‘ಕರಾವಳಿ ಹಾಗೂ ಮಲೆನಾಡಿನ ಜನರು ಉದ್ಯೋಗ ಅರಸಿ ಬೇರೆ ಕಡೆ ಹೋಗುವುದಕ್ಕಿಂತ ತಮ್ಮಲ್ಲಿರುವ ಪ್ರಾಕೃತಿಕ ಸಂಪತ್ತು ಬಳಸಿಕೊಂಡು ಸ್ವಂತ ಊರುಗಳಲ್ಲೇ ಉದ್ಯಮ ಆರಂಭಿಸಬೇಕು. ಉದ್ಯೋಗಿಗಳಾಗುವುದಕ್ಕಿಂತ ಉದ್ಯಮಿಗಳಾಗಿ ಹೊರಹೊಮ್ಮಿ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕರಾವಳಿ ಹಾಗೂ ಮಲೆನಾಡಿನ ಜನರು ಉದ್ಯೋಗ ಅರಸಿ ಬೇರೆ ಕಡೆ ಹೋಗುವುದಕ್ಕಿಂತ ತಮ್ಮಲ್ಲಿರುವ ಪ್ರಾಕೃತಿಕ ಸಂಪತ್ತು ಬಳಸಿಕೊಂಡು ಸ್ವಂತ ಊರುಗಳಲ್ಲೇ ಉದ್ಯಮ ಆರಂಭಿಸಬೇಕು. ಉದ್ಯೋಗಿಗಳಾಗುವುದಕ್ಕಿಂತ ಉದ್ಯಮಿಗಳಾಗಿ ಹೊರಹೊಮ್ಮಿ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ಸ್ಥಳೀಯ ಉದ್ಯಮಿಗಳೊಂದಿಗೆ ಶೀಘ್ರದಲ್ಲೇ ಮಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.ಭಾನುವಾರ ಉಳ್ಳಾಲದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ‘ಕೈಲ್ ಮುಹೂರ್ತ ಜಂಬರ- 2026’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮ ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡಲು ಸರ್ಕಾರ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಿದೆ. ಈ ಭಾಗದಲ್ಲಿ ಉದ್ಯಮ ಆರಂಭಿಸುವ ಸ್ಥಳೀಯರಿಗೆ ಅನುಕೂಲವಾಗುವಂತೆ ಬ್ಯಾಂಕ್ ಸಾಲ ಮರುಪಾವತಿ ಅವಧಿಯನ್ನು 5- 6 ವರ್ಷಗಳಿಂದ 20 ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.ಮಲೆನಾಡಿನಲ್ಲೇ ಮಳೆ ಇಲ್ಲ:
ಕೊಡಗು ಶೌರ್ಯ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ಇತಿಹಾಸ ಹೊಂದಿದೆ. ಪ್ರತಿ ಮನೆಯಲ್ಲಿ ವೀರರನ್ನು ತಯಾರು ಮಾಡಿರುವ ಇತಿಹಾಸ ಮರೆಯಲು ಸಾಧ್ಯವಿಲ್ಲ. ನಮ್ಮೆಲ್ಲರ ತಾಯಿ ಕಾವೇರಿ ಇಲ್ಲೇ ಹುಟ್ಟಿ, ಪಾಂಡಿಚೇರಿವರೆಗೂ ಈ ತಾಯಿ ಮೇಲೆ ಅವಲಂಬಿತವಾಗಿದ್ದೇವೆ. ಈ ಬಾರಿ ಭೀಕರ ಬರಗಾಲವಾಗಿದೆ. ಮಲೆನಾಡಿನಲ್ಲೇ ಈ ವರ್ಷ ಮಳೆ ಇಲ್ಲವಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಬಂದು ಕೆರೆ, ಕೆಆರ್‌ಎಸ್ ಅಣೆಕಟ್ಟು ತುಂಬುತ್ತವೆ ಎಂದು ಕಾತರದಿಂದ ಕಾಯುತ್ತಿದ್ದೇನೆ ಎಂದರು.ತಿರುಪತಿ ದೇವಾಲಯ ಟ್ರಸ್ಟ್‌ನವರು ನಮಗೆ ಜಾಗ ಕೊಡಿ ಒಳ್ಳೆಯ ದೇವಾಲಯ ನಿರ್ಮಿಸುತ್ತೇವೆ ಎಂದು ಮನವಿ ಮಾಡಿದ್ದರು. ಅದಕ್ಕಾಗಿ ಮಂಗಳೂರಿನಲ್ಲಿ 10 ಎಕರೆ ಜಾಗವನ್ನು ಟಿಟಿಡಿ ಮಂಡಳಿಯವರಿಗೆ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಆ ಭಾಗದಲ್ಲಿ ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕಾ, ಕಟೀಲು, ಧರ್ಮಸ್ಥಳ ದೇವಾಲಯಗಳಿವೆ. ಅವುಗಳ ಜತೆಗೆ ತಿರುಪತಿಗೆ ತೆರಳಲು ಆಗದವರು ವೆಂಕಟರಮಣ ದೇವಾಲಯಕ್ಕೆ ಹೋಗಲು ಅನುಕೂಲವಾಗಲಿ ಎಂದು ಈ ತೀರ್ಮಾನ ಮಾಡಲಾಗಿದೆ ಎಂದರು.
ವಿಭಿನ್ನವಾಗಿ ದಸರಾ ಆಚರಣೆಗೆ ಸಿದ್ಧತೆ:ಈ ಬಾರಿ ದಸರಾವನ್ನು ವಿಭಿನ್ನವಾಗಿ ಆಚರಿಸಲು ಪ್ರಯತ್ನಿಸುತ್ತಿದ್ದು, ದೇಶಕ್ಕೆ ಕೊಡುಗೆ ನೀಡಿರುವ ಯೋಧರಿಗೆ ದಸರಾ ಮೆರವಣಿಗೆಯಲ್ಲಿ ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನಾ ಪಡೆಗಳು ಭಾಗವಹಿಸಬೇಕು. ನಮ್ಮ ವಿವಿಧ ಭಾಗಗಳ ಕಲಾವಿದರು, ಸಿನಿಮಾ ರಂಗದವರು, ಎಲ್ಲಾ ಸಮುದಾಯದವರು ಇರಬೇಕು ಎಂದು ಬದಲಾವಣೆ ತಂದು ಶಿಸ್ತಿನಿಂದ ಕಾರ್ಯಕ್ರಮ ಆಚರಣೆಗೆ ಮುಂದಾಗಿದ್ದೇವೆ ಎಂದರು.
ಕೊಡಗಿನ ಶಾಸಕರಾದ ಪೊನ್ನಣ್ಣ ಹಾಗೂ ಮಂಥರ್ ಗೌಡ ಅವರನ್ನು ‘ಕೊಡಗಿನ ಎರಡು ಕಣ್ಣುಗಳು’ ಎಂದು ಬಣ್ಣಿಸಿದ ಶಿವಕುಮಾರ್, ಅಭಿವೃದ್ಧಿ ಕೆಲಸ ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಶಕ್ತಿ ತುಂಬಬೇಕೆಂದು ಮನವಿ ಮಾಡಿದರು. ಜತೆಗೆ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಜಾಗರೂಕತೆಯಿಂದ ರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದರು.