ಕನ್ನಡಪ್ರಭ ವಾರ್ತೆ ಬೆಂಗಳೂರು

ಬೀದಿ ಬದಿ ವ್ಯಾಪಾರಿಗಳ ವಿರೋಧದ ನಡುವೆ ನಗರದಲ್ಲಿ 7ನೇ ದಿನವೂ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ 55 ಕಿ.ಮೀ ಮಾರ್ಗದಲ್ಲಿನ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಯಿತು.

ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ನಡೆದ ಈ ತೆರವು ಕಾರ್ಯಾಚರಣೆಯಲ್ಲಿ 289 ಪೆಟ್ಟಿ ಅಂಗಡಿಗಳು, 213 ತಳ್ಳುಗಾಡಿಗಳು, 382ಕ್ಕೂ ಹೆಚ್ಚು ಮೇಲ್ಛಾವಣಿ, ಕ್ಯಾನೊಪಿಗಳು, 258 ಮೆಟ್ಟಿಲು ಮತ್ತು ರ್‍ಯಾಂಪ್‌ಗಳು, 293ಕ್ಕೂ ಹೆಚ್ಚು ಅನಧಿಕೃತ ಜಾಹೀರಾತು ಫಲಕ ಹಾಗೂ 36 ಶೆಡ್‌ಗಳನ್ನು ನೆಲಸಮಗೊಳಿಸಲಾಗಿದೆ.ರಸ್ತೆ ಬದಿಯಲ್ಲಿದ್ದ ಸುಮಾರು 191.5 ಟನ್‌ಗೂ ಹೆಚ್ಚು ಕಟ್ಟಡ ಮತ್ತು ಇತರ ಇತರೆ ತ್ಯಾಜ್ಯಗಳನ್ನು ಜೆಸಿಬಿ, ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳ ಸಹಾಯದಿಂದ ತೆರವುಗೊಳಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.

ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 13.40 ಕಿ.ಮೀ., ಪಶ್ಚಿಮ 12.67 ಕಿ.ಮೀ., ಪೂರ್ವ 11.20 ಕಿ.ಮೀ., ದಕ್ಷಿಣ 11.05 ಕಿ.ಮೀ. ಹಾಗೂ ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 6.30 ಕಿ.ಮೀ. ಉದ್ದ ಮಾರ್ಗವನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ. ಕೇಂದ್ರ ಪಾಲಿಕೆ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆ, ಜೀವನ್ ಭೀಮಾನಗರ ಮುಖ್ಯ ರಸ್ತೆ, ಸುರಂಜನ್ ದಾಸ್ ರಸ್ತೆ, ನಾಗವಾರ ಪಾಳ್ಯ ಮುಖ್ಯ ರಸ್ತೆ, ಕೆ.ಆರ್ ಮಾರುಕಟ್ಟೆ ವೃತ್ತ, ಮೈಸೂರು ರಸ್ತೆ, ಕೋಟೆ ರಸ್ತೆ, ಕೆ.ಆರ್ ರಸ್ತೆ, ವಿಕ್ಟೋರಿಯಾ ಆಸ್ಪತ್ರೆ, ಮೆಜೆಸ್ಟಿಕ್ ಹತ್ತಿರದ ಧನ್ವಂತರಿ ರಸ್ತೆ, ದೇವಾಂಗ ರಸ್ತೆ, ಹಡ್ಸನ್ ವೃತ್ತದಲ್ಲಿ ಒತ್ತುವರಿಯಾಗಿದ್ದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಯಿತು. ಆರ್.ಟಿ. ನಗರ ಮುನಿರೆಡ್ಡಿ ಪಾಳ್ಯ ರಸ್ತೆ ಸೇರಿದಂತೆ ಕೆಲವೆಡೆ ವ್ಯಾಪಾರಿಗಳು ಜಿಬಿಎ ಅಧಿಕಾರಿಗಳ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪಾದಚಾರಿಗೆ ಅಡ್ಡಿಪಡಿಸಿದರೆ ಕ್ರಮ: ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಕೊಡುವವರ ವಿರುದ್ಧ ಪಾಲಿಕೆಯ ಈ ಕಠಿಣ ಕ್ರಮ ಮುಂಬರುವ ದಿನಗಳಲ್ಲೂ ಮುಂದುವರಿಯಲಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಹೇಳಿದ್ದಾರೆ.


ಫುಟ್ಪಾತ್‌ ತೆರವು ವಿರೋಧಿಸಿ ಇಂದು5000 ಬೀದಿಬದಿ ವ್ಯಾಪಾರಿಗಳ ಧರಣಿಫುಟ್‌ಪಾತ್ ಒತ್ತುವರಿ ತೆರವು ನೆಪದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನ ಬೀದಿ ವ್ಯಾಪಾರಿಗಳ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಏಳು ಸಂಘಟನೆಗಳು ಜಂಟಿಯಾಗಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಹೂವು, ಹಣ್ಣು, ತರಕಾರಿ, ತಿಂಡಿ ತಿನಿಸು ಮಾರಾಟ ಮಾಡುವ 5 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಫುಟ್‌ಪಾತ್ ಒತ್ತುವರಿ ತೆರವು ನೆಪದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿ ಅವರ ಜೀವನೋಪಾಯಕ್ಕೆ ತೊಂದರೆ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ಬೀದಿ ಬದಿ ವ್ಯಾಪಾರಿಗಳ ಜೀವನ ಸಂರಕ್ಷಣಾ ಕಾಯ್ದೆ-2014ರ ಪ್ರಕಾರ ನಗರದಲ್ಲಿ ವ್ಯಾಪಾರ ಮಾಡಲು ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಜೋನ್‌ಗಳನ್ನು ಸ್ಥಾಪಿಸಬೇಕು. ನಗರದಲ್ಲಿ 2.5 ಲಕ್ಷ ವ್ಯಾಪಾರಿಗಳಿದ್ದಾರೆ. ಆದರೆ, 27,000 ಜನರ ಸರ್ವೇ ಮಾತ್ರ ಆಗಿದೆ. ಅದರಲ್ಲಿಯೂ ಕೆಲವರಿಗೆ ಮಾತ್ರ ಐಡಿ ಕಾರ್ಡ್ ಕೊಟ್ಟಿದ್ದಾರೆ. ಎಲ್ಲರಿಗೂ ಕಾರ್ಡ್ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ ಆಗಿದೆ ಬೀದಿ ಬದಿ ವ್ಯಾಪಾರಿಗಳ ಸಂಘದ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಬಸಮ್ಮ ತಿಳಿಸಿದರು.