ನವದೆಹಲಿ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ, ಅಸಹಜ ಸಾವಿನ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ)ಕ್ಕೆ ವಹಿಸುವಂತೆ ಕೇರಳದ ಸಿಪಿಐ ಸಂಸದ ಪಿ. ಸಂದೋಶ್ ಕುಮಾರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ತಾವೇ ಹಲವು ಶವಗಳನ್ನು ಹೂತುಹಾಕಿದ್ದಾಗಿ ದೇವಸ್ಥಾನದ ಮಾಜಿ ಸ್ವಚ್ಛತಾ ಕರ್ಮಿಯೊಬ್ಬರು ಹೇಳಿಕೆ ನೀಡಿರುವ ಬೆನ್ನಲ್ಲೇ ಪತ್ರ ಬರೆದಿರುವ ಸಂಸದ, ‘ಇತ್ತೀಚಿನ ಬೆಳವಣಿಗೆಗಳು ನಿರ್ಲಕ್ಷಿಸಲಾಗದ ವಾಸ್ತವವನ್ನು ಮುನ್ನೆಲೆಗೆ ತಂದಿವೆ. ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿಲ್ಲ’ ಎಂದು ಆರೋಪಿಸಿ, ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
ಪರಂ ಸ್ಪಷ್ಟನೆ:ಈ ನಡುವೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ‘ಅಗತ್ಯ ಬಿದ್ದರೆ ಉನ್ನತ ತನಿಖೆ ನಡೆಸಲಾಗುವುದು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೂರುದಾರನ ದೂರಿಗೆ ಸಂಬಂಧಿಸಿ ಈಗಾಗಲೇ ಪ್ರಾಥಮಿಕ ತನಿಖೆ ಆರಂಭವಾಗಿದೆ. ಹೆಚ್ಚಿನ ತನಿಖೆ ಅಗತ್ಯವಿದ್ದರೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ, ಪ್ರಾಥಮಿಕ ತನಿಖೆ ನಡೆಯುತ್ತಿರುವ ಮಧ್ಯೆಯೇ ಎಸ್‌ಐಟಿ ತನಿಖೆಗೆ ಒತ್ತಾಯಿಸಿದರೆ, ಪೊಲೀಸ್ ಇಲಾಖೆ ಇರುವುದೇಕೆ? ಎಂದು ಪ್ರಶ್ನಿಸಿದರು.
ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಅಗತ್ಯಗಳನ್ನು ನೋಡಿಕೊಂಡು ಮುಂದೆ ಯಾವಕ್ರಮ ಕೈಗೊಳ್ಳಬೇಕೆಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.