ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು

Published : Nov 02, 2026, 08:40 AM IST
Gyanesh Kumar

ಸಾರಾಂಶ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ವಿಪಕ್ಷಗಳ ಇಂಡಿಯಾ ಕೂಟವು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ‘ಚಲೋ ದೆಹಲಿ’ ಪ್ರತಿಭಟನೆ ನಡೆಸಿತು.

ನವದೆಹಲಿ : ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ವಿಪಕ್ಷಗಳ ಇಂಡಿಯಾ ಕೂಟವು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ‘ಚಲೋ ದೆಹಲಿ’ ಪ್ರತಿಭಟನೆ ನಡೆಸಿತು. ಈ ವೇಳೆ ಕಾಂಗ್ರೆಸ್‌, ಟಿಎಂಸಿ, ಸಮಾಜವಾದಿ ಪಕ್ಷ ಸೇರಿದಂತೆ ಮೈತ್ರಿಕೂಟದ ವಿವಿಧ ಪಕ್ಷಗಳ ನಾಯಕರು ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜ್ಞಾನೇಶ್‌ ಕುಮಾರ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಜ್ಞಾನೇಶ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸುತ್ತೇವೆ. ಅವರು ಮಾಡಿದ ದೇಶದ್ರೋಹದ ಕೆಲಸಕ್ಕಾಗಿ ಅವರು ಜೈಲು ಸೇರಲಿದ್ದಾರೆ. ಮತಚೋರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಕಾನೂನಿನಿಂದ ತಪ್ಪಿಸಿಕೊಳ್ಳುವ ಬಗ್ಗೆ ಅವರು ಯೋಚಿಸಬಾರದು’ ಎಂದು ಕಿಡಿ ಕಾರಿದರು.

‘ಮೋದಿ ಎಲ್ಲಿಗೂ ಹೋಗುತ್ತಿಲ್ಲ ಎಂದು ಶಾ ಹೇಳಿದ್ದಾರೆ. ಮೋದಿ ಹೋಗಲು ಬಯಸಿದರೂ, ನಾವು ಅವರನ್ನು ಹೋಗಲು ಬಿಡುವುದಿಲ್ಲ. ಜ್ಞಾನೇಶ್ ಕುಮಾರ್ ಅವರ ನಂತರ, ನಾವು ಮೋದಿ, ಶಾ ವಿರುದ್ಧ ನಿಲ್ಲುತ್ತೇವೆ. ಅವರು ಎಸಗಿರುವ ಮತ ಕಳ್ಳತನಕ್ಕಾಗಿ ಅವರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಜರುಗಲಿದೆ’ ಎಂದರು.

‘ಚೋರಿ’ ಸರ್ಕಾರ ಕಿತ್ತೆಸೆಯುತ್ತೇವೆ: ಖರ್ಗೆ

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಮೋದಿ ಮತ್ತು ಶಾ ದಲಿತರು, ಯುವಕರು ಮತ್ತು ಮಹಿಳೆಯರ ಮತಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಮೋದಿ ಜ್ಞಾನೇಶ್‌ ಕುಮಾರ್ ಮೂಲಕ ಜನರ ಮತಗಳನ್ನು ಕಸಿದುಕೊಳ್ಳಲು ಬಯಸುತ್ತಾರೆ. ಅವರು ಅಧಿಕಾರದಿಂದ ಹೋಗುವವರೆಗೂ ನಾವು ಹೋರಾಡುತ್ತಲೇ ಇರುತ್ತೇವೆ. ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ ಸರ್ಕಾರಗಳು ‘ಚೋರಿ’ ಸರ್ಕಾರಗಳಾಗಿವೆ. ಇವುಗಳನ್ನು ಕಿತ್ತೆಸೆಯುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೋಟರ್ಸ್‌ ಮತ್ತು ಚೀಟರ್ಸ್‌ ನಡುವಿನ ಹೋರಾಟ- ತೇಜಸ್ವಿ:

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮಾತನಾಡಿ, ‘ಪ್ರಧಾನಿ ಮೋದಿಯವರೇ, ನೀವು ದೇಶ ಮತ್ತು ಜ್ಞಾನು ಇವರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕು. ಇಡೀ ದೇಶವೇ ಇದನ್ನು ಗಮನಿಸುತ್ತಿದೆ. ಈ ಹೋರಾಟವು ದೇಶದ ಮತದಾರರು ಮತ್ತು ವಂಚಕರ (ವೋಟರ್ಸ್‌ ಮತ್ತು ಚೀಟರ್ಸ್‌) ನಡುವಿನ ಹೋರಾಟವಾಗಿದೆ. ಕೇಂದ್ರದ್ದು ‘ದೋ ನಂಬರಿ ಸರ್ಕಾರ’ ಹಾಗೂ ಮೋದಿ ‘ದಸ್‌ ನಂಬರಿ ಪ್ರಧಾನಿ’’ ಎಂದು ಕಿಡಿ ಕಾರಿದರು.

ಪ್ರಾಣ ಪಣಕ್ಕಿಟ್ಟು ಹೋರಾಟ- ಮಮತಾ:

ಇದೇ ವೇಳೆ ಮಾತನಾಡಿದ ಟಿಎಂಸಿ ವರಿಷ್ಠೆ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಎಸ್‌ಐಆರ್‌ಗೆ ಬಂಗಾಳ ಬಲಿಯಾಗಿದೆ. ನಾವು ಅವರನ್ನು (ಕೇಂದ್ರ ಸರ್ಕಾರ ಮತ್ತು ಜ್ಞಾನೇಶ್‌) ಬಿಡುವುದಿಲ್ಲ. ನಾವು ನಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತೇವೆ. ಅವರು ಬಂಗಾಳವನ್ನು ಲೂಟಿ ಮಾಡಿದರು, ಆದರೆ ನಾವು ಪ್ರಜಾಪ್ರಭುತ್ವವನ್ನು ಉಳಿಸುತ್ತೇವೆ ಮತ್ತು ಅದನ್ನು ಮರಳಿ ತರುತ್ತೇವೆ’ ಎಂದು ಗುಡುಗಿದರು.

2022ರಲ್ಲಿ ಯುಪಿಯಲ್ಲೂ ಮತಚೋರಿ- ಅಖಿಲೇಶ್‌:

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಮಾತನಾಡಿ, ‘ಒಂದು ಕಾಲದಲ್ಲಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದಾಗಿ ಬಡಾಯಿ ಕೊಚ್ಚಿಕೊಂಡವರು, ಈಗ ಮತಪಟ್ಟಿಯನ್ನು ತಿರುಚುವ ಕೆಲಸದಲ್ಲಿ ನಿರತರಾಗಿದ್ದಾರೆ. ನಾವು ಉತ್ತರ ಪ್ರದೇಶದಲ್ಲಿ 2022 ರಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಮತಗಳ್ಳತನವೇ ಕಾರಣ. ಉತ್ತರ ಪ್ರದೇಶದ ಮೂಲಕ ಅಧಿಕಾರಕ್ಕೆ ಬಂದವರು ಅಲ್ಲಿಂದಲೇ ಹೊರಹಾಕಲ್ಪಡುತ್ತಾರೆ. ಅತಿಥಿಗಳನ್ನು ಸ್ವಾಗತಿಸುವುದರಲ್ಲಿ ನಿಪುಣರಾಗಿರುವ ಯುಪಿ ಜನರು ಬೀಳ್ಕೊಡುವುದರಲ್ಲಿ ಇನ್ನೂ ಹೆಚ್ಚು ಪರಿಣತರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ
ಜಿಪಂ, ತಾಪಂ ಎಲೆಕ್ಷನ್‌ಗೆ ಎಸ್‌ಐಆರ್‌ ಮತಪಟ್ಟಿ ಇಲ್ಲ? - ಹಳೆ ಪಟ್ಟಿ ಬಳಕೆ: ಖಂಡ್ರೆ