;Resize=(412,232))
ಬೆಂಗಳೂರು : ಸನ್ನಡತೆ ತೋರಿ ಸೆರೆಮನೆಯಿಂದ ಬಂಧಮುಕ್ತರಾದ 24 ಜೀವಾವಧಿ ಸಜಾ ಕೈದಿಗಳಿಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೀಳ್ಕೊಟ್ಟರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಶನಿವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬಂಧಮುಕ್ತರಾದ ಕೈದಿಗಳಿಗೆ ಪ್ರಮಾಣ ವಿತರಿಸಿ ಸಮಾಜದ ಮುಖ್ಯವಾಹಿನಿಗೆ ಮರಳಿ ಜವಾಬ್ದಾರಿಯುತ ನಾಗರಿಕರಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸಚಿವರು ಹಾರೈಸಿದರು.
ಶಿಕ್ಷೆ ಎಂಬುದು ವ್ಯಕ್ತಿಯ ಜೀವನದ ಅಂತ್ಯವಲ್ಲ. ಅದು ಜೀವನವನ್ನು ತಿದ್ದಿಕೊಳ್ಳಲು ದೊರೆಯುವ ಅವಕಾಶವಾಗಿದೆ. ಸಮಾಜಕ್ಕೆ ಮರಳಿದ ಬಳಿಕ ಕಾನೂನು ಪಾಲಿಸುವ ಪ್ರಜೆಯಾಗಿ ಬದುಕುವುದರ ಮೂಲಕ ತಮ್ಮಿಂದಾದ ಪ್ರಮಾದಕ್ಕೆ ಅರ್ಥಪೂರ್ಣ ಪ್ರಾಯಶ್ಚಿತ್ತ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮ ಬಳಿಕ ಕೇಂದ್ರ ಕಾರಾಗೃಹದ ಅಡುಗೆ ಮನೆ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಸಚಿವರು ಪರಿಶೀಲಿಸಿದರು. ಕೈದಿಗಳು ತಯಾರಿಸಿದ ವಿವಿಧ ಕರಕುಶಲ ವಸ್ತುಗಳನ್ನು ವೀಕ್ಷಿಸಿ ಅವರ ಕೌಶಲ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರಾಗೃಹದಲ್ಲಿರುವ ಕೈದಿಗಳ ಮಕ್ಕಳಿಗಾಗಿ ಸ್ಥಾಪಿಸಲಾಗಿರುವ ಕಲಿಕಾ ಕೇಂದ್ರಕ್ಕೂ ಭೇಟಿ ನೀಡಿ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು.
ಈ ಸಮಾರಂಭದಲ್ಲಿ ಕಿಯೊನಿಕ್ಸ್ ಅಧ್ಯಕ್ಷ ಹಾಗೂ ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು. ಈ ಹಿಂದೆ ಕೆಲವು ತಪ್ಪುಗಳಾಗಿರಬಹುದು. ಆದರೆ ಇನ್ಮುಂದೆ ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿದರೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಹೇಳಿದರು.