ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಸರ್ಕಾರಕ್ಕೆ 100 ದಿನಗಳು ತುಂಬಿದ ಸಂಭ್ರಮದ ವೇಳೆ ರೈತರು, ಯುವಜನರು, ನೇಮಕಾತಿ, ಕೈಗಾರಿಕಾಭಿವೃದ್ಧಿ ಸೇರಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಘೋಷಿಸಿದ್ದ ತಮ್ಮದೇ ಫ್ಲಾಗ್‌ಶಿಪ್‌ನ ಯೋಜನೆಗಳ ಕುರಿತು ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದರು.

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಸರ್ಕಾರಕ್ಕೆ 100 ದಿನಗಳು ತುಂಬಿದ ಸಂಭ್ರಮದ ವೇಳೆ ರೈತರು, ಯುವಜನರು, ನೇಮಕಾತಿ, ಕೈಗಾರಿಕಾಭಿವೃದ್ಧಿ ಸೇರಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಘೋಷಿಸಿದ್ದ ತಮ್ಮದೇ ಫ್ಲಾಗ್‌ಶಿಪ್‌ನ ಯೋಜನೆಗಳ ಕುರಿತು ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಮೊದಲಿಗೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸರ್ಕಾರದಿಂದಲೇ ಸಣ್ಣ ರೈತರ ಭೂಮಿ ಉಳುಮೆಗೆ ಪ್ರೋತ್ಸಾಹಧನ ನೀಡುವ ಮಹತ್ವಾಕಾಂಕ್ಷಿ ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು. ನ.1ರಿಂದ ಯೋಜನೆ ಜಾರಿಗೆ ಸೂಚಿಸಿದರು.

ಯೋಜನೆ ಜಾರಿಗೆ ‘ಜೆಫಾರ್ಮ್‌’ ಆ್ಯಪ್‌ ಸಿದ್ಧವಾಗಿದೆ. 2.5 ಲಕ್ಷ ಜನ ತಮ್ಮ ಟ್ರ್ಯಾಕ್ಟರ್‌ ಸೇರಿ ವಿವಿಧ ಕೃಷಿ ಯಂತ್ರಗಳ ಮೂಲಕ ಯೋಜನೆಗೆ ಸೇವೆ ಒದಗಿಸಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಮುಖ್ಯಮಂತ್ರಿ ಅವರು, ಕೃಷಿ ಯಾಂತ್ರೀಕರಣ ಉತ್ತೇಜಿಸುವ ಯೋಜನೆ ಇದಾಗಿದೆ. ಬಾಕಿ ಇರುವ ಸಿದ್ಧತೆಯನ್ನು ಮಾಸಾಂತ್ಯದೊಳಗೆ ಪೂರ್ಣಗೊಳಿಸಿ ನವೆಂಬರ್‌ 1ರಿಂದ ಆರಂಭಿಸಲು ಸೂಚನೆ ನೀಡಿದರು.

ಇನ್ನು ಕೃಷಿ ವಲಯದಲ್ಲಿ ಆಧುನಿಕ ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ರೈತರಿಗೆ ನೆರವು ನೀಡುವ ‘ಮುಖ್ಯಮಂತ್ರಿ ರೈತ ಚೈತನ್ಯ ಅಗ್ರಿಟೆಕ್ ಮಿಷನ್ ಯೋಜನೆ’ ವಿಚಾರವಾಗಿ ರೈತರಿಗೆ 25 ಲಕ್ಷ ಎಸ್‌ಎಂಎಸ್‌ ಕಳುಹಿಸಲಾಗಿದೆ. ಜೊತೆಗೆ ರೈತರಿಗೆ ಸುಲಭವಾಗಿ ಅರ್ಥವಾಗುವಂತೆ ವಿಡಿಯೋ ಸಂದೇಶ ಕಳುಹಿಸಲು ಸಿದ್ಧತೆ ನಡೆದಿದೆ. ಚಾಟ್ ಬಾಟ್ ಸಂಯೋಜನೆ ಪ್ರಗತಿಯಲ್ಲಿದ್ದು, ಡ್ರೋನ್/ಉಪಗ್ರಹ ಆಧಾರಿತ ಬೆಳೆ ಅಂದಾಜು ನಡೆಸಲು ಮತ್ತು ಡಿಜಿಟಲ್ ಬೆಳೆ ಸಮೀಕ್ಷೆ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದಷ್ಟು ಬೇಗ ಟೆಂಡರ್‌ ಕರೆಯಲು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ.

ಏನಿದು ನೇಗಿಲ ಯೋಗಿ ಯೋಜನೆ?

ನೇಗಿಲ ಯೋಗಿ ಯೋಜನೆಯಡಿ ರೈತರಿಗೆ ಅನುಕೂಲವಾಗುವಂತೆ ಟ್ರ್ಯಾಕ್ಟರ್‌, ರೋಟೋವೇಟರ್‌, ಟಿಲ್ಲರ್‌, ಬಿತ್ತನೆ, ಕಟಾವು ಯಂತ್ರ ಮತ್ತು ಔಷಧ-ಗೊಬ್ಬರ ಸಿಂಪಡಿಸುವ ಡ್ರೋನ್‌ಗಳನ್ನು ಬಾಡಿಗೆಗೆ ಪಡೆಯಲು ಸರ್ಕಾರ ಸಬ್ಸಿಡಿ ನೀಡುತ್ತದೆ.

ಯೋಜನೆಯಡಿ ಮೊಬೈಲ್‌ ಆ್ಯಪ್‌ ಮತ್ತು ಸ್ಥಳೀಯ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ಯಂತ್ರೋಪಕರಣ ಪೂರೈಕೆದಾರರು ಮತ್ತು ರೈತರನ್ನು ಒಂದೆಡೆ ಜೋಡಿಸಲಾಗುತ್ತದೆ. ಗರಿಷ್ಠ 3 ಎಕರೆ ವರೆಗೆ ಜಮೀನು ಹೊಂದಿರುವ ರೈತರು, ಸ್ಥಳೀಯವಾಗಿ ಲಭ್ಯವಿರುವ ಕೃಷಿ ಯಂತ್ರೋಪಕರಣಗಳನ್ನು ವರ್ಷಕ್ಕೆ ಗರಿಷ್ಠ 4500 ರು.ವರೆಗೆ ಶೇ.50ರಷ್ಟು ಸಹಾಯಧನದೊಂದಿಗೆ ತಕ್ಷಣವೇ ಬಾಡಿಗೆಗೆ ಪಡೆಯಬಹುದು.

- ಡಿಕೆ ಸರ್ಕಾರಕ್ಕೆ 100 ದಿನ ತುಂಬಿದ ಸಂದರ್ಭದಲ್ಲಿ ‘ಸಿಎಂ ನೇಗಿಲ ಯೋಗಿ’ ಯೋಜನೆ ಘೋಷಣೆ

- ಸಣ್ಣ ರೈತರ ಭೂಮಿಗೆ ಉಳುಮೆಗೆ ಸರ್ಕಾರದಿಂದಲೇ ಪ್ರೋತ್ಸಾಹಧನ ನೀಡುವ ಮಹತ್ವದ ಯೋಜನೆ

- ಟ್ರ್ಯಾಕ್ಟರ್‌ ಸೇರಿದಂತೆ ವಿವಿಧ ಕೃಷಿ ಯಂತ್ರ ಒದಗಿಸಲು 2.50 ಲಕ್ಷ ಜನರಿಂದ ಈಗಾಗಲೇ ನೋಂದಣಿ

- ನ.1ರಿಂದ ಯೋಜನೆ ಆರಂಭಿಸುವಂತೆ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ

ಏನಿದು ಯೋಜನೆ?

- ಸಣ್ಣ ರೈತರು ಟ್ರ್ಯಾಕ್ಟರ್‌, ಟಿಲ್ಲರ್‌, ಕಟಾವು ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಸರ್ಕಾರ ಸಬ್ಸಿಡಿ ನೀಡುತ್ತದೆ

- ಗರಿಷ್ಠ 3 ಎಕರೆವರೆಗೆ ಭೂಮಿ ಹೊಂದಿರುವ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ

- ವರ್ಷಕ್ಕೆ ಗರಿಷ್ಠ 4500 ರು.ವರೆಗೆ ಅಥವಾ 50% ಸಹಾಯಧನದೊಂದಿಗೆ ಯಂತ್ರಗಳನ್ನು ಬಾಡಿಗೆಗೆ ಪಡೆಯಬಹುದು