ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಇನ್ನು ಮುಂದೆ ಸರ್ಕಾರವೇ ವೇತನ ನೀಡಲಿದ್ದು, ಇದರಿಂದ ದೇವಸ್ಥಾನಗಳ ಆದಾಯ ಕಡಿತವಾಗುವುದು ತಪ್ಪಲಿದೆ.
ಮಯೂರ್ ಹೆಗಡೆ
ಬೆಂಗಳೂರು : ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಇನ್ನು ಮುಂದೆ ಸರ್ಕಾರವೇ ವೇತನ ನೀಡಲಿದ್ದು, ಇದರಿಂದ ದೇವಸ್ಥಾನಗಳ ಆದಾಯ ಕಡಿತವಾಗುವುದು ತಪ್ಪಲಿದೆ.
ಇಷ್ಟು ವರ್ಷ ದೇವಸ್ಥಾನಗಳು ತಮ್ಮ ಹುಂಡಿಯಿಂದ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಸಂಬಳ ಭರಿಸುತ್ತಿದ್ದವು. ಸಂಬಳದ ಹಣ ದೇಗುಲದ ಆದಾಯದಿಂದ ಕಡಿತವಾಗುತ್ತಿತ್ತು. ಇದರಿಂದ ದೇವಸ್ಥಾನದ ಅಭಿವೃದ್ಧಿ, ಧಾರ್ಮಿಕ ಕಾರ್ಯಗಳಿಗೂ ತೊಂದರೆ ಆಗುತ್ತಿತ್ತು. ಆದರೆ, ಇನ್ನು ಮುಂದೆ ರಾಜ್ಯದ ಸಂಚಿತ ನಿಧಿಯಿಂದ ಅಧಿಕಾರಿಗಳ ಸಂಬಳ ನೀಡಲು ಸರ್ಕಾರ ನಿರ್ಧರಿಸಿದ್ದು, ದೇವಸ್ಥಾನಗಳಿಗೆ ಉಳಿತಾಯ ಆಗಲಿದೆ.
ರಾಜ್ಯದಲ್ಲಿ ಗ್ರೇಡ್ ‘ಎ’ 205, ಗ್ರೇಡ್ ‘ಬಿ’ 193 ದೇವಸ್ಥಾನಗಳಿವೆ. ಇವುಗಳಲ್ಲಿ ಗ್ರೂಪ್ ‘ಎ’ ಹಿರಿಯ ಶ್ರೇಣಿಯ 10, ಕಿರಿಯ ಶ್ರೇಣಿ 23, ಅಧೀಕ್ಷಕರು 39, ಪ್ರಥಮ ದರ್ಜೆ ಸಹಾಯಕರು 23, ದ್ವಿತೀಯ ದರ್ಜೆ ಸಹಾಯಕರು 19, ಗ್ರೂಪ್ ‘ಡಿ’ 5 ಸೇರಿ ಒಟ್ಟಾರೆ 131 ಸರ್ಕಾರಿ ಅಧಿಕಾರಿಗಳಿದ್ದಾರೆ. ಇವರೆಲ್ಲರ ಮೂಲವೇತನ, ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ ಹಾಗೂ ಇತರೆ ಭತ್ಯೆ ಸೇರಿ ವಾರ್ಷಿಕ ₹12.16 ಕೋಟಿ ಖರ್ಚಾಗಲಿದೆ ಎಂದು ಮುಜರಾಯಿ ಇಲಾಖೆ ಮೂಲಗಳು ತಿಳಿಸಿವೆ.
ಈ ವೇತನವನ್ನು ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದ ಪಾವತಿಸಲು ಆರ್ಥಿಕ ಇಲಾಖೆ ಸಹಮತ ನೀಡಿದೆ. ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳು ನೌಕರರಿಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಡಿ ವೇತನಕ್ಕೆ ಅನುದಾನ ಒದಗಿಸಲಾಗುವುದು. ಅಧಿಕಾರಿ, ಸಿಬ್ಬಂದಿಯ ವಿವರವನ್ನು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ( ಎಚ್‌ಆರ್‌ಎಂಎಸ್)ಯಲ್ಲಿ ದಾಖಲಿಸುವಂತೆ ಇಲಾಖೆ ತಿಳಿಸಿದೆ. ಬಳಿಕ ಹೆಚ್ಚುವರಿ ಅನುದಾನದ ಅಗತ್ಯವನ್ನು ಏಪ್ರಿಲ್-ಮೇ ತಿಂಗಳಲ್ಲಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಈ ಸಂಬಂಧ ವಿವರ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಕಂದಾಯ ಇಲಾಖೆ (ಧಾರ್ಮಿಕ ದತ್ತಿ ಇಲಾಖೆ) ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ ಆಗಮಿಕರ, ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಎನ್. ದೀಕ್ಷಿತ್ ಮಾತನಾಡಿ, ಅಧಿಕಾರಿಗಳ ಸಂಬಳ, ವಿದ್ಯುತ್ ಬಿಲ್, ನೀರಿನ ಬಿಲ್ ಭರಿಸಲು ದೇವಸ್ಥಾನದ ಆದಾಯದಲ್ಲಿ ಸುಮಾರು ಶೇ.35ರವರೆಗೆ ಕಡಿತವಾಗುತ್ತಿತ್ತು. ಇದೀಗ ಅಧಿಕಾರಿಗಳ ವೇತನ ಮೊತ್ತ ಉಳಿತಾಯವಾಗಲಿದೆ. ನಮ್ಮ ಹತ್ತಾರು ವರ್ಷದ ಹಿಂದಿನ ಬೇಡಿಕೆ ಈಡೇರಿದಂತಾಗಿದೆ. ದೇವಸ್ಥಾನದ ಆದಾಯವನ್ನು ಅಭಿವೃದ್ಧಿ ಸೇರಿ ಇತರೆ ಕೆಲಸ ಕಾರ್ಯಗಳಿಗೆ ಬಳಸಲು ಅನುಕೂಲವಾಗಲಿದೆ ಎಂದರು.
ದೇವಸ್ಥಾನದಲ್ಲಿನ ಅಧಿಕಾರಿಗಳ ವೇತನ, ಭತ್ಯೆಯನ್ನು ರಾಜ್ಯದ ಸಂಚಿತ ನಿಧಿಯಿಂದ ನೀಡಲು ಆದೇಶವಾಗಿದೆ. ಇದರಿಂದ ದೇವಸ್ಥಾನಗಳಿಗೆ ಉಳಿತಾಯವಾಗಲಿದೆ.
-ರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ.