಿಕೆಗಳ ವ್ಯಾಪ್ತಿಯಲ್ಲಿ 36ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳನ್ನು ಬಳಸಿದ ಸಿಬ್ಬಂದಿ ಬುಧವಾರ ಒಟ್ಟು 42.40 ಕಿ.ಮೀ. ಪಾದಚಾರಿ ಮಾರ್ಗಗಳಲ್ಲಿದ್ದ ಅಂಗಡಿ, ಹೆಚ್ಚುವರಿ ಮೆಟ್ಟಿಲುಗಳು, ತ್ಯಾಜ್ಯಗಳನ್ನು ತೆರವುಗೊಳಿಸಿದ್ದಾರೆ.

ಕಲಾಸಿಪಾಳ್ಯದಲ್ಲಿ ಕೆ.ಆರ್.ಮಾರುಕಟ್ಟೆಗೆ ಹೊಂದಿಕೊಂಡಿರುವ 3 ಅಂಗಡಿಗಳನ್ನು ತೆರವುಗೊಳಿಸುವಾಗಲೂ ವ್ಯಾಪಾರಿಗಳು ಪ್ರತಿರೋಧ ವ್ಯಕ್ತಪಡಿಸಿದರೂ ಪಾಲಿಕೆ ಸಿಬ್ಬಂದಿ ತೆರವು ಮಾಡಿದರು.ಪೂರ್ವ ವಿಭಾಗದಲ್ಲಿ ಮಾರತ್ ಹಳ್ಳಿ, ಇಬಲೂರು ಜಂಕ್ಷನ್, ಬೆಳ್ಳಂದೂರು, ಮಧುರಾನಗರ ಮುಖ್ಯರಸ್ತೆ ಕಾಡುಗೋಡಿ ಮುಖ್ಯ ರಸ್ತೆ ಸೇರಿ ಸುಮಾರು 8 ರಸ್ತೆಗಳಲ್ಲಿ ಒತ್ತುವರಿ ತೆರವು ಮಾಡಿ 6.6 ಕಿ.ಮೀ. ರಸ್ತೆಗಳ ಪಾದಚಾರಿ ಮಾರ್ಗ ಸುಗಮಗೊಳಿಸಲಾಯಿತು. 

ಪಶ್ಚಿಮ ಪಾಲಿಕೆಯಲ್ಲಿ 10.4 ಕಿ.ಮೀ. ತೆರವು:

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಳ್ಳಂಬೆಳಿಗ್ಗೆ ತೆರವು ಕಾರ್ಯಾಚರಣೆ ನಡೆಸಿದ ಸಿಬ್ಬಂದಿ 10.4 ಕಿ.ಮೀ.ನಷ್ಟು ಒತ್ತುವರಿ ತೆರವುಗೊಳಿಸಲಾಯಿತು. ಈ ವೇಳೆ 15 ಪೆಟ್ಟಿಗೆ ಅಂಗಡಿ, 66 ತಳ್ಳುಗಾಡಿ, 21 ಎಸಿ ಶೀಟ್ಸ್ ಪ್ರೊಜೆಕ್ಷನ್ಸ್, ಕ್ಯಾನೊಪಿ, 49 ಮೆಟ್ಟಿಲು, 68 ಜಾಹಿರಾತು ಪಿಲ್ಲರ್‌ ಮತ್ತು ಬೋರ್ಡ್‌ಗಳು, 1 ತಾತ್ಕಾಲಿಕ, ಶಾಶ್ವತ ಶೆಡ್‌, 23.52 ಟನ್‌ ಕಟ್ಟಡ ತ್ಯಾಜ್ಯ ತೆರವುಗೊಳಿಸಲಾಯಿತು. ಬಸವನಗುಡಿ ವಿಭಾಗದಲ್ಲಿ 80 ಅಡಿ ರಸ್ತೆ, ವಿದ್ಯಾಪೀಠ ವೃತ್ತ, ಹೊಸಕೆರೆಹಳ್ಳಿ ಅಡ್ಡರಸ್ತೆ 2.5 ಕಿ.ಮೀ, ಡಿವಿಜಿ ರಸ್ತೆ, ಸುಬ್ಬಾರಾಮ್‌ ಚೆಟ್ಟಿ ರಸ್ತೆ, ಬ್ಯೂಗಲ್‌ ರಾಕ್‌ ರಸ್ತೆ, 0.6 ಕಿ.ಮೀ ಪೊಲೀಸ್‌ ಸ್ಟೇಷನ್‌ ರಸ್ತೆ, ಕೆ.ಆರ್.‌ ರಸ್ತೆ, ಈಟ್‌ ಸ್ಟ್ರೀಟ್‌ - 0.6 ಕಿ.ಮೀ ರಸ್ತೆ ತೆರವುಗೊಳಿಸಲಾಯಿತು.

ರಾಜಾಜಿನಗರ ವಿಭಾಗದಲ್ಲಿ, ಯಡಿಯೂರು ವಿಭಾಗದ ಗಣೇಶಮಂದಿರ ಉಪ ವಿಭಾಗ, ಯಡಿಯೂರು ಉಪ ವಿಭಾಗ, ಹೊಸಕೆರೆಹಳ್ಳಿ ಉಪ ವಿಭಾಗದಲ್ಲಿಯೂ ಒತ್ತುವರಿ ತೆರವುಗೊಳಿಸಲಾಯಿತು.ಕೆಂಗೇರಿ ವಿಭಾಗ, ಮಹಾಲಕ್ಷ್ಮೀಪುರ ವಿಭಾಗ, ಹೆಗ್ಗನಹಳ್ಳಿ ವಿಭಾಗದಲ್ಲಿ ರಾಜಗೋಪಾಲನಗರ ಮುಖ್ಯ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು. 

ಉತ್ತರ ಪಾಲಿಕೆ- 14 ಕಿ.ಮೀ. ಅತಿಕ್ರಮಣ ಮುಕ್ತ:

ಉತ್ತರ ವಿಭಾಗದಲ್ಲಿ ಬೆಳಿಗ್ಗೆಯಿಂದ ಜೆಸಿಬಿ ಬಳಸಿ ಸುಮಾರು 14 ಕಿ.ಮೀ.ಪಾದಚಾರಿ ರಸ್ತೆ ಸುಗಮಗೊಳಿಸಿದ ಪಾಲಿಕೆ ಸಿಬ್ಬಂದಿ 41 ಅಂಗಡಿಗಳು,ಪೆಟ್ಟಿ ಅಂಗಡಿ, 38 ತಳ್ಳುವ ಗಾಡಿಗಳನ್ನು ತೆರವುಗೊಳಿಸಿದ್ದಾರೆ. ಬ್ಯಾಟರಾಯನಪುರ ವಿಭಾಗ, ವಿದ್ಯಾರಣ್ಯಪುರ ವಿಭಾಗ, ಪುಲಿಕೇಶಿನಗರ, ಪಾಟರಿ ಟೌನ್ ಮುಖ್ಯರಸ್ತೆ, ಎಸ್.ಕೆ. ಗಾರ್ಡನ್ ಮುಖ್ಯರಸ್ತೆ, ಸರ್ವಜ್ಞನಗರ ವಿಭಾಗ, ಹೆಬ್ಬಾಳ ವಿಭಾಗ, ಜೆ.ಪಿ. ಪಾರ್ಕ್ ರಸ್ತೆ, ಮುನಿರೆಡ್ಡಿಪಾಳ್ಯ ರಸ್ತೆ, ದಾಸರಹಳ್ಳಿ ವಿಭಾಗದ ರಸ್ತೆಗಳಲ್ಲಿ ಒತ್ತುವರಿ ತೆರವುಗೊಳಿಸಿದ ಸಿಬ್ಬಂದಿ 14 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತಗೊಳಿಸಿದರು. ಈ ಸಂದರ್ಭದಲ್ಲಿ ಜೆಸಿಬಿಗಳು, 29 ಟ್ರಾಕ್ಟರ್‌ಗಳು, 120 ಸಿಬ್ಬಂದಿ ಭಾಗವಹಿಸಿದ್ದರು.

ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 11.40 ಕಿ.ಮೀ ಮುಕ್ತ:

ಅಂಜನಾಪುರ ಮತ್ತು ಬೇಗೂರು ವಿಭಾಗದಲ್ಲಿ 40ನೇ ವಾರ್ಡ್ ಅಂಜನಾಪುರ ವ್ಯಾಪ್ತಿಯ ಕೃಷ್ಣಂ ಹೋಟೆಲ್‌ನಿಂದ ಟಿಪ್ಪು ಸರ್ಕಲ್‌ವರೆಗಿನ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿ 3.50 ಕಿ.ಮೀ., 46ನೇ ವಾರ್ಡ್ ಯಲಚೇನಹಳ್ಳಿ ವ್ಯಾಪ್ತಿಯ ಕೋಣನಕುಂಟೆ ಕ್ರಾಸ್‌ನಿಂದ ಸಾರಕ್ಕಿ ಸರ್ಕಲ್‌ವರೆಗಿನ ಕನಕಪುರ ಮುಖ್ಯ ರಸ್ತೆಯಲ್ಲಿ 2.80 ಕಿ.ಮೀ. ಹಾಗೂ 33ನೇ ವಾರ್ಡ್ ನಾಗನಾಥಪುರ ವ್ಯಾಪ್ತಿಯ ರಾಯಸಂದ್ರ ಸರ್ಕಲ್‌ನಿಂದ ಮೀನಾಕ್ಷಿ ಲೇಔಟ್ 1ನೇ ಕ್ರಾಸ್‌ವರೆಗಿನ ಹೊಸ ರಸ್ತೆಯಲ್ಲಿ 1.50 ಕಿ.ಮೀ. ಸೇರಿ ಒಟ್ಟು 7.80 ಕಿ.ಮೀ. ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.ಪದ್ಮನಾಭನಗರ ವಿಭಾಗ, ಎಚ್‌ಎಸ್‌ಆರ್ ಲೇಔಟ್ ವಿಭಾಗದಲ್ಲಿಯೂ ಒತ್ತುವರಿ ಸೇರಿ ಒಟ್ಟು 11.40 ಕಿ.ಮೀ. ಪಾದಚಾರಿ ರಸ್ತೆ ಮುಕ್ತಗೊಳಿಸಲಾಯಿತು.