ಬಿಡಿಎ ಸ್ವಾಧೀನದ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ದೀಪಾವಳಿ ಆಫರ್‌

Published : Nov 10, 2026, 10:17 AM IST
BDA

ಸಾರಾಂಶ

ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮ ಮಾಡಿಕೊಳ್ಳಲು ಮಾರ್ಗಸೂಚಿ ಮೌಲ್ಯದ ಆಧಾರದ ಮೇಲೆ ವಿಧಿಸಲಾಗುತ್ತಿದ್ದ ಸಕ್ರಮ ಶುಲ್ಕವನ್ನು ಶೇ.50ರಷ್ಟು ಇಳಿಕೆ ಮಾಡಿ ಸಾರ್ವಜನಿಕರಿಗೆ ‘ಭೂ ಖಾತರಿ’ ನೀಡುವ ಐತಿಹಾಸಿಕ ತೀರ್ಮಾನ ಸರ್ಕಾರ ಕೈಗೊಂಡಿದೆ

ಬೆಂಗಳೂರು : ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮ ಮಾಡಿಕೊಳ್ಳಲು ಮಾರ್ಗಸೂಚಿ ಮೌಲ್ಯದ ಆಧಾರದ ಮೇಲೆ ವಿಧಿಸಲಾಗುತ್ತಿದ್ದ ಸಕ್ರಮ ಶುಲ್ಕವನ್ನು ಶೇ.50ರಷ್ಟು ಇಳಿಕೆ ಮಾಡಿ ಸಾರ್ವಜನಿಕರಿಗೆ ‘ಭೂ ಖಾತರಿ’ ನೀಡುವ ಐತಿಹಾಸಿಕ ತೀರ್ಮಾನ ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ಬಿಡಿಎ ಕೇಂದ್ರ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

2008ಕ್ಕಿಂತ ಮುಂಚಿತವಾಗಿ ಬಿಡಿಎ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಮನೆ ಅಥವಾ ನಿವೇಶನ ನಿರ್ಮಿಸಿಕೊಂಡಿರುವ ಆಸ್ತಿಗಳನ್ನು ಸಕ್ರಮಗೊಳಿಸಲು ಈ ಹಿಂದೆ ನಿಗದಿಪಡಿಸಿದ್ದ ದರದಲ್ಲಿ ಶೇ.50ರಷ್ಟು ಇಳಿಕೆ ಮಾಡಲಾಗಿದೆ. ಈ ಯೋಜನೆ ಸೌಲಭ್ಯ ಪಡೆಯಲು ಮುಂದಿನ ಡಿ.17 ಕೊನೆಯ ದಿನವಾಗಿದ್ದು, ಈ ನಿಯಮವು ಕನಿಷ್ಠ 12 ವರ್ಷಗಳಿಂದ ವಾಸವಿರುವವರಿಗೆ ಅನ್ವಯವಾಗಲಿದೆ. ಜನರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ಕಾಯ್ದೆ ತಿದ್ದುಪಡಿ ತಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಡಿ.17ರೊಳಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇದಾದ ಬಳಿಕ ಯಾವುದೇ ಕಾರಣಕ್ಕೂ ದಿನಾಂಕ ವಿಸ್ತರಿಸುವುದಿಲ್ಲ. ಅಧಿಕಾರಿಗಳು ಸರ್ಕಾರಿ ಜಾಗ ತೆರವಿಗೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆ ಸೇರಿ ವಿವಿಧ ಬಡಾವಣೆಗಳಿಗೆ ಯಾವುದೇ ವ್ಯಾಜ್ಯವಿಲ್ಲದೆ ಸ್ವಯಂಪ್ರೇರಿತರಾಗಿ ಭೂಮಿ ಬಿಟ್ಟುಕೊಟ್ಟ ರೈತರಿಗೆ (ಪ್ರತಿ ಎಕರೆಗೆ ಒಂದು 30x40 ನಿವೇಶನ) ಬಾಕಿ ಉಳಿದಿದ್ದ ಪ್ರೋತ್ಸಾಹಕ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೂ ಡಿ.17 ರೊಳಗೆ ಅರ್ಜಿ ಸಲ್ಲಿಸಬೇಕು ಎಂದರು. ಬಿಡಿಎ ನಿವೇಶನದ ಪಕ್ಕದಲ್ಲಿ ಉಳಿದಿರುವ 600 ಚದರ ಅಡಿವರೆಗಿನ ಹೆಚ್ಚುವರಿ ಸರ್ಕಾರಿ ಜಾಗವನ್ನು (ಮಾರ್ಜಿನಲ್ ಲ್ಯಾಂಡ್) ಮಾರ್ಗಸೂಚಿ ದರದಲ್ಲಿ ಪಕ್ಕದ ನಿವೇಶನದಾರರಿಗೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೂ ಡಿ.17ರೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದರು.

20000ಕ್ಕೂ ಹೆಚ್ಚು ಶುದ್ಧ ಕ್ರಯಪತ್ರ

ಈ ಹಿಂದೆ ಸಿಐಟಿಬಿ ಹಾಗೂ ಬಿಡಿಎಯಿಂದ ಲೀಸ್ ಕಮ್ ಸೇಲ್ ಡೀಡ್ (ಗುತ್ತಿಗೆ ಆಧಾರಿತ ಮಾರಾಟ ಪತ್ರ) ಪಡೆದು, 10 ವರ್ಷಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಪಕ್ಕಾ ಕ್ರಯಪತ್ರ ಮಾಡಿಸಿಕೊಳ್ಳದ ಸುಮಾರು 20,000ಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಶುದ್ಧ ಕ್ರಯಪತ್ರ ಮಾಡಿಕೊಡಲಾಗುವುದು ಎಂದರು.

ಅಕ್ರಮ-ಸಕ್ರಮ ಶುಲ್ಕದ ವಿವರ

20x30ರವರೆಗೆ ಶೇ.5 (ಹಿಂದಿನ ದರ ಶೇ.10), 20x30 ರಿಂದ 30x40 ವರೆಗೆ: ಶೇ.12.5 (ಶೇ. 25), 30x40 ರಿಂದ 40x60 ವರೆಗೆ ಶೇ.20 (ಶೇ.40), 40x60 ರಿಂದ 50x80 ವರೆಗೆ ಶೇ.25 (ಶೇ.50) ಮತ್ತು ದಂಡ ವಿಧಿಸುವ ಅಧಿಸೂಚನೆ ಚಾಲ್ತಿಯಲ್ಲಿದೆ. ಈ ಯೋಜನೆಯ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣ ಗಣಕೀಕೃತಗೊಳಿಸುವ ವ್ಯವಸ್ಥೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.

ಯಾವುದಕ್ಕೆ ಈ ಸೌಲಭ್ಯ ಅನ್ವಯಿಸಲ್ಲ

ಉದ್ಯಾನವನ, ಆಟದ ಮೈದಾನ, ಮುಕ್ತ ಸ್ಥಳ, ನಾಗರಿಕ ಸೌಕರ್ಯಗಳಿಗೆ ಮೀಸಲಾದ ಜಾಗ, ರಸ್ತೆ ಅಥವಾ ಪ್ರಸ್ತಾವಿತ ರಿಂಗ್‌ ರಸ್ತೆ ಜೋಡಣೆಗೆ ಅಡ್ಡಿಯಾಗುವ ಜಾಗ ರಾಷ್ಟ್ರೀಯ ಹೆದ್ದಾರಿ, ಬೈಪಾಸ್ ರಸ್ತೆ, ಮಾಸ್ ರ್‍ಯಾಪಿಡ್‌ ಟ್ರಾನ್ಸಿಟ್ ಯೋಜನೆಗಳಿಗೆ ಸಂಬಂಧಿಸಿದ ಜಾಗ, ಮಳೆನೀರು ಚರಂಡಿ, ಕೆರೆ ಪ್ರದೇಶ, ನದಿ ಪಾತ್ರ, ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಭಾಗ, ನ್ಯಾಯಾಲಯದ ಮಧ್ಯಂತರ ಆದೇಶದಿಂದ ವಿವಾದಿತ ಅಥವಾ ಅಡಚಣೆಯಾದ ಸ್ವಾಧೀನ ಪ್ರದೇಶಗಳಲ್ಲಿನ ಕಟ್ಟಡಗಳಿಗೆ ಅಕ್ರಮ-ಸಕ್ರಮ ಯೋಜನೆ ಅನ್ವಯಿಸುವುದಿಲ್ಲ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎಥೆನಾಲ್ ವಿಚಾರದಲ್ಲಿ ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ: ಜೋಶಿ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ