ಕೋಮಾದರಲ್ಲಿರುವ ಪತಿಯ ಬ್ಯಾಂಕ್‌ ಖಾತೆ ನಿರ್ವಹಣೆಗೆ ಪತ್ನಿಗೆ ಅನುಮತಿ

Published : May 15, 2025, 07:06 AM IST
karnataka highcourt

ಸಾರಾಂಶ

ಅಪರೂಪದ ನರರೋಗದಿಂದ ಬಳಲುತ್ತಾ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕೋಮಾ ಸ್ಥಿತಿಯಲ್ಲಿರುವ ವೈದ್ಯರೊಬ್ಬರ ಮೂರು ಬ್ಯಾಂಕ್‌ ಖಾತೆಗಳಿಂದ ಹಣ ಡ್ರಾ ಮಾಡಲು ಅವರ ಪತ್ನಿಗೆ ಅನುಮತಿ

ಬೆಂಗಳೂರು : ಅಪರೂಪದ ನರರೋಗದಿಂದ ಬಳಲುತ್ತಾ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕೋಮಾ ಸ್ಥಿತಿಯಲ್ಲಿರುವ ವೈದ್ಯರೊಬ್ಬರ ಮೂರು ಬ್ಯಾಂಕ್‌ ಖಾತೆಗಳಿಂದ ಹಣ ಡ್ರಾ ಮಾಡಲು ಅವರ ಪತ್ನಿಗೆ ಅನುಮತಿ ನೀಡುವಂತೆ ಬ್ಯಾಂಕುಗಳಿಗೆ ಆದೇಶಿಸಿ ಹೈಕೋರ್ಟ್‌ ಮಾನವೀಯತೆ ಮರೆದಿದೆ. ಪತಿ ಐಸಿಯುನಲ್ಲಿ ಇರುವುದರಿಂದ ವೈದ್ಯಕೀಯ ಮತ್ತು ಕುಟುಂಬ ದಿನದ ಖರ್ಚು-ವೆಚ್ಚ ಭರಿಸಲುಸುವ ಸಲುವಾಗಿ ಹಣ ಡ್ರಾ ಮಾಡಲು ತಮಗೆ ಅನುಮತಿ ನೀಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ರಾಜಾಜಿನಗರದ ನಿವಾಸಿ ಸಂಧ್ಯಾ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿ ಪುರಸ್ಕರಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರರ ಪತಿ ನರಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಯಿಂದ ನರಳುತ್ತಿದ್ದಾರೆ. ಇದರಿಂದ ಸಂಧ್ಯಾ ಅವರನ್ನು ಪತಿಯ ಗಾರ್ಡಿಯನ್‌ (ಪಾಲಕರು) ಆಗಿ ನೇಮಕ ಮಾಡಲಾಗುತ್ತಿದೆ. ತಮ್ಮ ಪತಿಗೆ ಸೇರಿದ ಖಾತೆಗಳಿಂದ ಹಣ ಡ್ರಾ ಮಾಡಲು ಸಂಧ್ಯಾ ಅವರಿಗೆ ಬ್ಯಾಂಕ್‌ಗಳು ಅನುಮತಿ ನೀಡಬೇಕು. ಆ ವಿಚಾರದಲ್ಲಿ ಬ್ಯಾಂಕುಗಳಿಂದ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಮತ್ಯಾವುದೇ ಅಗತ್ಯ ಪರಿಸ್ಥಿತಿ ಎದುರಾದರೂ ಅರ್ಜಿದಾರರು ಪುನಃ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಆದೇಶಿಸಿದೆ.

ಪ್ರಕರಣದ ವಿವರ:

 ಡಾ.ಎಚ್‌.ವಿ. ಅನಿಲ್‌ ಕುಮಾರ್‌ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಆದರೆ, ನಿವೃತ್ತಿ ಹೊಂದುವ ಕೆಲವೇ ತಿಂಗಳ ಮುನ್ನ ಅವರಿಗೆ ಹಲವು ಆರೋಗ್ಯ ಸಮಸ್ಯೆ ಕಂಡು ಬಂದಿತ್ತು. ಹೀಗಾಗಿ. 2024ರ ಜೂ.23ರಿಂದ ಅವರು ಆಸ್ಪತ್ರೆಯಲ್ಲಿ ವೆಂಟಿಲೇಟ್‌ ಆಧಾರದಲ್ಲಿ ತೀವ್ರ ನಿಗಾ ಘಟಕದಲ್ಲಿದ್ದಾರೆ.

ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ನರವಿಜ್ಞಾನ ವಿಭಾಗದ ವೈದ್ಯರು ಡಾ.ಅನಿಲ್ ಕುಮಾರ್‌ ಅವರು ‘ಗ್ವಿಲೆನ್ ಬ್ಯಾರೆ ಸಿಂಡ್ರೋಮ್’ ಎಂಬ ಅಪರೂಪದ ನರ ರೋಗದಿಂದ ಬಳಲುತ್ತಿದ್ದಾರೆ ಎಂದು ಪ್ರಮಾಣೀಕರಿಸಿ, ವೆಂಟಿಲೇಟರ್‌ ನಲ್ಲೇ ಮುಂದುವರಿಯಬೇಕು ಎಂದು ಸೂಚಿಸಿದ್ದರು. ಅದರಂತೆ 2025ರ ಫೆ.22ರಿಂದ ಮಾ.18ರವರೆಗೆ ವೈದ್ಯರು ಡಾ.ಅನಿಲ್‌ ಕುಮಾರ್ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದಾರೆ. ವೆಂಟಿಲೇಟರ್‌ ವ್ಯವಸ್ಥೆ ಶಾಶ್ವತವಾಗಿ ಅಳವಡಿಸಲಾಗಿದೆ. ಇದರಿಂದ ಬರೆಯಲು ಮತ್ತು ಸಹಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅನಿಲ್‌ ಕುಮಾರ್‌ ಇದ್ದಾರೆ.

ಅನಿಲ್‌ ಕುಮಾರ್‌ ಅವರು ಮೂರು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ. ಅನಿಲ್‌ ಕುಮಾರ್‌ ಅವರು ಬರೆಯಲು ಮತ್ತು ಸಹಿ ಮಾಡಲಾಗದ ಪರಿಸ್ಥಿತಿಯಲ್ಲಿರುವುದರಿಂದ ಬ್ಯಾಂಕ್‌ನಿಂದ ಹಣ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಪತಿಯ ಮೂರು ಖಾತೆಗಳನ್ನು ನಿರ್ವಹಣೆ ಮಾಡಲು ಮತ್ತು ಖಾತೆಯಿಂದ ಹಣ ವಿತ್‌ ಡ್ರಾ ಮಾಡಲು ತಮಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಂಧ್ಯಾ ಅವರ ಬ್ಯಾಂಕ್‌ಗಳಿಗೆ ಮನವಿ ಪತ್ರ ನೀಡಿ ಅಗತ್ಯ ದಾಖಲೆ ಒದಗಿಸಿದ್ದರು.

ಆ ಮನವಿಯನ್ನು ಬ್ಯಾಂಕ್‌ಗಳು ಪರಿಗಣಿಸದ ಹಿನ್ನೆಲೆಯಲ್ಲಿ ಸಂಧ್ಯಾ ಅವರು, ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿದಾರರ ಪರ ವಕೀಲ ಎಚ್‌.ವೆಂಕಟೇಶ್‌ ದೊಡ್ಡೇರಿ ವಾದ ಮಂಡಿಸಿ, ತಮ್ಮ ಕುಟುಂಬ ಜೀವನ ನಡೆಸಲು ಹಾಗೂ ಪತಿಯ ಚಿಕಿತ್ಸೆಯ ಖರ್ಚಿಗೆ ಬ್ಯಾಂಕಿನಿಂದ ಹಣ ಡ್ರಾ ಮಾಡಲು ಸಂಧ್ಯಾ ಅವರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ತಾವು ತೀವ್ರತರದಲ್ಲಿ ಹಣಕಾಸು ಸಮಸ್ಯೆ ಒಳಗಾಗಿದ್ದೇವೆ. ಹಾಗಾಗಿ, ಹಣ ಡ್ರಾ ಮಾಡಲು ಅರ್ಜಿದಾರರಿಗೆ ಅನುಮತಿ ನೀಡುವಂತೆ ಬ್ಯಾಂಕಿಗಳಿಗೆ ನಿರ್ದೇಶನ ನೀಡಬೇಕು. ಸಂಧ್ಯಾ ಅವರನ್ನೇ ಪತಿಯ ಗಾರ್ಡಿಯನ್‌ ಆಗಿ ನೇಮಕ ಮಾಡಬೇಕು ಎಂದು ಕೋರಿದ್ದರು.

ಸಂಧ್ಯಾ ಅವರ ಮನವಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ ಎಂದು ಬ್ಯಾಂಕಿನ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಈ ಆದೇಶ ಮಾಡಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಮನುಷ್ಯ ಕಾಯಿಲೆಗಳಿಗೆ ಆಹಾರ ಪದ್ಧತಿಯೇ ಕಾರಣ
ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಆದ್ಯತೆ: ಎಂಬಿಪಾ