ಗ್ಯಾರಂಟಿ ಯೋಜನೆಗಳ ಜಾರಿಗಾಗಿ ರಾಜ್ಯ ಸರ್ಕಾರ ಹಲವು ಮೂಲಗಳ ಆದಾಯ ಬಳಸಿಕೊಳ್ಳುತ್ತಿದ್ದು, ಅದರಲ್ಲಿ ಶೇಕಡ 20ಕ್ಕೂ ಹೆಚ್ಚಿನ ಮೊತ್ತವನ್ನು ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನದಿಂದ ಸರ್ಕಾರ ಬಳಸಿಕೊಂಡಿದೆ.
ಗಿರೀಶ್ ಗರಗ
ಬೆಂಗಳೂರು : ಗ್ಯಾರಂಟಿ ಯೋಜನೆಗಳ ಜಾರಿಗಾಗಿ ರಾಜ್ಯ ಸರ್ಕಾರ ಹಲವು ಮೂಲಗಳ ಆದಾಯ ಬಳಸಿಕೊಳ್ಳುತ್ತಿದ್ದು, ಅದರಲ್ಲಿ ಶೇಕಡ 20ಕ್ಕೂ ಹೆಚ್ಚಿನ ಮೊತ್ತವನ್ನು ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನದಿಂದ ಸರ್ಕಾರ ಬಳಸಿಕೊಂಡಿದೆ.
ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಪರಿಶಿಷ್ಟ ಜಾತಿ/ಪಂಗಡಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೀಸಲಿಟ್ಟ ಅನುದಾನ ಖೋತಾ ಮಾಡಲಾಗಿದೆ. ಪರಿಶಿಷ್ಟ ಜಾತಿ/ಪಂಗಡ ಸಮುದಾಯದವರ ಅಭಿವೃದ್ಧಿಗೆ ಸಂಬಂಧಿಸಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಅಡಿ ರಾಜ್ಯ ಬಜೆಟ್‌ನ ಯೋಜನಾ ವೆಚ್ಚದಲ್ಲಿ ಶೇ.24.1ರನ್ನು ಪರಿಶಿಷ್ಟ ಜಾತಿ/ಪಂಗಡ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗುತ್ತದೆ. ಆದರೆ, ಕಳೆದೆರಡು ವರ್ಷಗಳಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ ಶೇ.30ಕ್ಕೂ ಹೆಚ್ಚಿನ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗಿದೆ.
1.46 ಕೋಟಿ ಫಲಾನುಭವಿಗಳು:
ರಾಜ್ಯ ಸರ್ಕಾರದ ಮಾಹಿತಿಯಂತೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪೈಕಿ 2023-24ರಲ್ಲಿ 1.28 ಕೋಟಿ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ಫಲಾನುಭವಿಗಳಿದ್ದರು. ಅದೇ 2024-25ರಲ್ಲಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ಪಲಾನುಭವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿ 1.46 ಕೋಟಿಗೆ ತಲುಪಿತ್ತು. ಹೀಗಾಗಿ ಅವರಿಗೆ ಗ್ಯಾರಂಟಿ ಯೋಜನೆಗಳ ಫಲ ನೀಡುವುದಕ್ಕಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಆದರೆ, 5 ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿಗಳಲ್ಲಿ ಎಸ್ಸಿ/ಎಸ್ಟಿ ಫಲಾನುಭವಿಗಳ ನಿಖರ ಸಂಖ್ಯೆ ದೊರೆಯಲಿದೆ. ಆದರೆ, ಶಕ್ತಿ ಯೋಜನೆಯಲ್ಲಿ ಎಸ್ಸಿ/ಎಸ್ಟಿ ಫಲಾನುಭವಿಗಳನ್ನು ಗುರುತಿಸುವುದು ಕಷ್ಟ. ಆದರೂ, ಶಕ್ತಿ ಯೋಜನೆಗೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ನೀಡಲಾಗಿದೆ.
₹25 ಸಾವಿರ ಕೋಟಿ ಬಳಕೆ:
ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ 2023-24ರಲ್ಲಿ ₹11,144 ಕೋಟಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಳಸಿಕೊಳ್ಳಲಾಗಿದೆ. ಅದೇ 2024-25ರಲ್ಲಿ ₹14,282 ಕೋಟಿ ಏರಿಕೆಯಾಗಿದೆ. ಅದರಲ್ಲಿ ಗೃಹಲಕ್ಷ್ಮೀ ಯೋಜನೆಗಾಗಿ ಅತಿಹೆಚ್ಚು ಹಣ ಬಳಕೆ ಮಾಡಿಕೊಳ್ಳಲಾಗಿದ್ದು, ಎರಡೂ ವರ್ಷದಿಂದ ₹12,956 ಕೋಟಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಿಂದ ಪಡೆದುಕೊಳ್ಳಲಾಗಿದೆ.
2025-26ಕ್ಕೆ ₹14,488 ಕೋಟಿ?:
ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಳಸಿಕೊಳ್ಳುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದರ ನಡುವೆಯೂ 2025-26ರಲ್ಲೂ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಳಸಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅದರಂತೆ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿರುವ 5 ಇಲಾಖೆಗಳಿಂದ 2025-26ನೇ ಸಾಲಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಿಂದ ₹14,488 ಕೋಟಿ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಳಕೆ ವಿವರ: (ಕೋಟಿ ರು.ಗಳಲ್ಲಿ)
ಗ್ಯಾರಂಟಿ ಯೋಜನೆ 2023-24 2024-25
ಗೃಹಲಕ್ಷ್ಮೀ 5,075 7881.91
ಶಕ್ತಿ 812 1,451.45
ಅನ್ನಭಾಗ್ಯ 2,779.5 2,187.89
ಗೃಹಜ್ಯೋತಿ 2,410 2,585.93
ಯುವನಿಧಿ 67.5 175.5
ಒಟ್ಟು 11,144 14,282.68
2024-25ನೇ ಸಾಲಿನ ಫಲಾನುಭವಿಗಳ ವಿವರ
ಯೋಜನೆ ಸಂಖ್ಯೆ
ಗೃಹಲಕ್ಷ್ಮೀ 31.22 ಲಕ್ಷ
ಅನ್ನಭಾಗ್ಯ 1.01 ಕೋಟಿ
ಯುವನಿಧಿ 44,538
ಗೃಹ ಜ್ಯೋತಿ 13,90 ಲಕ್ಷ
ಒಟ್ಟು 1.46 ಕೋಟಿ