ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಅವರಿಗೆ ನಿಂದನೆ ಸಂದೇಶ ಕಳುಹಿಸಿದ ಪ್ರಕರಣ ಸಂಬಂಧ ನಟ ದರ್ಶನ್ ಅವರ ಇಬ್ಬರು ಅಭಿಮಾನಿಗಳನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆ ಕೂಡ್ಲಗಿ ತಾಲೂಕಿನ ಓಬಣ್ಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗಾಧರ್ ಬಂಧಿತರಾಗಿದ್ದು, ಮತ್ತೆ 11 ಮಂದಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆಸಿದ್ದಾರೆ. ತಾಂತ್ರಿಕ ಮಾಹಿತಿ ಆಧರಿಸಿ ಸಿಸಿಬಿ ಡಿಸಿಪಿ ಕಾಸಿಮ್ ರಾಜಾ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ಈ ಸಂಬಂಧ ಮಾಧ್ಯಮಗಳ ಜತೆ ಶನಿವಾರ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ರಮ್ಯಾ ನಿಂದನೆ ಪ್ರಕರಣದಲ್ಲಿ ಇಬ್ಬರ ಬಂಧನವಾಗಿದೆ. ಮತ್ತೆ ಕೆಲವರ ಪತ್ತೆ ತನಿಖೆ ನಡೆದಿದೆ ಎಂದರು.
ಇತ್ತೀಚೆಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಸಂಬಂಧ ಇನ್‌ಸ್ಟಾಗ್ರಾಂ ಹಾಗೂ ಎಕ್ಸ್ ತಾಣಗಳಲ್ಲಿ ನಟಿ ರಮ್ಯಾ ಪೋಸ್ಟ್ ಮಾಡಿದ್ದರು. ಇದರಿಂದ ಕೆರಳಿದ ದರ್ಶನ್ ಅವರ ಅಭಿಮಾನಿಗಳು ರಮ್ಯಾ ಅವರಿಗೆ ಅಶ್ಲೀಲ ಹಾಗೂ ನಿಂದನೆ ಸಂದೇಶ ಕಳುಹಿಸಿ ಅವಮಾನಿಸಿದ್ದರು.
ಈ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರಮ್ಯಾ, ಇನ್‌ಸ್ಟಾಗ್ರಾಂನ 43 ಖಾತೆಗಳ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಆಯುಕ್ತರಿಗೆ ದೂರು ನೀಡಿದ್ದರು. ಅಂತೆಯೇ ಸಿಸಿಬಿ ಡಿಸಿಪಿ ಕಾಸಿಂ ರಾಜಾ ನೇತೃತ್ವದಲ್ಲಿ ಸೈಬರ್ ಕ್ರೈಂ ಠಾಣೆ ಪೊಲೀಸರು ತನಿಖೆ ನಡೆಸಿದರು. ಕೊನೆಗೆ 43 ಖಾತೆಗಳ ಪೈಕಿ 11 ಖಾತೆಗಳ ಪತ್ತೆ ಹಚ್ಚಿದ್ದ ಪೊಲೀಸರು, ಅದರಲ್ಲಿ ಓಬಣ್ಣ ಹಾಗೂ ಗಂಗಾಧರ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಕೂಲಿ ಕೆಲಸಗಾರರು
ಓಬಣ್ಣ ಹಾಗೂ ಗಂಗಾಧರ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ನಟ ದರ್ಶನ್ ಮೇಲೆ ಹುಚ್ಚು ಅಭಿಮಾನದಿಂದ ಈ ಕೃತ್ಯ ಎಸಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ rboertraghava5_d_boss_tj ಹೆಸರಿನಲ್ಲಿ ಓಬಣ್ಣ ಹಾಗೂ darshan_thugudeepa ಹೆಸರಿನಲ್ಲಿ ಗಂಗಾಧರ್ ಖಾತೆ ತೆರೆದಿದ್ದರು. ಈ ಖಾತೆಗಳ ಮೂಲಕ ದರ್ಶನ್ ಪರ ಅವರು ಪೋಸ್ಟ್ ಮಾಡುತ್ತಿದ್ದರು. ತಮ್ಮ ನೆಚ್ಚಿನ ನಟನ ಬಗ್ಗೆ ಟೀಕಿಸುವವರಿಗೆ ನಿಂದನೆ ಸಂದೇಶಗಳನ್ನು ಆರೋಪಿಗಳು ಕಳುಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯದ ಆಶ್ವಾಸನೆ ಸಿಕ್ಕಿದೆ
ಸಿಸಿಬಿ ಟೀಮ್ ಕಂಪ್ಲೇಂಟ್ ಮಾಡಿದ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ವರ್ತಿಸಿದವರ ಮೇಲೆ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಇತರರನ್ನೂ ಬಂಧಿಸುವ ಭರವಸೆ ನೀಡುವ ಮೂಲಕ ನ್ಯಾಯ ದೊರಕಿಸಿಕೊಡುವ ಆಶ್ವಾಸನೆ ನೀಡಿದ್ದಾರೆ. ಹೆಣ್ಣುಮಕ್ಕಳ ಘನತೆ ಮತ್ತು ಸುರಕ್ಷತೆಗೆ ಧಕ್ಕೆ ತಂದಲ್ಲಿ ಕಾನೂನಿನ ಕೈಗಳಿಂದ ಪಾರಾಗುವುದು ಬಹಳ ಕಷ್ಟ ಎಂಬ ಸ್ಪಷ್ಟ ಸಂದೇಶ ಇದರಿಂದ ರವಾನೆಯಾದಂತಾಗಿದೆ.
ರಮ್ಯಾ, ಮಾಜಿ ಸಂಸದೆ