;Resize=(412,232))
ಬೆಂಗಳೂರು : ಮಳೆಗಾಲ ಮುಗಿಯುವ ಮೊದಲೇ ರಾಜ್ಯದಲ್ಲಿ ಬಿಸಿಲಿನ ತಾಪ ಶುರುವಾಗಿದ್ದು, ರಾಜ್ಯದ ಆರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಾಪಮಾನ ಸರಾಸರಿಗಿಂತ ಗರಿಷ್ಠ 5.5 ಡಿಗ್ರಿ ಸೆಲ್ಸಿಯಸ್‌ವರೆಗೂ ಹೆಚ್ಚು ದಾಖಲಾಗಿದೆ.
ಗುರುವಾರ ಹಾಸನದಲ್ಲಿ ಸರಾಸರಿಗಿಂತ 5.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚು ದಾಖಲಾಗಿದ್ದು, ಗರಿಷ್ಠ 32.8 ಡಿಗ್ರಿ ಸೆಲ್ಸಿಯಸ್ ಇತ್ತು. ಧಾರವಾಡದಲ್ಲಿ ಸರಾಸರಿಗಿಂತ 4.3 ಡಿಗ್ರಿ ಸೆಲ್ಸಿಯಸ್ ಹೆಚ್ಚಳದೊಂದಿಗೆ ಗರಿಷ್ಠ 32.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮೈಸೂರಿನಲ್ಲಿ ಸರಾಸರಿಗಿಂತ 3.9 ಡಿಗ್ರಿ ಸೆಲ್ಸಿಯಸ್‌ನೊಂದಿಗೆ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲೂ ತಾಪಮಾನ ಸರಾಸರಿಗಿಂತ ಹೆಚ್ಚು ದಾಖಲಾಗಿದೆ.
‘ಎಲ್ ನಿನೋ’ ಪರಿಣಾಮ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಆವರಿಸಿದೆ. ಇದರ ಮುಂದುವರೆದ ಪರಿಣಾಮವೇ ತಾಪಮಾನ ಹೆಚ್ಚಳ ಎಂದು ಹವಾಮಾನ ಇಲಾಖೆ ತಜ್ಞರು ವಿಶ್ಲೇಷಿಸಿದ್ದಾರೆ.
ಕಳೆದ ಕೆಲ ದಿನಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಿದೆ. ಮುಂದಿನ ಮೂರು ದಿನಗಳ ಕಾಲ ಯಾವುದೇ ಮಳೆಯ ಮುನ್ಸೂಚನೆಯಿಲ್ಲ. ನಂತರದಲ್ಲಿ ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆ ಇದ್ದು, ತಾಪಮಾನ ಇಳಿಕೆಯಾಗಬಹುದು ಎಂದು ಬೆಂಗಳೂರು ಹವಾಮಾನ ಇಲಾಖೆ ಮುಖ್ಯಸ್ಥ ಡಾ.ಎನ್.ಪುವಿಅರಸನ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಬೆಂಗಳೂರಿಗೂ ಬಿಸಿ: ಮುಂಗಾರು ಹಂಗಾಮಿನ ಕೊನೆಯ ತಿಂಗಳಾದ ಸೆಪ್ಟಂಬರ್‌ನಲ್ಲಿ ಸಾಮಾನ್ಯವಾಗಿ ಬೆಂಗಳೂರಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ನೊಳಗೆ ಇರುತ್ತದೆ. ಆದರೆ, ಈ ವರ್ಷ ಮಾತ್ರ ಸೆ.1ರಿಂದಲೂ ನಿರಂತರವಾಗಿ 30 ರಿಂದ 32 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.
ನಗರ ತಾಪಮಾನ (ಡಿಗ್ರಿ ಸೆಲ್ಸಿಯಸ್) ಹೆಚ್ಚಳ(ಡಿಗ್ರಿ ಸೆಲ್ಸಿಯಸ್)
ಹಾಸನ 32.8 5.5
ಧಾರವಾಡ 32.2 4.3
ಮೈಸೂರು 33.0 3.9
ಬೆಂಗಳೂರು ನಗರ 31.4 3.2
ಬೀದರ್ 32.8 3.2
ಚಿತ್ರದುರ್ಗ 32.0 3.0
ಗದಗ 32.6 3.0
ರಾಯಚೂರು 35.0 2.9
ಕಲಬುರಗಿ 34.6 2.6