ರೋಣ: ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಬೆಣ್ಣೆಹಳ್ಳ ತುಂಬಿ ಹರಿದ ಪರಿಣಾಮ ಗುರುವಾರ ಬೆಳಗ್ಗೆಯಿಂದ ಸಂಜೆವರೆಗೂ ತಾಲೂಕಿನ ಯಾವಗಲ್ಲ ಸಮೀಪ ಸೇತುವೆ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಪ್ರಯಾಣಿಕರು, ವಾಹನ ಸವಾರರು, ಜನತೆ ತೀವ್ರ ತೊಂದರೆ ಎದುರಿಸುವಂತಾಯಿತು. ರೋಣ, ಗಜೇಂದ್ರಗಡ ಕುಷ್ಟಗಿದಿಂದ ನರಗುಂದ ಮಾರ್ಗವಾಗಿ ಯಲ್ಲಮ್ಮಗುಡ್ಡ, ಘಟಪ್ರಭಾ, ಗೋಕಾಕ ಮುಂತಾದಡೆ ತೆರಳುವ ವಾಹನಗಳು ಬೆಣ್ಣೆಹಳ್ಳದ ಎರಡು ಬದಿ ಸಾಲು ಗಟ್ಟಿ ನಿಂತಿದ್ದವು. ಸಾಯಂಕಾಲದವರೆಗೆ ನೀರಿನ ಹರಿವು ಕಡಿಮೆಯಾಗದ್ದರಿಂದ ಇದರಿಂದಾಗಿ ವಾಹನ ಸವಾರರು ಬೆಳವಣಕಿಯಿಂದ ನವಲಗುಂದ ಮಾರ್ಗವಾಗಿ ಸುತ್ತುವರೆದು ನರಗುಂದಕ್ಕೆ, ಅಲ್ಲಿಂದ ಗೋಕಾಕ, ಘಟಪ್ರಭಾಕ್ಕೆ ತೆರಳುವಂತಾಯಿತು. ನರಗುಂದದಿಂದ ನವಲಗುಂದ ಮಾರ್ಗವಾಗಿ ರೋಣಕ್ಕೆ ತೆರಳುವಂತಾಯಿತು
ಬೆಣ್ಣೆಹಳ್ಳಕ್ಕೆ ಹೊಂದಿಕೊಂಡ ಯಾವಗಲ್ಲ, ಯಾ.ಸ. ಹಡಗಲಿ, ಮಾಳವಾಡ, ಅಸೂಟಿ, ಕರಮಡಿ , ಮೆಣಸಗಿ, ಮೇಗೂರ ಭಾಗದ ಜಮೀನುಗಳಿಗೆ ಹಳ್ಳದ ನೀರು ನುಗ್ಗಿ ಜಮೀನುಗಳು ಜಲಾವೃತಗೊಂಡಿವು. ಈಗಾಗಲೇ ಬಿತ್ತನೆ ಮಾಡಿದ ಹೆಸರು, ಮೆಣಸಿನಕಾಯಿ ಬೆಳೆ ನೀರು ಪಾಲಾಗಿವೆ.
ಮಳೆಯಿಂದಾಗಿ ಬೆಣ್ಣೆಹಳ್ಳ ಪ್ರವಾಹ ಅಪಾಯಮಟ್ಟ ತಲುಪಿದ್ದು, ಆದ್ದರಿಂದ ಹಳ್ಳದ ಪಾತ್ರದ ಗ್ರಾಮಸ್ಥರು ಹಾಗೂ ಜಮೀನುಗಳ ಮಾಲಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಬೆಣ್ಣೆ ಹಳ್ಳ ಮತ್ತು ಮಲಪ್ರಭಾ ನದಿ ದಡದತ್ತ ರೈತರು, ಜನತೆ ತೆರಳದಂತೆ ಜಾಗೃತೆ ವಹಿಸಬೇಕು ಎಂದು ತಹಸೀಲ್ದಾರ್ ನಾಗರಾಜ ಕೆ. ಹೇಳಿದರು.