;Resize=(412,232))
ಬೆಂಗಳೂರು : ನ.1ರಿಂದ ನಿಯಮಿತ ವರ್ಗಾವಣೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆಗಳಿಗೂ ಅವಕಾಶ ಇಲ್ಲ. ವರ್ಗಾವಣೆ ಚೀಟಿ ಹಿಡಿದುಕೊಂಡು ಯಾರೂ ನನ್ನ ಬಳಿ ಬರಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವರ್ಗಾವಣೆ ಶಿಫಾರಸುಗಳಿಗಾಗಿ ಸಮಯ ವ್ಯರ್ಥ ಮಾಡುವುದನ್ನು ಇವತ್ತಿನಿಂದಲೇ, ಈ ಕ್ಷಣದಿಂದಲೇ ನಿಲ್ಲಿಸಿ ಎಂದು ಸೂಚಿಸಿದ್ದಾರೆ.
ನಾವು ಸರ್ಕಾರದ ಕೆಲಸ ಮತ್ತು ಜನಸೇವೆಗೆ ಆದ್ಯತೆ ನೀಡಬೇಕು. ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಿಕೆ ಹಾಗೂ ಜನರ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಹೆಚ್ಚಿನ ಗಮನ ಹರಿಸಬೇಕು. ವರ್ಗಾವಣೆಗಾಗಿ ಶಿಫಾರಸು ಮಾಡುವುದಾಗಲಿ, ಒತ್ತಡ ಹೇರುವುದಾಗಲಿ ಸಹಿಸುವುದಿಲ್ಲ. ಜನರ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಧಿಕಾರ ಮತ್ತು ಪ್ರಭಾವ ಬಳಸುವುದು ಜನರ ಕೆಲಸಕ್ಕಾಗಿಯೇ ಹೊರತು ವರ್ಗಾವಣೆಗಾಗಿ ಅಲ್ಲ. ಎಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸಿ, ಜನರಿಗೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರೆ.
ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ನಂತರ ಮುಖ್ಯಮಂತ್ರಿಗಳ ಪೂರ್ವಾನುಮತಿ ಇಲ್ಲದೆ ಇಲಾಖಾ ಹಂತದಲ್ಲಿ ವರ್ಗಾವಣೆ ಆದೇಶ ಹೊರಡಿಸಿದರೆ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರನ್ನೇ ಹೊಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಕೂಡ ಮುಖ್ಯಮಂತ್ರಿ ಆಗಿದ್ದಾಗ ಎಚ್ಚರಿಕೆಯನ್ನು ನೀಡಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಅವರು, ವರ್ಗಾವಣೆ ವಿಚಾರದಲ್ಲಿ ಶಿಫಾರಸ್ಸಿಗಾಗಿ ಯಾರೂ ಬರಬಾರದು ಎಂದು ಖಡಕ್ ಆಗಿ ಸೂಚಿಸಿದ್ದಾರೆ.