;Resize=(412,232))
ಬೆಂಗಳೂರು : ಮಹಿಳೆ ಸೇರಿ ಮೂರು ದುಷ್ಕರ್ಮಿಗಳು ಭಾರತೀಯ ರುಪಾಯಿ ಕೊಟ್ಟರೆ ಪ್ರತಿಯಾಗಿ ಹೆಚ್ಚಿನ ಮೌಲ್ಯದ ಸೌದಿಯ ಕರೆನ್ಸಿ ರಿಯಾಲ್ ನೀಡುವ ಆಸೆ ತೋರಿಸಿ ಸೊಪ್ಪಿನ ವ್ಯಾಪಾರಿಯಿಂದ 8 ಲಕ್ಷ ರು. ಪಡೆದು ಬಳಿಕ ವಂಚಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ವಂಚನೆಗೊಳಗಾದ ಶಿವಾಜಿನಗರ ನಿವಾಸಿ ಶಕೀಲ್ ಅಹ್ಮದ್ (36) ನೀಡಿದ ದೂರಿನ ಮೇರೆಗೆ ರೇಷ್ಮಾ ಎಂಬ ಮಹಿಳೆ ಸೇರಿ ಮೂವರ ವಿರುದ್ಧ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಶಕೀಲ್ ಅಹ್ಮದ್ ಶಿವಾಜಿನಗರದಲ್ಲಿ ಸೊಪ್ಪಿನ ವ್ಯಾಪಾರ ಮಾಡುತ್ತಾರೆ. ಇತ್ತೀಚೆಗೆ ರೇಷ್ಮಾ ಎಂಬುವರು ಶಕೀಲ್‌ಗೆ ಪರಿಚಿತರಾಗಿದ್ದಾರೆ. ಈ ವೇಳೆ ಆಕೆ ತನ್ನ ಬಳಿ ಸೌದಿಯ ರಿಯಾಲ್ ಇದ್ದು, ಅದನ್ನು ಭಾರತೀಯ ರುಪಾಯಿಗೆ ಪರಿವರ್ತಿಸಬೇಕು. ಭಾರತೀಯ ರುಪಾಯಿಯಲ್ಲಿ ಕೊಡುವ ಹಣಕ್ಕಿಂತ ಹೆಚ್ಚಿನ ಮೌಲ್ಯದ ರಿಯಾಲ್ ಕೊಡುವುದಾಗಿ ಆಸೆ ತೋರಿಸಿದ್ದಾರೆ. ಆಕೆಯ ಮಾತು ನಂಬಿದ ಶಕೀಲ್ ಎಂಟು ಲಕ್ಷ ರು. ನೀಡಲು ಒಪ್ಪಿಕೊಂಡಿದ್ದಾರೆ.
ಭಾನುವಾರ ಬೆಳಗ್ಗೆ ಸುಮಾರು 6 ಗಂಟೆಗೆ ಶಕೀಲ್ ಬ್ಯಾಗ್‌ವೊಂದರಲ್ಲಿ 8 ಲಕ್ಷ ರು. ತೆಗೆದುಕೊಂಡು ಬನಶಂಕರಿ ಮೆಟ್ರೋ ರೈಲು ನಿಲ್ದಾಣದ ಬಳಿಗೆ ಬಂದಿದ್ದಾರೆ. ಈ ವೇಳೆ ರೇಷ್ಮಾ ಜತೆಗೆ ಇಬ್ಬರು ಅಪರಿಚಿತರು ಅಲ್ಲಿಗೆ ಬಂದಿದ್ದಾರೆ. ಸಣ್ಣ ಬ್ಯಾಗ್ ತೋರಿಸಿ, ಇದರಲ್ಲಿ ಸೌದಿಯ ರಿಯಾಲ್ ಇದೆ. ಇದನ್ನು ಬೇರೆ ಕಡೆ ಮಾರಾಟ ಮಾಡಿದರೆ ಭಾರತೀಯ ರುಪಾಯಿಯಲ್ಲಿ 15 ಲಕ್ಷ ರು. ಸಿಗಲಿದೆ ಎಂದು ಹೇಳಿದ್ದಾರೆ. ಇವರ ಮಾತು ನಂಬಿದ ಶಕೀಲ್, ತಾನು ತಂದಿದ್ದ 8 ಲಕ್ಷ ರು. ಇದ್ದ ಬ್ಯಾಗ್ ಅನ್ನು ರೇಷ್ಮಾ ಹಾಗೂ ಆಕೆಯ ಸಹಚರರಿಗೆ ನೀಡಿ, ಅವರು ತಂದಿದ್ದ ಮತ್ತೊಂದು ಬ್ಯಾಗ್ ಪಡೆದುಕೊಂಡಿದ್ದಾರೆ. ಬಳಿಕ ರೇಷ್ಮಾ ಹಾಗೂ ಆಕೆಯ ಸಹಚರರು ಸ್ಥಳದಿಂದ ತೆರಳಿದ್ದಾರೆ.
ವಂಚಕರ ಬಂಧನಕ್ಕೆ ಶೋಧ:
ಬಳಿಕ ಶಕೀಲ್, ರೇಷ್ಮಾ ಹಾಗೂ ಆಕೆಯ ಸಹಚರರು ನೀಡಿದ ಬ್ಯಾಗ್ ತೆರೆದು ನೋಡಿದಾಗ ಅದರ ಮೇಲ್ಭಾಗದಲ್ಲಿ ಮಾತ್ರ ಸೌದಿಯ ರಿಯಾಲ್ ಮಾದರಿಯ ನಕಲಿ ನೋಟುಗಳು ಇದ್ದು, ಒಳಗೆ ಖಾಲಿ ಪೇಪರ್‌ಗಳು ಇರುವುದು ಕಂಡು ಬಂದಿದೆ. ಈ ವೇಳೆ ಶಕೀಲ್‌ಗೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು ಬನಶಂಕರಿ ಮೆಟ್ರೋ ರೈಲು ನಿಲ್ದಾಣದ ಸಮೀಪದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ, ವಂಚಕರ ಗ್ಯಾಂಗ್ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.
ಚಿನ್ನಾಭರಣ ಅಡವಿರಿಸಿ ಹಣ ತಂದಿದ್ದ
ಪೊಲೀಸರು 8 ಲಕ್ಷ ರು. ಹಣದ ಮೂಲದ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಸೊಪ್ಪು ವ್ಯಾಪಾರಿ ಶಕೀಲ್ ಅಹ್ಮದ್ ಹೆಚ್ಚಿನ ಮೌಲ್ಯದ ಸೌದಿ ರಿಯಾಲ್ ಆಸೆಗೆ ಬಿದ್ದು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಂದ ಚಿನ್ನಾಭರಣ ಪಡೆದು ಬಳಿಕ ಅಡಮಾನವಿರಿಸಿ 8 ಲಕ್ಷ ರು. ಹೊಂದಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣದ ಪ್ರಮುಖ ಆರೋಪಿ ರೇಷ್ಮಾ ಪರಿಚಯದ ಬಗ್ಗೆ ದೂರುದಾರ ಶಕೀಲ್ ಅಹ್ಮದ್ ಅವರಿಂದ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.