ಹಂಚಿಕೆಯಾದ ಪ್ರಮಾಣದಲ್ಲೇ ಬೆಂಗಳೂರಿಗೆ ನೀರು: ಕೃಷ್ಣ ಬೈರೇಗೌಡ

KannadaprabhaNewsNetwork |  
Published : Aug 21, 2026, 01:30 AM IST
ಕೃಷ್ಣ ಬೈರೇಗೌಡ | Kannada Prabha

ಸಾರಾಂಶ

ಕಾವೇರಿ 1 ರಿಂದ 5ನೇ ಹಂತದವರೆಗೆ ಮಳವಳ್ಳಿಯ ತೊರೆಕಾಡನಹಳ್ಳಿಯಿಂದ ನೀರು ಪೂರೈಸಲಾಗುತ್ತಿದ್ದು, ಅದೇ ಕಾರಿಡಾರ್ ಅಡಿಯಲ್ಲಿ ಹೆಚ್ಚುವರಿ ಕೊಳವೆಗಳನ್ನು ಅಳವಡಿಸಲು ಜಾಗದ ಅಭಾವವಿರುತ್ತದೆ. ಹಾಗಾಗಿ, ಕಾವೇರಿ 6ನೇ ಹಂತದ ಯೋಜನೆಯಡಿಯಲ್ಲಿ ಕಟ್ಟೇರಿಯಿಂದ ನೀರು ಪೂರೈಸಲು ಯೋಜಿಸಲಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

‘ಕಾವೇರಿ ಕಣಿವೆಯಲ್ಲಿ ಬೆಂಗಳೂರು ಮತ್ತು ಅದರ ಉಪ ನಗರಕ್ಕೆ ಕುಡಿಯುವ ನೀರಿನ ಹಂಚಿಕೆಯಾಗಿರುವ ಪ್ರಮಾಣದ ಮಿತಿಯಲ್ಲಿಯೇ ಬಳಸಲಾಗುತ್ತಿದೆ’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಶಾಸಕ ಮಧು ಜಿ.ಮಾದೇಗೌಡ ಅವರು, ಕೃಷಿ ಉದ್ದೇಶಕ್ಕೆಂದೇ ನಿರ್ಮಾಣವಾಗಿದ್ದ ಕೆಆರ್‌ಎಸ್ ಜಲಾಶಯದ ಮೇಲೆ ಅವಲಂಬಿತವಾಗಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ವಿವಿಧ ಹಂತದ ಯೋಜನೆಗಳನ್ನು ಜಾರಿ ಮಾಡುತ್ತಿರುವುದರಿಂದ ದಿನೇ ದಿನೇ ಕೃಷಿಗೆ ನೀರಿನ ಲಭ್ಯತೆ ಕಡಿಮೆ ಆಗುತ್ತಿದ್ದು, ಕೃಷಿಗೆ ಮಾರಕವಾಗುತ್ತಿದೆ ಎನ್ನುವ ರೈತರ ಆಂತಕ ಕುರಿತು ಕೇಳಿದ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಗುರುವಾರ ಸಚಿವರು ಮೇಲಿನಂತೆ ಉತ್ತರಿಸಿದರು.

ಕಾವೇರಿ 1 ರಿಂದ 5ನೇ ಹಂತದವರೆಗೆ ಮಳವಳ್ಳಿಯ ತೊರೆಕಾಡನಹಳ್ಳಿಯಿಂದ ನೀರು ಪೂರೈಸಲಾಗುತ್ತಿದ್ದು, ಅದೇ ಕಾರಿಡಾರ್ ಅಡಿಯಲ್ಲಿ ಹೆಚ್ಚುವರಿ ಕೊಳವೆಗಳನ್ನು ಅಳವಡಿಸಲು ಜಾಗದ ಅಭಾವವಿರುತ್ತದೆ. ಹಾಗಾಗಿ, ಕಾವೇರಿ 6ನೇ ಹಂತದ ಯೋಜನೆಯಡಿಯಲ್ಲಿ ಕಟ್ಟೇರಿಯಿಂದ ನೀರು ಪೂರೈಸಲು ಯೋಜಿಸಲಾಗಿರುತ್ತದೆ. ಈ ಯೋಜನೆಯ ಅಂದಾಜು ವೆಚ್ಚ 6,939 ಕೋಟಿ ರು. ಆಗಿದೆ ಎಂದು ವಿವರಿಸಿದ್ದಾರೆ.

ಬೆಂಗಳೂರು ನಗರದ ಪ್ರಸ್ತುತ ನೀರಿನ ಅವಶ್ಯವನ್ನು ಪೂರೈಸಲು ಕೆಆರ್‌ಎಸ್ ಅಣೆಕಟ್ಟೆಯಿಂದ ಪ್ರತಿದಿನ ಸುಮಾರು 900 ಕ್ಯುಸೆಕ್ ನೀರನ್ನು ಪಡೆಯಬೇಕಿದೆ. ಆದರೆ, ಅಣೆಕಟ್ಟೆಯಿಂದ ಬಿಡುಗಡೆ ಮಾಡಿದ ನೀರು ಬೆಂಗಳೂರು ತಲುಪುವ ಮಾರ್ಗದಲ್ಲಿ ಉಂಟಾಗುವ ನಷ್ಟ ಹಾಗೂ ಇತರೆ ಕಾರಣಗಳಿಂದಾಗಿ ಶಿವ ಅಣೆಕಟ್ಟಿನ ರೀಚ್‌ಗೆ ಅಗತ್ಯ ಪ್ರಮಾಣದ ನೀರು ತಲುಪಿಸಲು ಕೆ.ಆರ್.ಎಸ್. ಜಲಾಶಯದಿಂದ ಸುಮಾರು 1800 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಬೇಕಿರುತ್ತದೆ. ಕಾವೇರಿ 6ನೇ ಹಂತದ ಯೋಜನೆಯಲ್ಲಿ ಪ್ರತಿನಿತ್ಯ ಜಲಾಶಯದಿಂದ 200 ಕ್ಯುಸೆಕ್ ನೀರನ್ನು ಸರಬರಾಜು ಮಾಡಲು ಸುಮಾರು 400 ಕ್ಯುಸೆಕ್ ನೀರಿನ ಅವಶ್ಯ ಇದೆ ಎಂದು ಮಾಹಿತಿ ನೀಡಿದ್ದಾರೆ.

ವಾರ್ಷಿಕ 25.6 ಟಿಎಂಸಿ ನೀರು

ಕಾವೇರಿ ನದಿ ಪಾತ್ರಗಳ ಅಣೆಕಟ್ಟುಗಳಿಂದ ಕೃಷ್ಣರಾಜಸಾಗರ ಜಲಾಶಯ ಮತ್ತು ಕಬಿನಿ ಜಲಾಶಯಗಳಿಂದ ಕಾವೇರಿ ನೀರು ಸರಬರಾಜು ಯೋಜನೆಯಡಿ ಬೆಂಗಳೂರು ನಗರಕ್ಕೆ ಪ್ರತಿನಿತ್ಯ ಸುಮಾರು ಒಟ್ಟು 1,935 ದಶ ಲಕ್ಷ ಲೀಟರ್ ನೀರನ್ನು ಹಾಗೂ ವಾರ್ಷಿಕ ಅಂದಾಜು 25.6 ಟಿಎಂಸಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ನೀರನ್ನು ಮಳವಳ್ಳಿ ಬಳಿಯ ಶಿವ ಸಮತೋಲನ ಜಲಾಶಯದಿಂದ ಪಡೆಯಲಾಗುತ್ತಿದೆ. ಒಟ್ಟು ಐದು ಹಂತದ ಯೋಜನೆಗಳಿಂದ ಸುಮಾರು 1.40 ಕೋಟಿ ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದಿದ್ದಾರೆ.ಪರ್ಯಾಯ ಮೂಲ

ಬೆಂಗಳೂರು ನಗರಕ್ಕೆ ಮುಂದಿನ ದಿನಗಳಲ್ಲಿ ನೀರಿನ ಅಗತ್ಯತೆ ಪೂರೈಸುವ ಉದ್ದೇಶದಿಂದ ಹೊಸ ಜಲಮೂಲಗಳನ್ನು ಗುರುತಿಸಲು ಬೆಂಗಳೂರು ಜಲಮಂಡಳಿಯ ಮಾಜಿ ಅಧ್ಯಕ್ಷ ಬಿ.ಎನ್.ತ್ಯಾಗರಾಜ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ವರದಿಯನ್ವಯ ಎತ್ತಿನಹೊಳೆ ಯೋಜನೆಯಲ್ಲಿ ಬೆಂಗಳೂರು ನಗರಕ್ಕೆ 2.50 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿರುತ್ತದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಡಕೆ ತೋಟದ ಹಳ್ಳಕ್ಕೆ ನುಗ್ಗಿದ ಖಾಸಗಿ ಬಸ್
ಹತ್ತಿ ಬೆಳೆಗೆ ಮುಟುರು ರೋಗ ಗಿಡಹೇನು ಬಾಧೆ: ರೈತರ ಆತಂಕ