ಫಲಪುಷ್ಪ ಪ್ರದರ್ಶನಕ್ಕೆ ವೀಕೆಂಡ್ ರಶ್ : ಇಂದು ತೆರೆ

Published : Aug 18, 2025, 10:05 AM IST
Lalbagh Flower Show

ಸಾರಾಂಶ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ ‘ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬೀಳಲಿದೆ.

 ಬೆಂಗಳೂರು :  ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ ‘ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬೀಳಲಿದೆ.

ಭಾನುವಾರದ ಅಂತ್ಯಕ್ಕೆ ಬರೋಬ್ಬರಿ 5.80 ಲಕ್ಷಕ್ಕೂ ಹೆಚ್ಚು ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದು 11 ದಿನಗಳಲ್ಲಿ ಟಿಕೆಟ್‌ಗಳಿಂದ 2.50 ಕೋಟಿ ರು.ಗಳಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ಸೋಮವಾರವೂ (ಆ.18) ಅಂತಿಮ ದಿನದ ಪುಷ್ಪ ಪ್ರದರ್ಶನ ಇರಲಿದ್ದು ವೀಕ್ಷಕರ ಸಂಖ್ಯೆ 6 ಲಕ್ಷ ದಾಟಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಕಳೆದ ಮೂರು ದಿನಗಳಿಂದ ರಜೆ ಮೂಡ್‌ನಲ್ಲಿದ್ದ ಜನರು ಸಹಸ್ರಾರು ಸಂಖ್ಯೆಯಲ್ಲಿ ಲಾಲ್‌ಬಾಗ್‌ಗೆ ಆಗಮಿಸಿ ಫಲಪುಷ್ಪ ಪ್ರದರ್ಶನದ ಸೊಬಗನ್ನು ಕಣ್ತುಂಬಿಕೊಂಡರು. ಭಾನುವಾರವೂ 67 ಸಾವಿರಕ್ಕೂ ಹೆಚ್ಚು ಜನರು ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದರು.ಮಧ್ಯಾಹ್ನ ಹೊತ್ತಿಗೆ ಮಳೆ ಆಗಮಿಸಿದ್ದರಿಂದ ಸ್ವಲ್ಪ ಜನರ ಉತ್ಸಾಹಕ್ಕೆ ತಣ್ಣೀರೆರಚಿತು.

ಫಲಪುಷ್ಪ ಪ್ರದರ್ಶನದ ಮುಕ್ತಾಯಕ್ಕೆ ಒಂದು ದಿನ ಬಾಕಿ ಇದ್ದುದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ನೋಡುಗರು ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಆರ್‌ವಿ ರಸ್ತೆ, ಸಿದ್ದಾಪುರ ರಸ್ತೆ, ಡಬ್ಬಲ್‌ರೋಡ್, ಲಾಲ್‌ಬಾಗ್ ಮುಖ್ಯ ದ್ವಾರದ ಬಳಿ ಸೇರಿದಂತೆ ಉದ್ಯಾನದ ಸುತ್ತಮುತ್ತಲಿನ ರಸ್ತೆಗಳು ವಾಹನ ದಟ್ಟಣೆಯಿಂದ ತುಂಬಿದ್ದವು. ಸಂಜೆಯ ಹೊತ್ತಿಗೆ ವಾಹನಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಹಲವರಿಗೆ ತೀವ್ರ ತೊಂದರೆಯಾಯಿತು.

ಯುವಸಮೂಹ ಸೇರಿದಂತೆ ಆಗಮಿಸಿದ್ದ ಪುಷ್ಪ ಪ್ರಿಯರು ವೈವಿಧ್ಯಮಯ ಹೂವುಗಳ ಕಲರವವನ್ನು ಕಣ್ತುಂಬಿಕೊಂಡು ಆನಂದಿಸಿದರು. ಗಾಜಿನಮನೆ ಕೇಂದ್ರ ಭಾಗದಲ್ಲಿರುವ ಕೋಟೆ, ರಾಣಿ ಚೆನ್ನಮ್ಮನವರ ಐಕ್ಯಸ್ಮಾರಕ ಪುಷ್ಪ ಮಾದರಿಗಳ ಮುಂದೆ ಅನೇಕರು ಸೆಲ್ಪೀ ಮತ್ತು ಪೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಇಂದು ಟಿಕೆಟ್‌ ದರ ₹80

ಸೋಮವಾರ ವಯಸ್ಕರಿಗೆ ₹80, ಮಕ್ಕಳಿಗೆ ₹30 ಪ್ರವೇಶ ಶುಲ್ಕವಿರುತ್ತದೆ. ಸಮಯ: ಬೆಳಗ್ಗೆ 9 ರಿಂದ ಸಂಜೆ 6.30 ರವರೆಗೆ ಉದ್ಯಾನದ ನಾಲ್ಕು ಗೇಟ್‌ಗಳಲ್ಲಿ ಟಿಕೆಟ್‌ ವಿತರಣೆ ನಡೆಯಲಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ(ಲಾಲ್‌ಬಾಗ್‌) ಡಾ.ಎಂ.ಜಗದೀಶ್‌ ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನವಸಮಾಜ ನಿರ್ಮಾಣ ಡಾ.ಅಂಬೇಡ್ಕರ್ ಕನಸು
ವಿದ್ಯಾರ್ಥಿಗಳು ಗುರಿ ಮುಟ್ಟುವವರೆಗೂ ಮುಂದೆ ಸಾಗಿ