ಎಸ್‌ಐಆರ್‌ ನಮೂನೆ ವಾಪಸ್ ಕೊಡಲು ಇಂದೇ ಕೊನೆ ದಿನ

Published : Aug 17, 2026, 04:45 AM IST
election commission

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಮತದಾರರು ಗಣತಿ ನಮೂನೆ ವಾಪಸ್‌ ನೀಡಲು ಹಾಗೂ ರೋಲ್‌ ಬ್ಯಾಕ್‌ಗೆ ಸೋಮವಾರ ಕಡೆಯ ದಿನವಾಗಿದೆ.

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಮತದಾರರು ಗಣತಿ ನಮೂನೆ ವಾಪಸ್‌ ನೀಡಲು ಹಾಗೂ ರೋಲ್‌ ಬ್ಯಾಕ್‌ಗೆ ಸೋಮವಾರ ಕಡೆಯ ದಿನವಾಗಿದೆ.

ಈಗಾಗಲೇ ಬೂತ್‌ ಮಟ್ಟದ ಅಧಿಕಾರಿಯಿಂದ(ಬಿಎಲ್‌ಒ) ಗಣತಿ ನಮೂನೆ ಪಡೆದಿರುವ ಮತದಾರರು ಮಾಹಿತಿ ಭರ್ತಿ ಮಾಡಿ ಸಹಿ ಮಾಡಿ ಸೋಮವಾರ ಸಂಜೆ 4 ಗಂಟೆಯೊಳಗೆ ಸಂಬಂಧಿತ ಬಿಎಲ್‌ಒಗೆ ವಾಪಸ್‌ ನೀಡಬೇಕು.

ಅಂತೆಯೇ ಎಸ್ಐಆರ್‌ ವೇಳೆ ಎ-ಆಬ್ಸೆಂಟ್‌, ಎಸ್‌-ಶಿಫ್ಟ್‌, ಡಿ-ಡೆತ್‌, ಡಿ-ಡ್ಯುಪ್ಲಿಕೇಟ್‌, ಒ-ಅದರ್ಸ್‌(ಎಎಸ್‌ಡಿಡಿಒ) ವರ್ಗಕ್ಕೆ ಸೇರಿಸಿರುವ ಅರ್ಹ ಮತದಾರರು ಸಂಬಂಧಿತ ಬಿಎಲ್‌ಒ ಅಥವಾ ಮತದಾರರ ನೋಂದಣಾಧಿಕಾರಿ(ಇಆರ್‌ಒ) ಸಂಪರ್ಕಿಸಿ ತಮ್ಮ ಗಣತಿ ನಮೂನೆ ಪಡೆದು (ರೋಲ್‌ಬ್ಯಾಕ್‌) ಮಾಹಿತಿ ಭರ್ತಿ ಮಾಡಿ ವಾಪಸ್‌ ನೀಡಬೇಕು. ಇಲ್ಲವಾದರೆ, ನಿಮ್ಮ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ ಮತ್ತು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ.

ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟ:

ಬಿಎಲ್‌ಒಗಳು ಅರ್ಹ ಮತದಾರರನ್ನೂ ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಿರುವ ಬಗ್ಗೆ ಆರೋಪಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈವರೆಗೆ ಎರಡು ಬಾರಿ ರಾಜ್ಯದ ಎಸ್‌ಐಆರ್‌ ವೇಳಾಪಟ್ಟಿ ಪರಿಷ್ಕರಿಸಿ ರೋಲ್‌ ಬ್ಯಾಕ್‌ಗೆ ಅವಕಾಶ ನೀಡಿತ್ತು. ಅದರಂತೆ ಮನೆ-ಮನೆ ಭೇಟಿ ಮತ್ತು ರೋಲ್‌ಬ್ಯಾಕ್‌ಗೆ ನೀಡಿದ್ದ ಸಮಯ ಆ.17ರಂದು ಮುಗಿಯಲಿದೆ. ಪರಿಷ್ಕೃತ ವೇಳಾ ಪಟ್ಟಿ ಪ್ರಕಾರ ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಆ.24ರಿಂದ ಸೆ.23ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶವಿದೆ. ಆ.24ರಿಂದ ಅ.22ರ ವರೆಗೆ ನೋಟಿಸ್‌/ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ಎಎಸ್ಡಿಡಿಒ ವರ್ಗದ 1.08 ಕೋಟಿ ಮತದಾರರ ಹೆಸರು ಡಿಲೀಟ್‌!

ರಾಜ್ಯದ ಮತದಾರರ ಪಟ್ಟಿಯಲ್ಲಿ 5,54,32,314 ಮತದಾರರು ಇದ್ದಾರೆ. ಈ ಪೈಕಿ ಎಸ್‌ಐಆರ್‌ ವೇಳೆ ಭಾನುವಾರ ಸಂಜೆ 4 ಗಂಟೆ ವರೆಗೆ ಎ-ಆಬ್ಸೆಂಟ್‌ 15,30,449, ಎಸ್‌-ಪರ್ಮನೆಂಟ್‌ ಶಿಫ್ಟ್‌ 65,62,586 , ಡಿ-ಡೆತ್‌ 16,38,600, ಡಿ-ಡ್ಯುಪ್ಲಿಕೇಟ್‌ 7,07,095, ಒ-ಅದರ್ಸ್‌ 3,95,865 ಸೇರಿ ಒಟ್ಟು 1,08,34,595 (ಶೇ.19.55) ಮತದಾರರನ್ನು ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಲಾಗಿದೆ. ಅಂದರೆ, ಈ ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ. 4,45,97,719 (ಶೇ.80.45) ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಖಚಿತವಾಗಿ ಪ್ರಕಟವಾಗಲಿದೆ.

ಫಾರ್ಮ್‌ 6 ಸಲ್ಲಿಸಿ ಸೇರ್ಪಡೆ

ಈ ಎಎಸ್‌ಡಿಡಿಒ ವರ್ಗದ 1.08 ಕೋಟಿ ಮತದಾರರ ಪೈಕಿ 65.62 ಲಕ್ಷ ಮತದಾರರನ್ನು ಶಾಶ್ವತ ಸ್ಥಳಾಂತರ ಎಂದು ಗುರುತಿಸಲಾಗಿದೆ. ಹೀಗಾಗಿ ಈ ಮತದಾರರು ನಿಗದಿತ ದಾಖಲೆಗಳೊಂದಿಗೆ ಹೊಸದಾಗಿ ಫಾರ್ಮ್‌ 6 ಭರ್ತಿ ಮಾಡಿ ಸಲ್ಲಿಸಿದರೆ, ಸಂಬಂಧಪಟ್ಟ ಇಆರ್‌ಒ ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಿದ್ದಾರೆ. ಈವರೆಗೂ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳದ ಮತದಾರರು ಫಾರ್ಮ್‌ 6 ಭರ್ತಿ ಮಾಡಲು ಅವಕಾಶವಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಲಭ್ಯತೆ ಆಧರಿಸಿ ತ.ನಾಡಿಗೆ ಕಾವೇರಿ ನೀರು : ಸಿಎಂ
ತೆರವಾದ ಸ್ಥಳದಲ್ಲೇ ಮತ್ತೆ ಫುಟ್ಪಾತ್‌ ಒತ್ತುವರಿ!