ಹ್ಯಾಕರ್‌ ಶ್ರೀಕಿ ಬಳಸಿ ಶ್ರೀಮಂತ ಮಕ್ಕಳ ಹವಾಲಾ!

Published : May 16, 2026, 10:57 AM IST
Bitcoin sriki

ಸಾರಾಂಶ

ತಮ್ಮ ಮೋಜು ಮಸ್ತಿ ಜೀವನಕ್ಕೆ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಳಸಿಕೊಂಡು ರಾಜ್ಯದ ಪ್ರತಿಷ್ಠಿತ ರಾಜಕಾರಣಿ ಪುತ್ರರು ಸೇರಿ ಶ್ರೀಮಂತ ಕುಟುಂಬದ ಮಕ್ಕಳು ನಡೆಸುತ್ತಿದ್ದ ‘ಹವಾಲಾ ದಂಧೆ’ಯನ್ನು ‘ಗೂಗಲ್ ಚಾಟ್‌’ನಿಂದ ಜಾರಿ ನಿರ್ದೇಶನಾಲಯ (ಇ.ಡಿ.) ಬಯಲುಗೊಳಿಸಿರುವ ಕುತೂಹಲ ಸಂಗತಿ ಬೆಳಕಿಗೆ ಬಂದಿದೆ.

 ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ತಮ್ಮ ಮೋಜು ಮಸ್ತಿ ಜೀವನಕ್ಕೆ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಳಸಿಕೊಂಡು ರಾಜ್ಯದ ಪ್ರತಿಷ್ಠಿತ ರಾಜಕಾರಣಿ ಪುತ್ರರು ಸೇರಿ ಶ್ರೀಮಂತ ಕುಟುಂಬದ ಮಕ್ಕಳು ನಡೆಸುತ್ತಿದ್ದ ‘ಹವಾಲಾ ದಂಧೆ’ಯನ್ನು ‘ಗೂಗಲ್ ಚಾಟ್‌’ನಿಂದ ಜಾರಿ ನಿರ್ದೇಶನಾಲಯ (ಇ.ಡಿ.) ಬಯಲುಗೊಳಿಸಿರುವ ಕುತೂಹಲ ಸಂಗತಿ ಬೆಳಕಿಗೆ ಬಂದಿದೆ.

ಬಿಟ್ ಕಾಯಿನ್ ಹಗರಣ ಮುಂದಿಟ್ಟು ಶ್ರೀಮಂತರ ಹವಾಲಾ ದಂಧೆ ಜಾಲ ಬೇಧಿಸಿರುವ ಇ.ಡಿ, ಈಗ ಶ್ರೀಕಿ ಸ್ನೇಹ ಬಳಗದಲ್ಲಿದ್ದ ರಾಜಕಾರಣಿಯ ಇಬ್ಬರು ಪುತ್ರರು, ಅಪರಾಧ ಜಗತ್ತಿನ ನಂಟು ಹೊಂದಿರುವ ಪರಿವಾರದ ಪುತ್ರ ಹಾಗೂ ಹಿರಿಯ ಸರ್ಕಾರಿ ಅಧಿಕಾರಿ ಮಗನ ಎದೆಯಲ್ಲಿ ನಡುಕು ಹುಟ್ಟಿಸಿದೆ. ಇನ್ನು ಶ್ರೀಕಿ ಬಂಧನ ಬಳಿಕ ಈ ಸಿರಿವಂತರ ಮಕ್ಕಳಿಗೆ ಮತ್ತಷ್ಟು ಭೀತಿ ಹೆಚ್ಚಾಗಿದೆ ಎನ್ನಲಾಗಿದೆ.

ಹತ್ತು ವರ್ಷಗಳ ಹಿಂದೆ ಶ್ರೀಕಿ ಹಾಗೂ ಆತನ ಸ್ನೇಹಿತರ ಮಧ್ಯೆ ನಡೆದಿದ್ದ ಜಿ.ಮೇಲ್‌ (ಗೂಗಲ್‌) ಚಾಟಿಂಗ್ ಹಿಸ್ಟರಿಯನ್ನು ಇ.ಡಿ. ಸಂಗ್ರಹಿಸಿತು. ಈ ವಿವರ ಶೋಧಿಸಿದಾಗ ಬಿಟ್ ಕಾಯಿನ್ ನಗದೀಕರಣಗೊಳಿಸುತ್ತಿದ್ದ ಬ್ಲ್ಯಾಕ್ ಆ್ಯಂಡ್ ವೈಟ್ (ಕಪ್ಪು-ಬಿಳುಪು) ಜಾಲದ ಸುಳಿವು ಲಭಿಸಿದೆ. ಈ ಮಾಹಿತಿ ಆಧರಿಸಿ ಮತ್ತಷ್ಟು ಶೋಧಿಸಿದಾಗ ಬೆಂಗಳೂರು ಮಾತ್ರವಲ್ಲದೆ ಮಹಾರಾಷ್ಟ್ರದ ಮುಂಬೈ, ಪಂಜಾಬ್‌ ಹಾಗೂ ದೆಹಲಿಯಲ್ಲಿ ಹರಡಿರುವ ಹವಾಲಾ ದಂಧೆಯ ಕೊಂಡಿಗಳು ಬೆಳಕಿಗೆ ಬಂದಿವೆ.

ಈ ಹಿನ್ನೆಲೆಯಲ್ಲಿ ದಿಢೀರ್ ಬೆಂಗಳೂರು ಸೇರಿ ಇತರೆಡೆ ಇ.ಡಿ. ಕಾರ್ಯಾಚರಣೆ ನಡೆಸಿತು. ಬಳಿಕ ಹ್ಯಾಕರ್ ಶ್ರೀಕಿ ಜತೆ ಆತನ ಇಬ್ಬರು ಶ್ರೀಮಂತ ಕುಟುಂಬದ ಸ್ನೇಹಿತರನ್ನು ಇ.ಡಿ. ಬಂಧಿಸಿತು ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಮೋಜು ಮಸ್ತಿಗೆ ದಂಧೆ:

ಪೋಕರ್ ಕಂಪನಿ, ರಾಜ್ಯ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್‌ ಹಾಗೂ ತುಮಕೂರಿನ ಬಿಟ್‌ ಕಾಯಿನ್ ಏಜೆನ್ಸಿ ಯೂನಿ ಕಾರ್ನ್ ಸೇರಿ ಕೆಲ ವೆಬ್‌ಸೈಟ್‌ಗಳಿಗೆ ಶ್ರೀಕಿ ಕನ್ನ ಹಾಕಿದ್ದ. 2016ರಲ್ಲಿ ಯೂನಿ ಕಾರ್ನ್ ಕಂಪನಿಯ 66 ಬಿಟ್ ಕಾಯಿನ್ ಗಳನ್ನು ಕಳವು ಮಾಡಲಾಗಿತ್ತು. ಅದಾದ ಬಳಿಕ ಸರ್ಕಾರದ ವೆಬ್‌ಸೈಟ್‌ ಹ್ಯಾಕ್ ಮಾಡಿ 18 ಕೋಟಿ ರು ಹಣ ದೋಚಿದ್ದರು. ಈ ಹಣ ಬಳಸಿಕೊಂಡು ಶ್ರೀಕಿ ಹಾಗೂ ಆತನ ಸ್ನೇಹಿತರು ಮೋಜು ಮಾಡಿದ್ದರು.

ನಮಗೆ ದೊಡ್ಡಮಟ್ಟದ ನಷ್ಟವಾಗಲಿಲ್ಲ. ಆಗ ಬಿಟ್‌ ಕಾಯಿನ್ ಮೌಲ್ಯವೂ ಕಡಿಮೆ ಇತ್ತು. ಈ ದಂಧೆಯಿಂದ ಶ್ರೀಕಿ ಹಾಗೂ ಆತನ ಸ್ನೇಹಿತರು ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾತು ಒಪ್ಪಲ್ಲ. ಆದರೆ ಅವರು ಮೋಜು ಮಸ್ತಿ ಮಾಡಿದ್ದಾರೆ. ತಮ್ಮ ಐಷರಾಮಿ ಜೀವನಕ್ಕಾಗಿ ಖಾಸಗಿ ಹಾಗೂ ಸರ್ಕಾರಿ ವೆಬ್‌ಸೈಟ್‌ಗಳಿಗೆ ಕನ್ನ ಹಾಕಿದ್ದಾರೆ ಎಂದು ಶ್ರೀಕಿ ಬಳಗದಿಂದ ಹಣ ಕಳೆದುಕೊಂಡಿರುವ ಸಂತ್ರಸ್ತರೊಬ್ಬರು ‘ಕನ್ನಡಪ್ರಭ’ಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?:

ಜಾಗತಿಕ ಮಟ್ಟದಲ್ಲಿ 2015ರಲ್ಲಿ ಬಿಟ್ ಕಾಯಿನ್ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿತ್ತು. ತಾಂತ್ರಿಕವಾಗಿ ನಿಪುಣನಾಗಿದ್ದ ಶ್ರೀಕಿಯನ್ನು ಬಳಸಿಕೊಂಡು ಸರ್ಕಾರ ಹಾಗೂ ಕೆಲ ಖಾಸಗಿ ಕಂಪನಿಗಳ ವೆಬ್‌ಸೈಟ್‌ಗಳಿಗೆ ಕನ್ನ ಹಾಕಲಾಗಿತ್ತು. ಹೀಗೆ ವೆಬ್‌ ಸೈಟ್‌ಗಳನ್ನು ಹ್ಯಾಕ್ ಮಾಡಿ ದೋಚಿದ ಹಣವನ್ನು ಬಿಟ್‌ ಕಾಯಿನ್‌ಗೆ ವರ್ಗಾಯಿಸಲಾಗಿತ್ತು. ಬಳಿಕ ಅದನ್ನು ಹವಾಲಾ ಮೂಲಕ ನಗದು ಮಾಡಿಕೊಂಡು ಶ್ರೀಕಿ ಹಾಗೂ ಆತನ ಬಳಗ ಬಳಸಿದೆ ಎಂಬ ಆರೋಪವಿದೆ. ಈ ಸಂಬಂಧ ತುಮಕೂರು ಹಾಗೂ ಬೆಂಗಳೂರಿನ ವಿವಿಧೆಡೆ 6 ಪ್ರಕರಣಗಳು ದಾಖಲಾಗಿವೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಟ್ ಕಾಯಿನ್ ಹಗರಣ ದೊಡ್ಡಮಟ್ಟದ ಸದ್ದು ಮಾಡಿತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬಂದ ಬಳಿಕ ಬಿಟ್ ಕಾಯಿನ್ ಹಗರಣದ ತನಿಖೆಗೆ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತು.

ಇಡಿ ಇಕ್ಕಳಕ್ಕೆ ಸಿಲುಕಿದ್ದು ಹೇಗೆ?

ಬಿಟ್ ಕಾಯಿನ್ ಹಗರಣದ ಕುರಿತು ಸಿಐಡಿ, ಸಿಸಿಬಿ ಹಾಗೂ ಎಸ್ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ನಡೆಸಿದ್ದರು. ಈ ಹಗರಣದ ಹಿಂದೆ ಅಂತಾರಾಜ್ಯ ಹವಾಲಾ ಜಾಲವಿದೆ ಎಂದು ಮೂರು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದ್ದವು. ಆದರೆ ಹೊರ ರಾಜ್ಯಗಳಲ್ಲಿ ತನಿಖೆಗೆ ತಾಂತ್ರಿಕ ಸಮಸ್ಯೆ ಹಾಗೂ ಕೆಲ ಪ್ರಭಾವಿಗಳ ಲಾಬಿ ಸಹ ಅಡ್ಡಿಯಾಯಿತು. ಶ್ರೀಮಂತರ ಮಕ್ಕಳು ಹಣ ಪಡೆದಿರುವ ಬಗ್ಗೆ ಖಚಿತ ಮಾಹಿತಿ ಇತ್ತು. ಆದರೆ ಅದನ್ನು ರುಜುವಾತುಪಡಿಸುವಷ್ಟು ಪುರಾವೆ ಸಿಗಲಿಲ್ಲ. ಹೀಗಾಗಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಇ.ಡಿ.ಗೆ ಪತ್ರ ಬರೆದು ಮಾಹಿತಿ ನೀಡಲಾಯಿತು. ಈ ಮಾಹಿತಿ ಮೇರೆಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ಇ.ಡಿ. ತನಿಖೆಗಿಳಿದಿದೆ. 2012ರಿಂದ 2020 ವರೆಗೆ ಶ್ರೀಕಿ ಹಾಗೂ ಆತನ ಬಳಗದ ಗೂಗಲ್ ಚಾಟ್‌ ಸೇರಿ ಇತರೆ ಸಂವಹನ ಸಂಪರ್ಕ ಜಾಲವನ್ನು ಇ.ಡಿ. ಜಾಲಾಡಿದಾಗ ಹವಾಲ ದಂಧೆ ಪುರಾವೆ ಸಿಕ್ಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಿಲ್ಲಿಯಲ್ಲಿ ₹2 ಕೋಟಿ, ಬಾಂಬೆಯಲ್ಲಿ ₹10 ಲಕ್ಷ

ಬಿಟ್ ಕಾಯಿನ್ ಅನ್ನು ಹವಾಲಾ ನೆಟ್‌ವರ್ಕ್‌ ಬಳಸಿ ಸಿರಿವಂತರ ಮಕ್ಕಳು ನಗದು ಮಾಡಿದ್ದರು. ದೆಹಲಿಗೆ ತನ್ನ ಕಾರು ಚಾಲಕನ್ನು ಕಳುಹಿಸಿ 2 ಕೋಟಿ ರು.ಅನ್ನು ಅಪರಾಧ ಜಗತ್ತಿನ ನಂಟು ಹೊಂದಿದ್ದ ವ್ಯಕ್ತಿಯ ಪುತ್ರ ಪಡೆದಿದ್ದ. ಮುಂಬೈನ ತನ್ನ ಸ್ನೇಹಿತನ ಮೂಲಕ ಬೆಂಗಳೂರಿನ ಪ್ರಭಾವಿ ರಾಜಕಾರಣಿ ಪುತ್ರನಿಗೆ ₹10 ಲಕ್ಷ ಸಂದಾಯವಾಗಿತ್ತು. ಅದೇ ಹಿರಿಯ ಸರ್ಕಾರಿ ಅಧಿಕಾರಿ ಪುತ್ರನ ಐಷಾರಾಮಿ ಕಾರು ಖರೀದಿಗೆ ಹವಾಲಾ ಹಣ ಬಳಕೆಯಾಗಿತ್ತು ಎಂದು ಮೂಲಗಳು ಲೆಕ್ಕ ಕೊಟ್ಟಿವೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯಕ್ಕೆ ಈ ಬಾರಿ ನಾಲ್ಕೈದು ದಿನ ಮೊದಲೇ ಮುಂಗಾರು ಪ್ರವೇಶ ?
ಮಧ್ಯಪ್ರಾಚ್ಯ ಕದನ ಬಿಕ್ಕಟ್ಟು ಎಫೆಕ್ಟ್- ಪೆಟ್ರೋಲ್‌, ಡೀಸೆಲ್‌ ದರ 3 ರು. ಏರಿಕೆ