ಉಚಿತ ವಿದ್ಯುತ್‌ ಕೊಡಿ ಅಂತ ಯಾರು ಕೇಳಿದ್ರು? : ಹೈಕೋರ್ಟ್‌

ಸಾರಾಂಶ

ಸ್ಮಾರ್ಟ್ ಮೀಟರ್‌ಗಳಿಗೆ ದುಬಾರಿ ಬೆಲೆ ನಿಗದಿಪಡಿಸಿರುವ ಬೆಸ್ಕಾಂ ಮತ್ತು ಸರ್ಕಾರದ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌

 ಬೆಂಗಳೂರು : ಸ್ಮಾರ್ಟ್ ಮೀಟರ್‌ಗಳಿಗೆ ದುಬಾರಿ ಬೆಲೆ ನಿಗದಿಪಡಿಸಿರುವ ಬೆಸ್ಕಾಂ ಮತ್ತು ಸರ್ಕಾರದ ಕ್ರಮವನ್ನು   ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಇದೆಲ್ಲವೂ ಉಚಿತ ಗ್ಯಾರಂಟಿ ಯೋಜನೆಗಳಿಂದ ಸೃಷ್ಟಿಯಾಗಿರುವ ಸಮಸ್ಯೆಗಳೇ? ಉಚಿತವಾಗಿ ವಿದ್ಯುತ್ ಕೊಡಿ ಎಂದು (ನಿಮ್ಮನ್ನು) ಯಾರು ಕೇಳಿದ್ರು? ಏಕಾಏಕಿ ದುಬಾರಿ ಬೆಲೆ ನಿಗದಿಪಡಿಸಿದರೆ, ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿದರೆ ಬಡವರು ಎಲ್ಲಿಗೆ ಹೋಗಬೇಕು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.

ಹೊಸದಾಗಿ ನಿರ್ಮಿಸಿರುವ ತಮ್ಮ ಮನೆಗೆ 10 ಸಾವಿರ ರು. ಮೌಲ್ಯದ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿ ದೊಡ್ಡಬಳ್ಳಾಪುರದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀಡಿರುವ ಪತ್ರ ಪ್ರಶ್ನಿಸಿ ಎಂ.ಜಯಲಕ್ಷ್ಮೀ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಮೌಖಿಕವಾಗಿ ಬೇಸರ ವ್ಯಕ್ತಪಡಿಸಿತು.

ಅಲ್ಲದೆ ಅರ್ಜಿದಾರರಿಗೆ ಬೆಸ್ಕಾಂ ನೀಡಿರುವ ಪತ್ರಕ್ಕೆ ತಡೆಯಾಜ್ಞೆ ನೀಡಿದ ನ್ಯಾಯಪೀಠ, ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬೆಸ್ಕಾಂಗೆ ನೋಟಿಸ್ ಜಾರಿಗೊಳಿಸಿ ಜೂ.4ಕ್ಕೆ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್) ನಿಯಮಗಳು 2024ರ ಅನ್ವಯ 2025ರರ ಏ.1ರಿಂದ ಜಾರಿಗೆ ಬರುವಂತೆ ಎಲ್ಲ ವರ್ಗದ ಗ್ರಾಹಕರು ಪ್ರಿಪೇಯ್ಡ್‌ ಮೀಟರ್‌ಗಳನ್ನು ಪಡೆಯಲು ಅವಕಾಶವಿದೆ. ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಪ್ರಿಪೇಯ್ಡ್‌ ಕಡ್ಡಾಯವಾಗಿದೆ. ಶಾಶ್ವತ ಸಂಪರ್ಕ ಪಡೆಯುವವರಿಗೆ ಮಾತ್ರ ಪಿಪೇಯ್ಡ್‌ ಮೀಟರ್‌ ಆಯ್ಕೆಯಾಗಿರಲಿದೆ ಎಂದು ತಿಳಿಸಿದರು.

ಅಲ್ಲದೆ, ಅರ್ಜಿದಾರರು ಶಾಶ್ವತ ಸಂಪರ್ಕ ಪಡೆಯಲಿದ್ದಾರೆ. ಸದ್ಯ ಸ್ಮಾರ್ಟ್ ಮೀಟರ್ ಅಳವಡಿಸುವಂತೆ ಒತ್ತಾಯಿಸಿ ಅರ್ಜಿದಾರರಿಗೆ ಬೆಸ್ಕಾಂ ಪತ್ರ ನೀಡಿದೆ. ಈ ಮೀಟರ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಹೊರ ಭಾಗದ ಏಜೆನ್ಸಿಗಳ ಮೂಲಕ ಖರೀದಿಸಬೇಕಿದೆ. ಈ ಹಿಂದೆ ಮೀಟರ್‌ಗೆ ಎರಡು ಸಾವಿರ ಬೆಲೆಯಿತ್ತು. ಅದೇ ಮೀಟರ್‌ಗೆ ಈಗ 10 ಸಾವಿರ ರು. ಪಾವತಿಸಲು ಒತ್ತಾಯಿಸಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.

ಬಡವರು ಎಲ್ಲಿಗೆ ಹೋಗಬೇಕು?:

ಆಗ ಸರ್ಕಾರಿ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಎಂದು ತಿಳಿಸಿ ಈಗ ಶಾಶ್ವತ ಸಂಪರ್ಕಕ್ಕೂ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಒತ್ತಾಯಿಸುವುದು ಕಠಿಣ ಕ್ರಮ. ಈ ರೀತಿ ಕಡ್ಡಾಯ ಮಾಡಿದಲ್ಲಿ ಬಡವರು ಎಲ್ಲಿಗೆ ಹೋಗಬೇಕು? ಅದೂ ಹೊರ ಗುತ್ತಿಗೆದಾರರ ಮೂಲಕ ಸ್ಮಾರ್ಟ್ ಮೀಟರ್‌ಗಳನ್ನು ಖರೀದಿಸುವುದು ಅತ್ಯಂತ ಅಪಾಯಕಾರಿ ಎಂದು ಕಟುವಾಗಿ ನುಡಿಯಿತು.

ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗದ (ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್) ನಿಯಮಗಳು 2025ರ ಅನ್ವಯ ತಾತ್ಕಾಲಿಕ ಸಂಪರ್ಕಗಳನ್ನು ಹೊರತುಪಡಿಸಿ ಇತರೆ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಗ್ರಾಹಕರಿಗೆ ಆಯ್ಕೆಗೆ ಬಿಟ್ಟಿದ್ದು. ಅರ್ಜಿದಾರರ ಸಂಪರ್ಕ ಶಾಶ್ವತ ಸ್ವರೂಪದ್ದಾಗಿದೆ. ಎರಡು ಸಾವಿರ ರು. ಇದ್ದ ಮೀಟರ್ 10 ಸಾವಿರ ರು.ಗೆ ಹೆಚ್ಚಿಸುವುದರಿಂದ ಗ್ರಾಹಕರಿಗೆ ದೊಡ್ಡ ಹೊರೆಯಾಗಲಿದೆ ಎಂದು ಪೀಠ ಕಳವಳ ವ್ಯಕ್ತಪಡಿಸಿತು.

ಪ್ರಕರಣದ ಹಿನ್ನೆಲೆ:

ದೊಡ್ಡಬಳ್ಳಾಪುರದ ನಿವಾಸಿಯಾದ ಅರ್ಜಿದಾರೆ ಜಯಲಕ್ಷ್ಮೀ ಹೊಸದಾಗಿ ನಿರ್ಮಿಸಿರುವ ತಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ಸಿಂಗಲ್ ಫೇಸ್‌ನಿಂದ ತ್ರೀ-ಫೇಸ್‌ ಮೀಟರ್‌ಗೆ ಪರಿವರ್ತನೆ ಮಾಡಿಕೊಳ್ಳಲು ಮನವಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಬೆಸ್ಕಾಂ ಸಹಾಯಕ ಎಂಜಿನಿಯರ್‌ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಸೂಚಿಸಿ 2025ರ ಏ.2ರಂದು ಪತ್ರ ನೀಡಿದ್ದರು. ಪತ್ರದ ರದ್ದತಿಗೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿರುವ ಜಯಲಕ್ಷ್ಮೀ, ಶಾಶ್ವತ ಸ್ಮಾರ್ಟ್ ಮೀಟರ್ ವಿದ್ಯುತ್ ಸಂಪರ್ಕ ಪಡೆಯುವ ಸೌಲಭ್ಯ ಕಡ್ಡಾಯವಲ್ಲ ಎಂದು ಘೋಷಿಸುವಂತೆ ಕೋರಿದ್ದಾರೆ.

ಏನಿದು ಪ್ರಕರಣ?

- 10 ಸಾವಿರ ರು. ಮೌಲ್ಯದ ಸ್ಮಾರ್ಟ್‌ಮೀಟರ್‌ ಅಳವಡಿಕೆಗೆ ಬೆಸ್ಕಾಂ ನೀಡಿದ್ದ ನೋಟಿಸ್‌ ಪ್ರಶ್ನಿಸಿದ್ದ ದೊಡ್ಡಬಳ್ಳಾಪುರ ಮಹಿಳೆ

- ಈ ಅರ್ಜಿಯ ವಿಚಾರಣೆ ವೇಳೆ ಬೆಸ್ಕಾಂ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯ

- ತಾತ್ಕಾಲಿಕ ಸಂಪರ್ಕಕ್ಕೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಎಂದು ತಿಳಿಸಿ ಈಗ ಶಾಶ್ವತ ಸಂಪರ್ಕಕ್ಕೂ ಒತ್ತಾಯಿಸುವುದು ಕಠಿಣ ಕ್ರಮ

- ಈ ರೀತಿ ಕಡ್ಡಾಯ ಮಾಡಿದರೆ ಬಡವರು ಎಲ್ಲಿಗೆ ಹೋಗಬೇಕು? ಹೊರಗುತ್ತಿಗೆದಾರರಿಂದ ಮೀಟರ್‌ ಖರೀದಿ ಅಪಾಯಕಾರಿ

- 2 ಸಾವಿರ ರು. ಇದ್ದ ಮೀಟರ್‌ ಬೆಲೆಯನ್ನು 10 ಸಾವಿರ ರು.ಗೆ ಹೆಚ್ಚಿಸುವುದು ಗ್ರಾಹಕರಿಗೆ ಹೊರೆ: ನ್ಯಾ। ನಾಗಪ್ರಸನ್ನ

- ಬೆಸ್ಕಾಂ ನೋಟಿಸ್‌ಗೆ ತಡೆ ನೀಡಿದ ಕೋರ್ಟ್‌. ರಾಜ್ಯ ಸರ್ಕಾರ, ಬೆಸ್ಕಾಂಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಜೂ.4ಕ್ಕೆ ನಿಗದಿ

Share this article