ದುಬೈಯಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ (33) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಬೆಂಗಳೂರು : ದುಬೈಯಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ (33) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಮೂರು ದಿನಗಳ ಡಿಆರ್‌ಐ ಪೊಲೀಸರ ಸುಪರ್ದಿಯ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯದ ಮುಂದೆ ರನ್ಯಾ ರಾವ್ ಹಾಜರುಪಡಿಸಲಾಗಿತ್ತು. ಮತ್ತೆ ತಮ್ಮ ಸುಪರ್ದಿಗೆ ಡಿಆರ್‌ಐ ಅಧಿಕಾರಿಗಳು ಕೇಳದ ಕಾರಣ14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರಾದ ವಿಶ್ವನಾಥ್.ಸಿ ಗೌಡರ್ ಅವರು ಆದೇಶಿಸಿದರು.
ಮಾನಸಿಕ ಹಿಂಸೆ, ರನ್ಯಾ ಕಣ್ಣೀರು:
ನ್ಯಾಯಾಂಗ ಬಂಧನಕ್ಕೆ ನೀಡುವ ಮುನ್ನ ಕಟಕಟೆಯಲ್ಲಿ ನಿಂತ ರನ್ಯಾ ಅವರನ್ನು ಉದ್ದೇಶಿಸಿ, ‘ಮೂರು ದಿನಗಳಲ್ಲಿ ಕಸ್ಟಡಿಯಲ್ಲಿ ಡಿಆರ್ ಐ ಅಧಿಕಾರಿಗಳು ನಿಮಗೆ ದೈಹಿಕ ಮತ್ತು ಮಾನಸಿಕವಾಗಿ ಏನಾದರೂ ಕಿರುಕುಳ ನೀಡಿದ್ದಾರೆಯೇ?’ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಈ ವೇಳೆ ರನ್ಯಾ ‘ಡಿಆರ್‌ಐ ಅಧಿಕಾರಿಗಳು ನನಗೆ ದೈಹಿಕವಾಗಿ ಕಿರುಕುಳ ನೀಡಿಲ್ಲ. ಆದರೆ, ಮೌಖಿಕವಾಗಿ ಬೆದರಿಕೆ ಹಾಕುವ ಮೂಲಕ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ನಮ್ಮ ಪ್ರಶ್ನೆಗಳಿಗೆ ನೀನು ಉತ್ತರಿಸದೆ ಹೋದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ಬೈದು ಬೆದರಿಕೆ ಹಾಕಿದ್ದಾರೆ’ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದರು.
ಅದಕ್ಕೆ ತನಿಖಾಧಿಕಾರಿಗಳು ಉತ್ತರಿಸಿ, ‘ವಿಚಾರಣೆಯ ಪ್ರತಿ ಕ್ಷಣವನ್ನೂ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಆಕೆ ಹಲವು ಬಾರಿ ವಿದೇಶಕ್ಕೆ ಹೋಗಿರುವುದನ್ನು ಸಾಬೀತುಪಡಿಸುವ ಡಿಜಿಟಲ್ ಸಾಕ್ಷ್ಯಾಧಾರ ಮುಂದಿಟ್ಟು ಪ್ರಶ್ನಿಸಲಾಗಿದೆ. ಪ್ರಶ್ನೆ ಕೇಳುವುದೇ ಹಿಂಸೆ ಎಂದರೆ ಹೇಗೆ, ಆಕೆ ನಮ್ಮ ತನಿಖೆಗೆ ಸಹಕರಿಸಲಿಲ್ಲ’ ಎಂದು ಸಮಜಾಯಿಷಿ ನೀಡಿದರು.
ಆಗ ರನ್ಯಾ ಪ್ರತಿಕ್ರಿಯಿಸಿ, ‘ನಾನು ಎಲ್ಲ ರೀತಿಯಲ್ಲಿಯೂ ತನಿಖೆಗೆ ಸಹಕಾರ ನೀಡಿದ್ದೇನೆ’ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.
ಅವರ ಮಾತು ಕೇಳಿದ ನ್ಯಾಯಾಧೀಶರು, ‘ಈ ವಿಚಾರದಲ್ಲಿ ಎರಡೂ ಕಡೆಯವರ ವಾದ ಆಲಿಸಲಾಗುವುದು. ವಿಚಾರಣೆಯ ವಿಡಿಯೋ ರೆಕಾರ್ಡಿಂಗ್ ಪರಿಶೀಲಿಸಲಾಗುವುದು. ಒಂದು ವೇಳೆ ಬಲವಂತದಿಂದ ಅಥವಾ ಬೆದರಿಕೆಯಿಂದ ಹೇಳಿಕೆ ತೆಗೆದುಕೊಂಡಿರುವುದು ಕಂಡು ಬಂದರೆ, ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.