ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುಡುಗು, ಆಲಿಕಲ್ಲು ಮಳೆ : ವೃದ್ಧೆ ಬಲಿ

ಸಾರಾಂಶ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ ಮುಂದುವರೆದಿದ್ದು, ಸೋಮವಾರ ಹಲವೆಡೆ ಗುಡುಗು, ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಚಿಕ್ಕಬಳ್ಳಾಪು ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಸಿಡಿಲು ಬಡಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ ಮುಂದುವರೆದಿದ್ದು, ಸೋಮವಾರ ಹಲವೆಡೆ ಗುಡುಗು, ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಚಿಕ್ಕಬಳ್ಳಾಪು ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಸಿಡಿಲು ಬಡಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ತಾಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಗುಡುಗು ಸಿಡಿಲು ಗಾಳಿಯ ಆರ್ಭಟದೊಂದಿಗೆ ಭಾರಿ ಮಳೆಯಾಗಿದೆ. ಗಾಳಿ ಆರ್ಭಟಕ್ಕೆ ವಿದ್ಯುತ್ ಲೈನ್, ರಸ್ತೆ ಮೇಲೆ ಮರ ಉರುಳಿಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಕುಂಚೇಬೈಲು ಬಳಿ ವಿದ್ಯುತ್ ಲೈನ್ ಮೇಲೆ ಮರಗಳು ಉರುಳಿಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬಸರೀಕಟ್ಟೆಯಲ್ಲಿ ಮನೆ ಮೇಲೆ ಮರ ಬಿದ್ದು ಭಾರಿ ಹಾನಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಮೂಲ್ಕಿ, ಮೂಡುಬಿದಿರೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಾದ್ಯಂತ ಗುಡುಗು, ಸಿಡಿಲು ಸಮೇತ ಮಳೆಯಾಗಿದ್ದು, ಸಂಜೆ ಮನೆಯ ವರಾಂಡದಲ್ಲಿ ಸಿಡಿಲು ಬಡಿದು ನಟವೋಲ್ಲ ರಾಜಮ್ಮ (70) ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಸುರಿದ ಮಳೆಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ನಗರದ ಕಡಿಯಾಳಿ ವಾರ್ಡ್‌ನಲ್ಲಿ ಮನೆ ಮೇಲೆ ಆಲದ ಮರ ಉರುಳಿ ಬಿದ್ದು, ಗಂಡ, ಹೆಂಡತಿಗೆ ಗಾಯಗಳಾಗಿವೆ. ಮೂಡಬೆಟ್ಟು ವಾರ್ಡ್‌ನಲ್ಲಿ ಮರ ಬಿದ್ದು 3 ಮನೆಗಳಿಗೆ ಹಾನಿಯಾಗಿದೆ.

ದಕ್ಷಿಣ ಕನ್ನಡದ ಮೂಡುಬಿದಿರೆ ತಾಲೂಕಿನಾದ್ಯಂತ ಗಾಳಿ ಮಳೆಯಿಂದಾಗಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಕೆಲವು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಲಕ್ಷಾಂತರ ರು.ನಷ್ಟವಾಗಿದೆ. ಶಿರ್ತಾಡಿ-ಹೊಸ್ಮಾರು ರಾಜ್ಯ ಹೆದ್ದಾರಿಯ ಮಾಂಟ್ರಾಡಿಯಲ್ಲಿ ಹೆದ್ದಾರಿಗೆ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ಹೆದ್ದಾರಿ ಸಂಚಾರ ಬಂದ್ ಆಗಿದೆ.

Share this article