ರೈತರಿಗೆ ತಂತ್ರಜ್ಞಾನ ಪರಿಚಯಿಸಲು ಡಿಕೆ 2 ಸ್ಕೀಂ

Published : Aug 16, 2026, 10:41 AM IST
DK Shivakumara

ಸಾರಾಂಶ

ರಾಜ್ಯದಲ್ಲಿ ರೈತರಿಗಾಗಿ ಆಧುನಿಕ ತಂತ್ರಜ್ಞಾನ ಪರಿಚಯಿಸಲು ಸರ್ಕಾರ ರೈತ ಚೈತನ್ಯ, ರೈತ ಮಿತ್ರ ಎಂಬ ಎರಡು ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

 ಬೆಂಗಳೂರು : ರಾಜ್ಯದಲ್ಲಿ ರೈತರಿಗಾಗಿ ಆಧುನಿಕ ತಂತ್ರಜ್ಞಾನ ಪರಿಚಯಿಸಲು ಸರ್ಕಾರ ರೈತ ಚೈತನ್ಯ, ರೈತ ಮಿತ್ರ ಎಂಬ ಎರಡು ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ

ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ಆಧುನಿಕ ತಂತ್ರಜ್ಞಾನದ ಶಕ್ತಿಯನ್ನು ರೈತ ಚೈತನ್ಯ ಮೂಲಕ ಪರಿಚಯಿಸಲಾಗುವುದು. ಯೋಜನೆಯಲ್ಲಿ ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಬೆಳೆ ವಿಮೆ ಸಮೀಕ್ಷೆ ನಡೆಸಲಾಗುವುದು. ನೈಜ ಸಮಯದ ಮಾಹಿತಿಯ ಆಧಾರದ ಮೇಲೆ ರೈತರಿಗೆ ಬೆಳೆ, ಕೀಟ ಮತ್ತು ರೋಗದ ಬಾಧೆ ಹಾಗೂ ಮಾರುಕಟ್ಟೆಯ ಬಗ್ಗೆ ನಿಖರ ಮಾಹಿತಿ ನೀಡಲಾಗುವುದು. ಈ ಮಾಹಿತಿಯನ್ನು ಕೃಷಿ ಮಾರುಕಟ್ಟೆಯ ಡಿಜಿಟಲ್ ವ್ಯವಸ್ಥೆಯೊಂದಿಗೆ ಜೋಡಿಸಲಾಗುವುದು ಎಂದರು.

ರೈತ ಮಿತ್ರ ಕಾರ್ಯಕ್ರಮದಲ್ಲಿ ಸಣ್ಣ ರೈತರಿಗೆ ಕೃಷಿ ಯಂತ್ರಗಳನ್ನು ಬಾಡಿಗೆಗೆ ಪಡೆಯುವ ಅವಕಾಶ ನೀಡಲಾಗುವುದು. ಟ್ರಾಕ್ಟರ್, ರೋಟವೇಟರ್, ಟಿಲ್ಲರ್ ಹಾಗೂ ಸೀಡ್ ಡ್ರಿಲ್‌ಗಳನ್ನು ಬಾಡಿಗೆಗೆ ನೀಡಲಾಗುವುದು. ಮೂರು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಬಾಡಿಗೆ ಶುಲ್ಕದ ಮೇಲೆ ಶೇ 50 ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ಹೇಳಿದರು.

5,200 ಕೋಟಿ ರುಪಾಯಿಗಳ ಹೂಡಿಕೆ

ಗ್ರಾಮೀಣ ಭಾಗದಲ್ಲಿ ಪ್ರಗತಿ ಪಥ ಯೋಜನೆಯಡಿ 5,200 ಕೋಟಿ ರುಪಾಯಿಗಳ ಹೂಡಿಕೆಯೊಂದಿಗೆ 7,100 ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದೇ ರೀತಿ ಕಲ್ಯಾಣ ಪಥ ಯೋಜನೆಯಡಿ ಕಲ್ಯಾಣ ಕರ್ನಾಟಕದಲ್ಲಿ 1,150 ಕಿಲೋ ಮೀಟರ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಬೆಂಗಳೂರು ಸುತ್ತಮುತ್ತ ಸರ್ಕಾರದ ವಿವಿಧ ಯೋಜನೆಗಳಿಗೆ ಭೂಮಿ ನೀಡಿರುವ ರೈತರಿಗೆ ಇಡೀ ದೇಶದಲ್ಲಿಯೇ ಮಾದರಿಯಾಗುವಂತೆ ಪರಿಹಾರ ನೀಡುತ್ತಿದ್ದೇವೆ. ನಗದು ಪರಿಹಾರ, ಟಿಡಿ ಆರ್, ಅಭಿವೃದ್ಧಿ ಪಡಿಸಿದ ವಾಣಿಜ್ಯ ನಿವೇಶನ, ಎಫ್ ಎಆರ್ ಸೌಲಭ್ಯಗಳನ್ನು ಭೂಮಾಲಿಕರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕದ ಆರ್ಥಿಕತೆಯನ್ನು 2047ರ ವೇಳೆಗೆ 3 ಟ್ರಿಲಿಯನ್ ಡಾಲರ್ (320 ಲಕ್ಷ ಕೋಟಿ ರುಪಾಯಿ)ಗೆ ಏರಿಸುವ ಗುರಿ ಹೊಂದಲಾಗಿದೆ. ಈ ವರ್ಷದಲ್ಲಿಯೇ ಸಹಕಾರ ಸಂಸ್ಥೆಗಳು 38 ಲಕ್ಷ ರೈತರಿಗೆ 30 ಸಾವಿರ ಕೋಟಿ ರುಪಾಯಿ ಸಾಲ ಸೌಲಭ್ಯ ನೀಡಲಿವೆ. ಇವು ರೈತರ ಘನತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಲಿವೆ ಎಂದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎಚ್‌ಎಂಟಿ ವಾಚ್‌ ಖರೀದಿಗೆ 2.5 ಕಿ.ಮೀ. ಕ್ಯೂ!
ಫ್ರೀಡಂ ಹಬ್ಬಕ್ಕೆ ಹರಿದು ಬಂದ ಜನಸಾಗರ