;Resize=(412,232))
ಬೆಂಗಳೂರು : ಮಂಗಳವಾರ ಮುಷ್ಕರದ ಹಿನ್ನೆಲೆಯಲ್ಲಿ ನಾಲ್ಕೂ ನಿಗಮಗಳ ದೈನಂದಿನ ಪ್ರಯಾಣಿಕರು ಮತ್ತು ಆದಾಯದಲ್ಲಿ 12 ಕೋಟಿ ರು.ನಷ್ಟು ಕುಸಿತವಾಗಿದೆ. ನಾಲ್ಕೂ ನಿಗಮಗಳ ಬಸ್‌ಗಳಿಂದ ಪ್ರತಿದಿನ ಸರಾಸರಿ 1.10 ಕೋಟಿ ಜನ ಪ್ರಯಾಣಿಸುತ್ತಿದ್ದು, 34 ಕೋಟಿ ರು. ಆದಾಯ ಬರುತ್ತಿದೆ.
ಆದರೆ, ಮಂಗಳವಾರ ಮುಷ್ಕರದಿಂದಾಗಿ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳ ಬಸ್ ಸೇವೆಯಲ್ಲಿ ಭಾರೀ ವ್ಯತ್ಯಯವಾಗಿತ್ತು. ಅದರಿಂದಾಗಿ ಪ್ರಯಾಣಿಕರ ಸಂಖ್ಯೆ 70 ಲಕ್ಷಕ್ಕೆ ಇಳಿದಿದ್ದರೆ, ಆದಾಯ 20ರಿಂದ 22 ಕೋಟಿ ರು.ಗೆ ಕುಸಿದಿದೆ.
ಕೆಕೆಎಸ್ಸಾರ್ಟಿಸಿ, ವಾಯುವ್ಯ ಸಾರಿಗೆಗೆ ₹7 ಕೋಟಿ ನಷ್ಟ
ಕಲಬುರಗಿ/ಹುಬ್ಬಳ್ಳಿ: ನೌಕರರ ಮುಷ್ಕರದಿಂದ ಆ.5ರ ಮಂಗಳವಾರ ಒಂದೇ ದಿನಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ₹2 ಕೋಟಿ ನಷ್ಟವಾಗಿದೆ. ಸಾಮಾನ್ಯ ದಿನಗಳಲ್ಲಿ ದಿನ ಒಂದಕ್ಕೆ 6 ರಿಂದ 7 ಕೋಟಿ ರು. ಆದಾಯ ಬರುತ್ತಿತ್ತು. ಆದರೆ ಆ.5ರ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಸಾರಿಗೆ ಮುಷ್ಕರ ನಡೆದಿದ್ದರಿಂದ ₹2 ಕೋಟಿ ನಷ್ಟವಾಗಿದೆ. ಇನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸುಮಾರು ₹2.7 ಕೋಟಿ ನಷ್ಟ ಉಂಟಾಗಿದೆ. ಪ್ರತಿದಿನ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಅಂದಾಜು ₹7.7 ಕೋಟಿ ಬರುತ್ತಿತ್ತು. ಆದರೆ, ಮಂಗಳವಾರದ ಮುಷ್ಕರದ ವೇಳೆ ₹5 ಕೋಟಿ ಸಂಗ್ರಹವಾಗಿದೆ. ಇದರಿಂದ ಸುಮಾರು ₹2.7 ಕೋಟಿಯ ನಷ್ಟವಾಗಿದೆ.