ಪಕ್ಷಿಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿ

KannadaprabhaNewsNetwork | Published : Feb 19, 2024 1:32 AM

ಸಾರಾಂಶ

ಹಾರ್ನ್‌ಬಿಲ್ ಪಕ್ಷಿ ರಕ್ಷಣೆಯ ದೃಷ್ಠಿಯಿಂದ ಹಾರ್ನ್‌ಬಿಲ್ ಪಕ್ಷಿ ಗೂಡು ರಕ್ಷಣೆ, ಗೂಡು ದತ್ತು ಸ್ವೀಕಾರ ಮಾಡಿದವರನ್ನು ಗುರುತಿಸಿ ಅವರಿಗೆ ಮುಂಬರುವ ಹಾರ್ನ್‌ಬಿಲ್ ಹಬ್ಬದಲ್ಲಿ ಗೌರವಿಸಲಾಗುವುದು. ಯುವಕರಲ್ಲಿ ಪಕ್ಷಿಗಳು ಕುರಿತು ಜಾಗೃತಿ ಮೂಡಿಸುವ ಹಾಗೂ ಅದರ ಉಳಿವಿಗಾಗಿ ಅರಿವು ಮೂಡಿಸುವುದು

ದಾಂಡೇಲಿ: ಹಳಿಯಾಳ, ದಾಂಡೇಲಿ, ಜೋಯಿಡಾ ಭಾಗಗಳಲ್ಲಿ ಅರಣ್ಯ ಸಂಪತ್ತು ಹಲವಾರು ಕಾರಣಗಳಿಂದ ಕಡಿಮೆಯಾಗುತ್ತಿದೆ. ಇದರಿಂದ ಪಕ್ಷಿಗಳ ಸಂತತಿಗೆ ಕುತ್ತು ಬಂದಿದೆ. ಪರಿಸರ ಸಂರಕ್ಷಣೆಗೆ ಮುನುಕುಲ ನಿಷ್ಕಾಳಜಿ ತೋರುತ್ತಿದೆ. ಮುಂದಿನ ಜನಾಂಗಕ್ಕೆ ಪಕ್ಷಿಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಅಧ್ಯಕ್ಷರು, ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಅವರು ಭಾನುವಾರು ಹಾರ್ನ್‌ಬಿಲ್‌ ಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಮಹತ್ವ ನೀಡಬೇಕು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಅವಕಾಶಗಳು ಪ್ರವಾಸೋದ್ಯಮದಿಂದ ತೆರೆದುಕೊಳ್ಳುವಂತೆ ಮಾಡಬೇಕು. ಈ ಹಬ್ಬ ಮಾಡುವ ಉದ್ದೇಶ ಪಕ್ಷಿ ಪ್ರಭೇದಗಳ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವುದಾಗಿದೆ ಎಂದರು.

ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತ ರೆಡ್ಡಿ ಪ್ರಾಸ್ತಾವಿಕ ಮಾತನಾಡಿ, ಹಾರ್ನ್‌ಬಿಲ್ ಹಬ್ಬದಲ್ಲಿ ೧೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಹಾರ್ನ್‌ಬಿಲ್ ಹಬ್ಬ ಯಶಸ್ವಿಗೊಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಳಿಯಾಳ ಡಿಎಫ್‌ಒ ಡಾ. ಪ್ರಶಾಂತಕುಮಾರ ಕೆ.ಸಿ. ಹಾರ್ನ್‌ಬಿಲ್ ಪಕ್ಷಿ ರಕ್ಷಣೆಯ ದೃಷ್ಠಿಯಿಂದ ಹಾರ್ನ್‌ಬಿಲ್ ಪಕ್ಷಿ ಗೂಡು ರಕ್ಷಣೆ, ಗೂಡು ದತ್ತು ಸ್ವೀಕಾರ ಮಾಡಿದವರನ್ನು ಗುರುತಿಸಿ ಅವರಿಗೆ ಮುಂಬರುವ ಹಾರ್ನ್‌ಬಿಲ್ ಹಬ್ಬದಲ್ಲಿ ಗೌರವಿಸಲಾಗುವುದು. ಯುವಕರಲ್ಲಿ ಪಕ್ಷಿಗಳು ಕುರಿತು ಜಾಗೃತಿ ಮೂಡಿಸುವ ಹಾಗೂ ಅದರ ಉಳಿವಿಗಾಗಿ ಅರಿವು ಮೂಡಿಸುವುದು ನಮ್ಮ ಇಲಾಖೆ ಪ್ರಮುಖ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಕ್ಷಿ,ಪ್ರಾಣಿ ರಕ್ಷಣೆ ನಿಸರ್ಗದ ಅಧ್ಯಯನದ ಹಾಗೂ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಕಾರ್ಯದಲ್ಲಿ ವಿಶೇಷ ಸೇವೆ ಸಲ್ಲಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮತ್ತು ಚಿತ್ರಕಲೆ, ರಸ ಪ್ರಶ್ನೆ, ಪ್ರಬಂಧ ಸ್ಪರ್ಧೆ, ಕ್ಲೇ ಮಾಡಲ್ ಸ್ಪರ್ಧೆ ವಿಜೇತರಿಗೆ ಶಾಸಕರು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಹಾರ್ನ್‌ಬಿಲ್‌ ಹಬ್ಬದಲ್ಲಿ ರಾಜ್ಯ ಹಾಗೂ ದೇಶಗಳಿಂದ ಬಂದ ಪರಿಸರ ಪ್ರೇಮಿಗಳು ಹಾಗೂ ವಿಷಯ ತಜ್ಞರು ತಮ್ಮ ಸಂಶೋಧನಾ ವರದಿ ಮಂಡಿಸಿದ್ದಾರೆ. ಸ್ಥಳೀಯ ಶಾಲಾ ಶಿಕ್ಷಕರ ಹಾಗೂ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ ಮತ್ತು ಐಸಿಟಿ) ವಿಭಾಗದ ಸ್ಮಿತಾ ಬಿಜ್ಜೂರು, ಕೆನರಾ ವೃತ್ತ ಶಿರಸಿ ವಿಭಾಗದ ಸಂರಣ್ಯಾಧಿಕಾರಿ ಕೆ.ವಿ. ವಸಂತ ರೆಡ್ಡಿ, ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಕೆ.ಸಿ., ಕಾಳಿ ಹುಲಿ ಸಂರಕ್ಷಿತ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ ಶಿಂಧೆ ದೆವಬಾ, ಕಾರವಾರದ ಸಾಮಾಜಿಕ ಅರಣ್ಯ ವಿಭಾಗದ ಮಂಜುನಾಥ ಜಿ. ನಾವಿ, ಬೆಂಗಳೂರಿನ ಪರಿಸರ ವಿಭಾಗದ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ., ಯಲ್ಲಾಪುರ ಅರಣ್ಯ ವಿಭಾಗದ ಹರ್ಷಾಭಾನು, ಹೊನ್ನಾವರ ವಿಭಾಗದ ಯೋಗೀಶ್ ಸಿ.ಕೆ., ತಹಸೀಲ್ದಾರ್‌ ಎಂ.ಎನ್. ಮಠದ ಇದ್ದರು.

ಧಾರವಾಡದ ಆಕಾಶವಾಣಿ ನಿರೂಪಕಿ ಮೇಘಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ದಾಂಡೇಲಿ ವಲಯ ಅರಣ್ಯಾಧಿಕಾರಿ ಸಂತೋಷ ಚವ್ಹಾಣ್ ಸ್ವಾಗತಿಸಿ, ಪರಿಚಯಿಸಿದರು.

Share this article