ರಾಮನಗರ: ನೇರ ಹಣಾಹಣಿಯಿಂದಾಗಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆ ಫಲಿತಾಂಶ ಮಂಗಳವಾರ ಹೊರ ಬೀಳುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಫೆ.16 ರಂದು ಮತದಾನ ಮುಗಿದ ಮೂರು ದಿನಗಳ ನಂತರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಇದು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ.
ಕಳೆದ ನಾಲ್ಕೈದು ತಿಂಗಳಿಂದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ಟಿಕೆಟ್ ಗಿಟ್ಟಿಸಿ, ಕಾರ್ಯಕರ್ತರು ಹಾಗೂ ಬೆಂಬಲಿಗರ ದಂಡು ಕಟ್ಟಿಕೊಂಡು ಚುನಾವಣೆ ಎದುರಿಸಿರುವ ಅಭ್ಯರ್ಥಿಗಳು ತಮ್ಮೆಲ್ಲ ಸಾಮರ್ಥ್ಯ ಸುರಿದಿದ್ದಾಗಿದೆ. ಅಲ್ಲದೆ, ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷಾ ಸಮಯ ಇದಾಗಿದ್ದರೂ ಶಿಕ್ಷಕರು ತಮ್ಮ ಅಭ್ಯರ್ಥಿ ಪರವಾಗಿ ಭರ್ಜರಿಯಾಗಿಯೇ ಪ್ರಚಾರ ನಡೆಸಿದ್ದರು.ಸೋಲು-ಗೆಲುವಿನ ಲೆಕ್ಕಾಚಾರ:
ಕೆಲ ಅಭ್ಯರ್ಥಿಗಳು ಗೆಲುವಿಗಾಗಿ ತಮ್ಮ ತಮ್ಮ ಮನೆ ದೇವರ ಮೊರೆ ಹೋಗಿದ್ದಾರೆ. ಭಗವಂತ ಹೇಗಾದರೂ ಮಾಡಿ ದಡ ಮುಟ್ಟಿಸಪ್ಪಾ ಎಂದು ಮೊರೆ ಇಡುತ್ತಿದ್ದಾರೆ. ಮತ್ತಷ್ಟು ಅಭ್ಯರ್ಥಿಗಳು ಎಂದಿನಂತೆ ತಮ್ಮ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.
ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು. ಇದೇ ಮೊದಲ ಬಾರಿಗೆ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಆದರೆ, ಉಪಚುನಾವಣೆಯನ್ನು ಆಡಳಿತಾರೂಢ ಕಾಂಗ್ರೆಸ್ ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿತು. ಹೀಗಾಗಿ ಫಲಿತಾಂಶ ಕುತೂಹಲ ಮೂಡಿಸಿದೆ.
ಜೆಡಿಎಸ್‌ನಿಂದ ಸ್ಪರ್ಧಿಸಿ ಸತತವಾಗಿ ಮೂರು ಬಾರಿ ಹಾಗೂ ಬಿಜೆಪಿಯಿಂದ ಒಂದು ಬಾರಿ ಗೆಲುವು ಸಾಧಿಸಿದ್ದ ಪುಟ್ಟಣ್ಣ ಕಾಂಗ್ರೆಸ್ ಅಭ್ಯರ್ಥಿಯಾದರು. ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪ್ರಬಲ ಪೈಪೋಟಿವೊಡ್ಡಿದೆ. ಜೆಡಿಎಸ್ ವರಿಷ್ಠರು ಕ್ಷೇತ್ರದಲ್ಲಿ ಪಾರಮ್ಯ ಮುಂದುವರಿಸಲು ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದರು. ಇದಕ್ಕೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಂದಲೂ ಉತ್ತಮ ಸಹಕಾರ ದೊರಕಿತು.
ಬಿಜೆಪಿ - ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮಾತ್ರವಲ್ಲ, ಮೂರು ಪಕ್ಷಗಳ ನಾಯಕರ ಪಾಲಿಗೂ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇವರಲ್ಲಿ ಯಾರ ಪ್ರಭಾವ ಎಷ್ಟು ಕೆಲಸ ಮಾಡಿದೆ ಎಂಬುದು ಫಲಿತಾಂಶದಂದು ಗೊತ್ತಾಗಲಿದೆ.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ಮಹತ್ವ ಪಡೆದುಕೊಂಡಿದ್ದು, ಅಭ್ಯರ್ಥಿ ಗೆಲುವು ರಾಜಕೀಯ ಪಕ್ಷಕ್ಕೆ ಟಾನಿಕ್ ನೀಡಲಿದೆ. ಜೆಡಿಎಸ್ ಪಕ್ಷವು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿಕೊಂಡ ತರುವಾಯ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ ಫಲಿತಾಂಶ ಉಭಯ ಪಕ್ಷಗಳ ಗೆಳೆತನದ ಮೇಲೂ ಪರಿಣಾಮ ಬೀರಿದರೆ, ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಸಾಕ್ಷಿಯಾಗಲಿದೆ.ಬಾಕ್ಸ್ .......2020ರಲ್ಲಿ ಶೇ. 66.18 ಮತದಾನ
ಕಣದಲ್ಲಿರುವ ಅಭ್ಯರ್ಥಿಗಳು:
ಕಾಂಗ್ರೆಸ್ - ಪುಟ್ಟಣ್ಣ,ಜೆಡಿಎಸ್ - ಬಿಜೆಪಿ - ಎ.ಪಿ.ರಂಗನಾಥ
ಪಕ್ಷೇತರರು - ಕೃಷ್ಣವೇಣಿ, ಬಿ.ನಾರಾಯಣಸ್ವಾಮಿ, ಮಂಜುನಾಥ್ , ಬಿ.ಕೆ.ರಂಗನಾಥ, ಟಿ.ರಂಗನಾಥ, ವೀಣಾ ಸೆರೆವಾ, ಸುನಿಲ್ ಕುಮಾರ್.18.ಕೆಆರ್ ಎಂಎನ್ 8,9.ಜೆಪಿಜಿ8.ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್