2 ಬಾರಿ ಟೆಸ್ಟ್‌ ಮಾಡಿ ಸರ್ಕಾರಿ ಆಸ್ಪತ್ರೆಗೆ ಔಷಧ : ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

Published : Mar 11, 2025, 10:53 AM IST
Dinesh gundurao

ಸಾರಾಂಶ

ಸರ್ಕಾರಿ ಆಸ್ಪತ್ರೆಗಳಿಗೆ ಕಂಪನಿಗಳು ಪೂರೈಸುವ ಔಷಧಗಳ ಗುಣಮಟ್ಟವನ್ನು ಎರಡನೇ ಬಾರಿ ಪ್ರಯೋಗಾಲಯದಿಂದ ಪರೀಕ್ಷಿಸಿದ ನಂತರವೇ ಜಿಲ್ಲೆ, ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಸಲು ತೀರ್ಮಾನಿಸಲಾಗಿದೆ.

 ವಿಧಾನ ಪರಿಷತ್‌ : ಸರ್ಕಾರಿ ಆಸ್ಪತ್ರೆಗಳಿಗೆ ಕಂಪನಿಗಳು ಪೂರೈಸುವ ಔಷಧಗಳ ಗುಣಮಟ್ಟವನ್ನು ಎರಡನೇ ಬಾರಿ ಪ್ರಯೋಗಾಲಯದಿಂದ ಪರೀಕ್ಷಿಸಿದ ನಂತರವೇ ಜಿಲ್ಲೆ, ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಸಲು ತೀರ್ಮಾನಿಸಲಾಗಿದೆ. ಜೊತೆಗೆ 2-3 ವರ್ಷಕ್ಕೊಂದು ಬಾರಿ ಔಷಧ ತಯಾರಿಕೆ ಕಂಪನಿಗೆ ಖುದ್ದಾಗಿ ತೆರಳಿ ತಪಾಸಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಬಿಜೆಪಿಯ ಡಾ. ತಳವಾರ್‌ ಸಾಬಣ್ಣ ಹಾಗೂ ಸಿ.ಟಿ. ರವಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಅಗತ್ಯ ಹಾಗೂ ಇತರ ಔಷಧಗಳ ಸಂಖ್ಯೆಯನ್ನು 732ರಿಂದ 1084ಕ್ಕೆ ಹೆಚ್ಚಿಸಲಾಗಿದೆ. ಕೆಲವು ಜೀವ ರಕ್ಷಕ ಔಷಧಗಳನ್ನು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪೂರೈಸಬೇಕಾಗಿರುವುದರಿಂದ ಟೆಂಡರ್‌ ಪ್ರಕ್ರಿಯೆಯಲ್ಲಿ ಹೆಚ್ಚು ಬಿಡ್‌ದಾರರು ಭಾಗಿಯಾಗಲ್ಲ. ಕೆಲವು ಔಷಧಗಳಿಗೆ ಹಲವು ಬಾರಿ ಟೆಂಡರ್‌ ಆಹ್ವಾನಿಸಿದ್ದರೂ ಪ್ರತಿಕ್ರಿಯಿಸುವುದಿಲ್ಲ ಎಂದರು.

ತುರ್ತು ಸಂದರ್ಭದಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧಗಳನ್ನು ತಮ್ಮ ಮಟ್ಟದಲ್ಲಿ ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ಖರೀದಿಸಿ ಸಾರ್ವಜನಿಕರಿಗೆ ವಿತರಿಸಲು ಸಹ ಸೂಚಿಸಲಾಗಿದೆ. 23 ಔಷಧಿಗಳನ್ನು 4ಜಿ ವಿನಾಯಿತಿ ಮೂಲಕ 9.50 ಕೋಟಿ ರು. ಮೌಲ್ಯದ ಔಷಧಿಗಳನ್ನು ಖರೀದಿಸುವ ಪ್ರಸ್ತಾವನೆ ಪ್ರಕ್ರಿಯೆಯಲ್ಲಿರುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಡಾ. ತಳವಾರ್‌ ಸಾಬಣ್ಣ ಅವರು, ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಹಾಗೂ ಜೀವ ರಕ್ಷಕ ಔಷಧಗಳ ಕೊರತೆಯಿಂದ ದುಬಾರಿ ದರದಲ್ಲಿ ಜನರು ಖರೀದಿಸುವ ಸ್ಥಿತಿ ಇದೆ ಎಂದರು. 

PREV

Recommended Stories

ವಿವಿಧ ಬೇಡಿಕೆ ಈಡೇರಿಕೆಗೆ ಪಿಯು ಶಿಕ್ಷಕರ ಆಗ್ರಹ
ಬೆಂಗಳೂರು : ಟನಲ್ ವಿರುದ್ಧ ನಾಗರಿಕರ ಸಹಿ ಸಂಗ್ರಹ