ಲಕ್ಷ್ಮಿಯನ್ನು ಪ್ರತಿಷ್ಠಾಪಿಸಲು ಸುಮಂಗಲಿಯರು-ಯುವತಿಯರು ಸಂಭ್ರಮ-ಸಡಗರದ ಸಿದ್ಧತೆ ನಡೆಸಿದ್ದಾರೆ. ಹಬ್ಬಕ್ಕೂ ಮುನ್ನ ಕೆಲ ದಿನಗಳಿಂದಲೇ ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ ಬಗೆ ಬಗೆಯ ತಿಂಡಿ-ತಿನಿಸುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಹಬ್ಬದ ಪ್ರಯುಕ್ತ ಹೂವು-ಹಣ್ಣಿನ ಬೆಲೆ ಗಗನಮುಖಿಯಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಶ್ರಾವಣ ಮಾಸದ ಆರಂಭದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಬೆಲೆ ಏರಿಕೆಯ ನಡುವೆಯೂ ಹಬ್ಬದ ಖರೀದಿ ಭರಾಟೆ ಜೋರಾಗಿದೆ.
ಲಕ್ಷ್ಮಿಯನ್ನು ಪ್ರತಿಷ್ಠಾಪಿಸಲು ಸುಮಂಗಲಿಯರು-ಯುವತಿಯರು ಸಂಭ್ರಮ-ಸಡಗರದ ಸಿದ್ಧತೆ ನಡೆಸಿದ್ದಾರೆ. ಹಬ್ಬಕ್ಕೂ ಮುನ್ನ ಕೆಲ ದಿನಗಳಿಂದಲೇ ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ ಬಗೆ ಬಗೆಯ ತಿಂಡಿ-ತಿನಿಸುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಹಬ್ಬದ ಪ್ರಯುಕ್ತ ಹೂವು-ಹಣ್ಣಿನ ಬೆಲೆ ಗಗನಮುಖಿಯಾಗಿದೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಪೇಟೆಬೀದಿ, ವಿ.ವಿ.ರಸ್ತೆ, ಮಹಾವೀರ ಸರ್ಕಲ್, ಹೊಸಹಳ್ಳಿ ವೃತ್ತ, ತರಕಾರಿ ಮಾರುಕಟ್ಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹೂವು-ಹಣ್ಣು, ಬಾಳೆಕಂದು, ತಾವರೆ ಹೂವಿನ ವ್ಯಾಪಾರದ ಭರಾಟೆ ಜೋರಾಗಿತ್ತು. ಬೆಲೆ ಏರಿಕೆ ಕಂಡು ಬಹುತೇಕರು ಗುರುವಾರ ಬೆಳಗ್ಗೆಯಿಂದಲೇ ಹಬ್ಬಕ್ಕೆ ಬೇಕಾದ ಸಾಮಾನುಗಳ ಖರೀದಿಯಲ್ಲಿ ತೊಡಗಿದ್ದರು. ಇದರಿಂದ ಪ್ರಮುಖ ರಸ್ತೆಗಳೆಲ್ಲಾ ಜನಜಂಗುಳಿಯಿಂದ ತುಂಬಿಹೋಗಿತ್ತು.
ಬೆಳ್ಳಿಯ ಲಕ್ಷ್ಮಿ ಮುಖವಾಡಕ್ಕೆ ಬೇಡಿಕೆ:
ಲಕ್ಷ್ಮಿಯನ್ನು ಪ್ರತಿಷ್ಠಾಪನೆ ಮಾಡುವವರು ಬೆಳ್ಳಿಯಿಂದ ತಯಾರಿಸಿದ ಲಕ್ಷ್ಮಿ ಮುಖವಾಡ ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದರು. ವರಮಹಾಲಕ್ಷ್ಮಿ ಹಬ್ಬದ ವೇಳೆ ವರಮಹಾಲಕ್ಷ್ಮಿಯ ಬೆಳ್ಳಿ ಮುಖವಾಡಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಆಭರಣ ತಯಾರಕರೂ ಸಹ ವಿವಿಧ ಗಾತ್ರದ ಲಕ್ಷ್ಮಿ ಮುಖವಾಡಗಳನ್ನು ಮಾರಾಟಕ್ಕಿಟ್ಟಿದ್ದರು. ಲಕ್ಷ್ಮಿಯ ಮುಖವಾಡ ಖರೀದಿಸಿದ ಮಹಿಳೆಯರು ನಂತರದಲ್ಲಿ ಕುಶಲ ಕರ್ಮಿಗಳಲ್ಲಿ ಹಣೆಗೆ ಕೆಂಪು ಹರಳು ಕೂರಿಸುವುದು, ಚಿನ್ನದ ಮೂಗುತಿ ತೊಡಿಸಿ ಅದರ ಅಂದವನ್ನು ಹೆಚ್ಚಿಸಿ ಸಂತೋಷಪಟ್ಟರು. ಈ ಹಿಂದೆಯೇ ಬೆಳ್ಳಿ ಮುಖವಾಡಗಳನ್ನು ಖರೀದಿಸಿಟ್ಟುಕೊಂಡವರು ಅವುಗಳನ್ನು ಅಕ್ಕಸಾಲಿಗರ ಬಳಿ ತಂದು ಪಾಲಿಶ್ ಮಾಡಿಸಿ ಲಕ್ಷ್ಮೀಯ ಸೊಬಗನ್ನು ಹೆಚ್ಚಿಸುತ್ತಿದ್ದರು.
ವರಮಹಾಲಕ್ಷ್ಮಿ ಹಬ್ಬಕ್ಕೆ ಶ್ರೀಮಂತರು ಚಿನ್ನ, ಬೆಳ್ಳಿ ಮುಖವಾಡವನ್ನು ಕಲಶದಲ್ಲಿ ಪ್ರತಿಷ್ಠಾಪಿಸಿ ಅಲಂಕರಿಸಿದರೆ, ಮಧ್ಯಮವರ್ಗದವರು ಮತ್ತು ಬಡವರು ತೆಂಗಿನಕಾಯಿಗೆ ಲಕ್ಷ್ಮಿಯನ್ನು ಚಿತ್ರಿಸಿ ಅಲಂಕಾರ ಮಾಡುವುದು ವಾಡಿಕೆ. ಬೆಳ್ಳಿಯ ಲಕ್ಷ್ಮಿಯ ಮುಖವಾಡವನ್ನು ಪ್ರತಿಷ್ಠಾಪಿಸುವವರು ಕನಿಷ್ಠ ೮೦ ಗ್ರಾಂನಿಂದ ೧೫೦ ಗ್ರಾಂವರೆಗೆ ಕೊಳ್ಳುವುದುಂಟು.
ಹೂವು-ಹಣ್ಣು ಬೆಲೆ ಗಗನಮುಖಿ:
ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು-ಹಣ್ಣಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಸೇವಂತಿಗೆ ಹೂವು ಪ್ರತಿ ಕೆಜಿಗೆ ೧೦೦ ರು. ೧೦೦ ಗ್ರಾಂಗೆ ೫೦ ರು., ಪ್ರತಿ ಮಾರಿಗೆ ೧೦೦ ರಿಂದ ೧೨೦ ರು., ಮಲ್ಲಿಗೆ- ೩೦೦-೪೦೦ ರು., ಕಾಕಡಾ-೧೫೦ ರು., ಬಿಡಿ ಹೂ ೧೦೦ ಗ್ರಾಂಗೆ ೪೦ ರು., ಮಾವಿನ ಸೊಪ್ಪುಜೊತೆ ೧೦ ರು., ಬಾಳೆ ಕಂದು ೩೦-೫೦ ರು., ಚೆಂಡು ಹೂ ಕೆಜಿಗೆ ೧೦೦ ರು., ಒಂದು ಹಾರ-೬೦೦ ರು., ಮಲ್ಲಿಗೆ ಹಾರ ೮೦೦ ರಿಂದ ೧೦೦೦ ರು., ತಾವರೆ ಹೂ ಜೊತೆ ೧೦೦ ರಿಂದ ೧೨೦ ರು.ಗೆ ಮಾರಾಟವಾಗುತ್ತಿತ್ತು.
ತರಕಾರಿ ಬೆಲೆಯೂ ಸಾಮಾನ್ಯದರದಲ್ಲೇ ಇತ್ತು. ಪ್ರತಿ ಕೆಜಿ ಮಿಕ್ಸ್ ತರಕಾರಿ ೧೦೦ ರು., ಬೀನಿಸ್-೮೦, ಕ್ಯಾರೆಟ್-೮೦, ಗಡ್ಡೆಕೋಸು-೮೦ ರು., ದಪ್ಪ ಮೆಣಸಿನಕಾಯಿ-೮೦ ರು., ಪ್ರತಿ ಕೆಜಿಗೆ ಟಮೋಟೋ-೪೦, ನುಗ್ಗೆಕಾಯಿ-೩೦ ರು. ಬೀಟ್‌ರೋಟ್-೫೦, ಸಬ್ಬಸಿಗೆ ಸೊಪ್ಪು ಪ್ರತಿ ಕಟ್ಟಿಗೆ ೧೦ ರು., ಮೆಂತ್ಯ ಸೊಪ್ಪು-೧೦ರಿಂದ ೨೦ ರು.ನಂತೆ ಮಾರಾಟವಾಗುತ್ತಿತ್ತು.
ತಿನಿಸುಗಳ ತಯಾರಿ:
ಲಕ್ಷ್ಮಿ ಪೂಜೆಗಾಗಿ ವಿವಿಧ ಮಾದರಿಯ ತಿನಿಸುಗಳನ್ನು ಮಹಿಳೆಯರು ಮನೆಯಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಸಕ್ಕರೆ ಮಿಠಾಯಿ, ರವೆಉಂಡೆ, ಹಯಗ್ರೀವ, ಹೋಳಿಗೆ, ಚಕ್ಕುಲಿ, ಕೋಡುಬಳೆ, ಕಜ್ಜಾಯ, ಕರ್ಜಿಕಾಯಿ, ಬಾದಾಮಿ, ಕರ್ಜೂರ, ಒಣದ್ರಾಕ್ಷಿ, ಗೋಡಂಬಿ, ಕಲ್ಲುಸಕ್ಕರೆ ಜೊತೆಗೆ ಗೋಧಿ ಪಾಯಸ, ಕಡಲೆಬೇಳೆ ಪಾಯಸ, ಹೆಸರುಬೇಳೆ ಪಾಯಸವನ್ನು ನೈವೇದ್ಯ ರೂಪದಲ್ಲಿಡುವ ಖಾದ್ಯಗಳ ತಯಾರಿಯಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.