ಕನ್ನಡಪ್ರಭ ವಾರ್ತೆ ಮಂಡ್ಯ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ನಗರದ ಜೆ.ಸಿ.ವೃತ್ತದಲ್ಲಿ ನಡೆದ ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಅರಸು ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗದಂತಹ ಹತ್ತಾರು ಸಮುದಾಯದ ಮುಖಂಡರಿಗೆ ಶಾಸಕತ್ವವನ್ನು ನೀಡುವ ಮೂಲಕ ರಾಜಕೀಯ ಸಮಾನತೆ ಪ್ರದರ್ಶಿಸಿದ್ದರು ಎಂದು ಬಣ್ಣಿಸಿದರು.
ಆಧುನಿಕ ಕಾಲಮಾನದ ಈ ಪರಿಸ್ಥಿತಿಯಲ್ಲಿ ಕೂಡ ಹಿಂದುಳಿದ ಸಮಾಜಗಳ ಶಾಸಕರ ಸಂಖ್ಯೆ ೨೦ ರಿಂದ ೨೫ಕ್ಕೆ ಸೀಮಿತವಾಗಿದೆ. ಆದರೆ, ೭೦ರ ದಶಕದ ಅರಸು ಕಾಲದಲ್ಲಿ ೬೦ಕ್ಕೂ ಹೆಚ್ಚು ಜನ ಹಿಂದುಳಿದ ಸಮುದಾಯಗಳ ಪ್ರತಿನಿಧಿಯಾಗಿ, ಧ್ವನಿಯಾಗಿ ಇದ್ದದ್ದು ವಿಶೇಷವಾಗಿದೆ. ಇಂದಿಗೂ ಲೋಕಸಭೆ ಮತ್ತು ವಿಧಾನ ಸಭೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಆಯೋಗದ ಮೂಲಕ ಹಿಂದುಳಿದ ಮತ್ತು ಶೂದ್ರ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದಂತೆ ಅರಸು ಅವರು ಕೂಡ ಎಲ್.ಜೆ.ಹಾವನೂರು ವರದಿಯನ್ನು ಅನುಷ್ಠಾನಗೊಳಿಸಿ ಹಿಂದುಳಿದ ವರ್ಗಗಳಿಗೆ ಉದ್ಯೋಗ-ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿದರು. ಆದರೆ, ನಂತರದ ಆಯೋಗಗಳ ಬಹುತೇಕ ವರದಿಗಳು ಸ್ವೀಕೃತಿಯನ್ನೂ ಪಡೆಯದೆ ಕಡೆಗಣೆಗೆ ಗುರಿಯಾದದ್ದು ಹಿಂದುಳಿದ ವರ್ಗಗಳ ದುರಂತವಾಗಿದೆ ಎಂದು ವಿಷಾದಿಸಿದರು.
ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಡಿ.ದೇವರಾಜ ಅಸರು ಅವರು ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು ಉಳುವವರಿಗೆ ಭೂಮಿ, ಅಸಾಯಕರಿಗೆ ಆಶ್ರಯ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ಸಮಾನತೆಯನ್ನು ಎತ್ತಿ ಹಿಡಿದರು ಎಂದು ಬಣ್ಣಿಸಿದರು.
ಕನ್ನಡ ಸಂಘಟನೆಯ ಮುಖಂಡರಾದ ಎಸ್.ನಾರಾಯಣ್, ಎಚ್.ಡಿ.ಜಯರಾಂ, ಕನ್ನಡ ಸೇನೆ ಮಂಜು, ದಸಂಸ ಮುಖಂಡ ಚೀರನಹಳ್ಳಿ ಲಕ್ಷ್ಮಣ್, ಹಿಂದುಳಿದ ಸಮಾಜದ ಮುಖಂಡರಾದ ಎಂ. ಕೃಷ್ಣ, ಸಂತೆಕಸಲಗೆರೆ ಬಸವರಾಜು ಇತರರು ಮಾತನಾಡಿದರು.