ವೃದ್ಧ ದಂಪತಿಗೆ ₹4.70 ಕೋಟಿ ಪಂಗನಾಮ ಹಾಕಿದ ಇಬ್ಬರು ಸೆರೆ

Published : Jun 11, 2025, 11:05 AM IST
shocking case of digital arrest

ಸಾರಾಂಶ

ಒಂದೂವರೆ ತಿಂಗಳು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮಾಡಿ 4.70 ಕೋಟಿ ರು. ದೋಚಿದ್ದ ಸೈಬರ್ ವಂಚಕರ ತಂಡದ ಇಬ್ಬರು ಕಿಡಿಗೇಡಿಗಳನ್ನು ಆಗ್ನೇಯ ವಿಭಾಗದ ಸಿಇನ್‌ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ಒಂದೂವರೆ ತಿಂಗಳು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮಾಡಿ 4.70 ಕೋಟಿ ರು. ದೋಚಿದ್ದ ಸೈಬರ್ ವಂಚಕರ ತಂಡದ ಇಬ್ಬರು ಕಿಡಿಗೇಡಿಗಳನ್ನು ಆಗ್ನೇಯ ವಿಭಾಗದ ಸಿಇನ್‌ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಈಶ್ವರ್‌ ಸಿಂಗ್‌ ಹಾಗೂ ಪರಮೇಶ್‌ ರಾಮ್‌ಚರಣ್‌ ಬಂಧಿತರಾಗಿದ್ದು, ಆರೋಪಿಗಳ ಖಾತೆಯಿಂದ ವಂಚನೆ ಹಣವು ವಿದೇಶದ ವ್ಯಕ್ತಿಗಳ ಖಾತೆಗೆ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಕೆಲ ದಿನಗಳ ಹಿಂದೆ ನಿವೃತ್ತ ಎಂಜಿನಿಯರ್ ದಂಪತಿಯನ್ನು ಬೆದರಿಸಿ ಆರೋಪಿಗಳು ಹಣ ಲೂಟಿ ಮಾಡಿದ್ದರು. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಬಳಿಕ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಜಾಡು ಹಿಡಿದು ತನಿಖೆಗಿಳಿದಾಗ ಇಬ್ಬರು ಆರೋಪಿಗಳನ್ನು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಮ್ ಪರಿಶೀಲನೆ ಬಳಿಕ ಬೆದರಿಕೆ:

ನೈಜಿರೀಯಾ ದೇಶದಲ್ಲಿ ಮೂರು ದಶಕಗಳ ಕಾಲ ಎಂಜಿನಿಯರ್ ಆಗಿದ್ದ ಸಂತ್ರಸ್ತರು, ನಿವೃತ್ತಿ ನಂತರ ತಮ್ಮ ಕುಟುಂಬದ ಜತೆ ಜೆ.ಪಿ.ನಗರದಲ್ಲಿ ನೆಲೆಸಿದ್ದರು. ಹೀಗಿರುವಾಗ ಮಾ.19 ರಂದು ಅವರಿಗೆ ಕರೆ ಮಾಡಿದ್ದ ಅಪರಿಚಿತ, ತನ್ನನ್ನು ಎಸ್‌ಬಿಐ ಗ್ರಾಹಕ ಸೇವಾ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ.

ಬಳಿಕ ನಿಮ್ಮ ಹೆಸರಿನ ಕ್ರೆಡಿಟ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ. ಈ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದಿದ್ದ. ಕೆಲ ಹೊತ್ತಿನ ಬಳಿಕ ನಿವೃತ್ತ ಎಂಜಿನಿಯರ್ ಅವರನ್ನು ಸಿಬಿಐ ಅಧಿಕಾರಿ ಹೆಸರಿನಲ್ಲಿ ಮತ್ತೊಬ್ಬ ಸಂಪರ್ಕಿಸಿದ್ದಾನೆ. ಆಗ ವಿಡಿಯೋ ಕಾಲ್ ಮಾಡಿದ್ದ ಆತ, ಹಿಂಬದಿಯಲ್ಲಿ ಪೊಲೀಸ್ ಠಾಣೆ ಚಿತ್ರ ಕಾಣುವಂತೆ ಮಾಡಿದ್ದ. ಇದರಿಂದ ಆತನನ್ನು ಸಿಐಬಿ ಅಧಿಕಾರಿ ಎಂದು ನಿವೃತ್ತ ಎಂಜಿನಿಯರ್‌ ದಂಪತಿ ಭಾವಿಸಿದ್ದರು. ಆಗ ತಮ್ಮನ್ನು ಬಂಧಿಸಲು ಕೋರ್ಟ್‌ನಿಂದ ವಾರೆಂಟ್ ಸಹ ಪಡೆದಿದ್ದೇವೆ. ಆದರೆ ಈ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಹೇಳಿ ಆರೋಪಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈತನ ಮಾತು ನಂಬಿ ಹಂತ ಹಂತವಾಗಿ 4.70 ಕೋಟಿ ರು. ಹಣವನ್ನು ವರ್ಗಾಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಖಾಲಿಯಾದ ಬಳಿಕವೂ ಹಣಕ್ಕಾಗಿ ವೃದ್ಧ ದಂಪತಿಗೆ ಆರೋಪಿಗಳು ಬೆದರಿಸಿದ್ದಾರೆ. ಆಗ ತಮ್ಮ ಸಂಕಷ್ಟವನ್ನು ಸಂಬಂಧಿಕರ ಬಳಿ ಅವರು ತೋಡಿಕೊಂಡಿದ್ದರು. ಈ ವಿಚಾರ ತಿಳಿದ ಅವರ ಸಂಬಂಧಿಕರು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಿದೇಶದಲ್ಲಿ ಕಿಂಗ್ ಪಿನ್:

ಈ ಪ್ರಕರಣದ ತನಿಖೆಗಿಳಿದ ಪೊಲೀಸರು, ಮೊಬೈಲ್ ಕರೆಗಳು ಹಾಗೂ ಬ್ಯಾಂಕ್ ಹಣ ವರ್ಗಾವಣೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಆಗ ಹಣ ವರ್ಗಾವಣೆಯಾಗಿದ್ದ ಖಾತೆಗಳನ್ನು ತಪಾಸಣೆ ನಡೆಸಿದಾಗ ಈಶ್ವರ್ ಖಾತೆಗೆ 10 ಲಕ್ಷ ರು. ಹಾಗೂ ರಾಮ್ ಖಾತೆಗೆ 1.80 ಕೋಟಿ ರು. ಹಣ ವರ್ಗಾಣೆಯಾಗಿರುವುದು ಗೊತ್ತಾಯಿತು. ತಕ್ಷಣವೇ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ವಿದೇಶದ ನಂಟು ಬಯಲಾಗಿದೆ. ಕಮಿಷನ್ ಆಸೆಗೆ ತಾವು ಬ್ಯಾಂಕ್ ಖಾತೆ ತೆರೆದಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಈ ಹಣದ ಪೈಕಿ ಸ್ಪಲ್ವ ಹಣವನ್ನು ಶ್ರೀಲಂಕಾದ ಕ್ಯಾಸಿನೋದಲ್ಲಿ ರಾಮ್ ಕಳೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on

Recommended Stories

ಗ್ರಾಮೀಣ ಬ್ಯಾಂಕ್‌ಗಳು ರೈತರ ಊರುಗೋಲು
ಹಿಂದುಳಿದ ವರ್ಗಗಳ ಸಮೀಕ್ಷೆಗೆ ಸಹಕರಿಸಿ: ಡೀಸಿ