;Resize=(412,232))
ಮೈಸೂರು: ‘ಕನ್ನಡ ಭಾಷೆ ಮತ್ತು ನಾಡಧ್ವಜಕ್ಕೆ ಗೌರವ, ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಅಗತ್ಯ ಕಾಯ್ದೆ ರೂಪಿಸಲಾಗುವುದು. ಅಲ್ಲದೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿಯೇ 2027ಕ್ಕೆ ಮೂರು ದಿನಗಳ ವಿಶ್ವಕನ್ನಡ ಸಮ್ಮೇಳನ ಆಯೋಜಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.
1985ರಲ್ಲಿ ಮೈಸೂರಲ್ಲೇ ಮೊದಲ ಬಾರಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗಿತ್ತು. ನಂತರ 2011ರಲ್ಲಿ ಬೆಳಗಾವಿಯಲ್ಲಿ 2ನೇ ಸಮ್ಮೇಳನ ನಡೆದಿತ್ತು ಹಾಗೂ ಐಶ್ವರ್ಯ ರೈ ಬಚ್ಚನ್ ಮುಖ್ಯ ಅತಿಥಿಯಾಗಿದ್ದರು. ಅದಾದ ನಂತರ ನಡೆಯುವ 3ನೆ ಸಮ್ಮೇಳನ ಇದಾಗಿದೆ.
ನಗರದಲ್ಲಿ ಬುಧವಾರ ಡಾ.ಎಂ.ವೀರಪ್ಪ ಮೊಯ್ಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ (ಸಂಪುಟ - 4)- ಗದ್ಯ ಮಹಾಕಾವ್ಯ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದ ಡಿಕೆಶಿ ಈ ಘೋಷಣೆ ಮಾಡಿದರು.
‘ಮೊಯ್ಲಿ ಅವರ ಸಾಹಿತ್ಯಿಕ ಹಾಗೂ ರಾಜಕೀಯ ಕೊಡುಗೆಗಳು ಅಪಾರ. 1985ರಲ್ಲಿ ನನಗೆ, ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಯುವ ನಾಯಕರಿಗೆ ರಾಜೀವ್ ಗಾಂಧಿ ಅವರೊಂದಿಗೆ ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರಕಿಸಿಕೊಡುವಲ್ಲಿ ವೀರಪ್ಪ ಮೊಯ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ಜೀವನದಲ್ಲಿ ಹಲವು ಯುವ ನಾಯಕರಿಗೆ ಅವಕಾಶ ಕಲ್ಪಿಸಿದ ಅವರು, ಇಂದು ಸಾಹಿತ್ಯ ಲೋಕದಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿದ್ದಾರೆ ಎಂದು ಸ್ಮರಿಸಿದರು. ಅವರಿಗೆ ಜ್ಞಾನಪೀಠ ಸೇರಿದಂತೆ ಇನ್ನಷ್ಟು ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳು ಲಭಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ’ ಎಂದರು.
ಕನ್ನಡ ಭಾಷೆ ಮತ್ತು ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ವಿಚಾರವಾಗಿಯೂ ಸರ್ಕಾರ ಬದ್ಧವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಕನ್ನಡ ಧ್ವಜದ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಅಗತ್ಯ ಕಾನೂನು ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಂವಿಧಾನದಲ್ಲಿ ಇದಕ್ಕೆ ಯಾವುದೇ ನಿರ್ಬಂಧವಿಲ್ಲ. ಕನ್ನಡ ಭಾಷೆ ಮತ್ತು ಕನ್ನಡ ಬಾವುಟಕ್ಕೆ ವಿಶೇಷ ಗುರುತು ಹಾಗೂ ಗೌರವ ದೊರಕಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ ಬದ್ಧತೆಯಾಗಿದೆ ಎಂದು ಹೇಳಿದರು.
ಸೋನಿಯಾ ಗಾಂಧಿ ಅವರ ಆತ್ಮಕಥೆ ಈಗ ದೇಶದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ನಾನು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಒಂದಷ್ಟು ಅನುಭವಗಳನ್ನು ಆಧರಿಸಿ ‘ನೀರಿನ ಹೆಜ್ಜೆ’ ಎಂಬ ಪುಸ್ತಕ ಬರೆದು ಸಿದ್ದರಾಮಯ್ಯ ಅವರಿಂದ ಬಿಡುಗಡೆ ಮಾಡಿಸಿದ್ದೆ. ಮಹಾತ್ಮ ಗಾಂಧೀಜಿ ಅವರ ನೂರು ವರ್ಷಗಳ ಇತಿಹಾಸ ಮತ್ತು ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ ಕಾರ್ಯಕ್ರಮದ ಕುರಿತು ಮತ್ತೊಂದು ಪುಸ್ತಕ ಸಿದ್ಧಪಡಿಸಿದ್ದು, ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.