ಕನ್ನಡದ ಹಿರಿಯ ಸಾಹಿತಿ ಜಿ.ಎಸ್‌.ಸಿದ್ದಲಿಂಗಯ್ಯ ನಿಧನ

Published : May 08, 2025, 09:52 AM IST
GS Siddalingaiah

ಸಾರಾಂಶ

ಸಾಹಿತಿ, ವಿಮರ್ಶಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಎಸ್.ಸಿದ್ದಲಿಂಗಯ್ಯ (94) ಅವರು ವಯೋ ಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

 ಬೆಂಗಳೂರು : ಸಾಹಿತಿ, ವಿಮರ್ಶಕ  ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಎಸ್.ಸಿದ್ದಲಿಂಗಯ್ಯ (94) ಅವರು ವಯೋ ಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಚಾಮರಾಜಪೇಟೆಯ ಲಿಂಗಾಯತ ರುದ್ರಭೂಮಿಯಲ್ಲಿ ಬುಧವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಾಹಿತಿ ಸಿದ್ದಲಿಂಗಯ್ಯ ಅವರು ತುಮಕೂರು ಜಿಲ್ಲೆ ಬೆಳ್ಳಾವಿಯಲ್ಲಿ 1931ರ ಫೆ.20ರಂದು ಜನಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎ ಆನರ್ಸ್ (ಕನ್ನಡ)ನಲ್ಲಿ ಪ್ರಥಮ ರ್‍ಯಾಂಕ್‌ ಪಡೆದು ಉತ್ತೀರ್ಣರಾಗಿದ್ದರು. ಮೈಸೂರು ವಿವಿಯಲ್ಲಿ ಎಂಎ (ಕನ್ನಡ) ಸ್ನಾತಕ ಪದವಿಯನ್ನೂ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಅವರು, ನಂತರ ದಾವಣಗೆರೆ, ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕ, ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಉಪ ಪ್ರಾಧ್ಯಾಪಕರಾಗಿ, ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ರಸಗಂಗೆ, ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಹೇಮಕೂಟ ಮತ್ತು ಬಿಂದು, ಮುಖಾಮುಖಿ ಹೀಗೆ ನಾನಾ ಕವನ ಸಂಕನಗಳನ್ನು ಬರೆದಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅವರು, 1989ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1989ರ ಫೆ.28ರಂದು ಕಾಲೇಜು ಶಿಕ್ಷಣ ನಿರ್ದೇಶಕರಾಗಿ ನಿವೃತ್ತರಾದರು.

ಇದಕ್ಕೂ ಮನ್ನಾ ಹಂಪಿನಗರ 2ನೇ ಹಂತದಲ್ಲಿರುವ ಸ್ವಗೃಹದಲ್ಲಿ ಸಿದ್ದಲಿಂಗಯ್ಯ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಎಂ.ಕೃಷ್ಣಪ್ಪ, ಮಾಜಿ ಶಾಸಕ ವಾಟಾಳ್ ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ಹಂಪ ನಾಗರಾಜಯ್ಯ, ಡಾ.ಗೊ.ರು.ಚೆನ್ನಬಸಪ್ಪ, ಡಾ. ಮನು ಬಳಿಗಾರ್, ಬಿ.ಎಸ್.ಪರಮಶಿವಯ್ಯ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಪ್ರೊ.ಲಕ್ಷ್ಮೀನಾರಾಯಣ, ಡಾ.ಆಶಾದೇವಿ, ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಗಾಯಕ ಮುದ್ದುಕೃಷ್ಣ ಸೇರಿ ಹಲವರು ಸಿದ್ದಲಿಂಗಯ್ಯನವರ ಅಂತಿಮ ದರ್ಶನ ಪಡೆದರು.

ಕಂಬನಿ ಮಿಡಿದ ಸಾರಸ್ವತ ಲೋಕ:

ಕುವೆಂಪು ಅವರ ನೆಚ್ಚಿನ ಶಿಷ್ಯರೊಳಗೊಬ್ಬರಾಗಿದ್ದ ಸಿದ್ದಲಿಂಗಯ್ಯ ನಿಧನಕ್ಕೆ ಕನ್ನಡ ಸಾರಸ್ವತ ಲೋಕ ಕಂಬನಿ ಮಿಡಿದಿದೆ. ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ನಿಧನಕ್ಕೆ ನಾಡಿನ ಪ್ರಮುಖ ಸಾಹಿತಿಗಳು, ಜನಪ್ರತಿನಿಗಳು, ಸಂಘ-ಸಂಸ್ಥೆಗಳ ಪದಾಕಾರಿಗಳು ಹಾಗೂ ಸ್ವಾಮೀಜಿಗಳು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮಿಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಅವಿರತ ಸೇವೆ ಸ್ಮರಿಸಿ ವಿಶೇಷವಾಗಿ ನೇರ ನಡೆ-ನುಡಿಯ ಸಿದ್ದಲಿಂಗಯ್ಯನವರು ವಚನ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಸ್ಮರಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಇದು ಲೋಕಲ್‌ ಎಲೆಕ್ಷನ್‌ ವರ್ಷ
ಬೆಂಗಳೂರು ನಗರದ 10 ಹೆರಿಗೆ ಆಸ್ಪತ್ರೆಗಳು ಬಂದ್‌ : ಸಾರ್ವಜನಿಕರು ಪರದಾಟ