ಭಟ್ಕಳವನ್ನು ನಡುಗಿಸಿದ ಭಾರೀ ಮಳೆ

KannadaprabhaNewsNetwork |  
Published : Jun 13, 2025, 06:08 AM IST
ಪೊಟೋ ಪೈಲ್ : 12ಬಿಕೆಲ್1,2,3,4,5 | Kannada Prabha

ಸಾರಾಂಶ

ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಮತ್ತು ಸಂಶುದ್ದೀನ ವೃತ್ತ ಮಳೆ ನೀರು ನಿಂತು ಹೊಳೆಯಾಗಿದೆ.

ಭಟ್ಕಳ: ತಾಲೂಕಿನಾದ್ಯಂತ ಭಾರೀ ಮಳೆ ಸುರಿದ ಪರಿಣಾಮ ಎಲ್ಲೆಲ್ಲೂ ನೀರು ನಿಂತಿದೆ. ಪಟ್ಟಣದ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಮತ್ತು ಸಂಶುದ್ದೀನ ವೃತ್ತ ಮಳೆ ನೀರು ನಿಂತು ಹೊಳೆಯಾಗಿದೆ. ಜನ, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ತಾಲೂಕಿನಲ್ಲಿ ಬುಧವಾರ ಸಂಜೆಯಿಂದಲೇ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಇದು ಬುಧವಾರ ರಾತ್ರಿಯಿಂದ ಗುರುವಾರ ಸಂಜೆಯವರೆಗೂ ಮುಂದುವರಿದಿತ್ತು. ವ್ಯಾಪಕ ಮಳೆಗೆ ಭಟ್ಕಳದ ಮುಖ್ಯ ರಸ್ತೆ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿತ್ತು. ದಿನವಿಡೀ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಭಾರೀ ಮಳೆಯ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ನೀಡಿದ್ದು ಒಳ್ಳೆಯದೇ ಆಯಿತು ಅಭಿಪ್ರಾಯ ವ್ಯಕ್ತವಾಯಿತು.

ಭಾರೀ ಮಳೆಗೆ ಮಣ್ಕುಳಿ, ಕೋಕ್ತಿ ರಘುನಾಥ ರಸ್ತೆ ಮುಂತಾದ ಕಡೆ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು. ರಂಗಿನಕಟ್ಟೆಯ ಹೆದ್ದಾರಿಗೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಐಆರ್‌ಬಿಯವರು ಪೈಪ್ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗುರುವಾರದ ಭಾರೀ ಮಳೆಗೆ ರಂಗಿನಕಟ್ಟೆ ಹೆದ್ದಾರಿ ಹೊಳೆಯಾಗಿ ಮಾರ್ಪಾಡಾಗಿತ್ತು. ಹೆದ್ದಾರಿಯಲ್ಲಿ ಎರಡುಮೂರು ಅಡಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಸಂಚರಿಸಲಾಗದೇ ಭಾರೀ ತೊಂದರೆಪಟ್ಟರು.

ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಹೆದ್ದಾರಿಯೇ ಕಾಣುತ್ತಿರಲಿಲ್ಲ. ಸಂಶುದ್ದೀನ ವೃತ್ತದಲ್ಲೂ ಮಳೆ ನೀರು ನಿಂತು ಜನರು ಮತ್ತು ವಾಹನ ಸವಾರರು ಪರದಾಡಿದರು. ಸಾಗರ ರಸ್ತೆಯಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಮಳೆ ನೀರು ಹರಿದು ಹೋಗಲು ಗಟಾರದ ವ್ಯವಸ್ಥೆ ಇಲ್ಲದೇ ಇರುವುದರಿಂದ ಭಾರೀ ಮಳೆಗೆ ನೀರು ಒಮ್ಮೆಲೆ ವೃತ್ತದತ್ತ ಹರಿದು ಬಂದು ಹೊಳೆ ಆಯಿತು. ವೃತ್ತದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದರಿಂದ ಅಂಗಡಿಕಾರರೂ ತೊಂದರೆ ಅನುಭವಿಸುವಂತಾಯಿತು. ಇನ್ನು ಮುಖ್ಯರಸ್ತೆಯಲ್ಲೂ ಮಳೆ ನೀರು ನಿಂತು ಪರದಾಡುವಂತಾಯಿತು.

ಪುರಸಭೆ ಸನಿಹದ ರಸ್ತೆಯೂ ಭಾರೀ ಮಳೆಗೆ ಹಳೆ ಹೊಳೆಯಾಗಿತ್ತು. ಕೆಲವು ರಸ್ತೆಗಳು ಮಳೆಗೆ ಕೆಸರುಮಯವಾಗಿದ್ದು ಕಂಡು ಬಂತು. ಚೌತನಿಯ ಹೊಳೆ ತುಂಬಿ ತುಳುಕಿದ್ದು, ಕುದುರೆ ಬೀರಪ್ಪ ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿದೆ. ಭಾರೀ ಮಳೆಗೆ ತಗ್ಗು ಪ್ರದೇಶಗಳು, ಹೊಳೆ, ಕೆರೆ, ಬಾವಿ, ನದಿಗಳು ತುಂಬಿ ತುಳುಕುತ್ತಿದ್ದು, ನೀರು ಅಪಾಯದ ಮಟ್ಟ ತಲುಪಿದೆ. ತಲಗೋಡಿನಲ್ಲಿ ಗುಡ್ಡ ಕುಸಿಯುವ ಭೀತಿ ಉಂಟಾಗಿದ್ದರಿಂದ ರಸ್ತೆಯ ಮಾರ್ಗವನ್ನು ಬದಲಿಸಲಾಗಿದೆ. ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೆಂಕಟೇಶ ದುರ್ಗಪ್ಪ ನಾಯ್ಕ ಎನ್ನುವವರ ಕೊಟ್ಟಿಗೆಗೆ ಸಿಡಿಲು ಬಡಿದ ಪರಿಣಾಮ ಕೊಟ್ಟಿಗೆ ಹಾಗೂ ಅದರಲ್ಲಿದ್ದ ಮೇವು ಸಂಪೂರ್ಣ ಸುಟ್ಟು ಹೋಗಿದೆ.

ನಿರಗದ್ದೆ ಮಜಿರೆಯ ಕೃಷ್ಣಾ ರಾಮ ನಾಯ್ಕ ಮತ್ತು ಸತೀಶ ಕುಪ್ಪಯ್ಯ ನಾಯ್ಕ ಎನ್ನುವವರ ಮನೆಗೆ ನೀರು ನುಗ್ಗಿದ್ದು ನೀರು ಹೋಗುವ ದಾರಿಯನ್ನು ಕಟ್ಟಿದ್ದೇ ಕಾರಣ ಎನ್ನಲಾಗಿದೆ. ಕಂದಾಯ ಅಧಿಕಾರಿಗಳು ಭೇಟಿ ನೀಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದ್ದಾರೆ. ಬೇಂಗ್ರೆ ಪಂಚಾಯತ್ ವ್ಯಾಪ್ತಿಯ ಸೋಮಯ್ಯನಮನೆ ಸುಕ್ರಯ್ಯ ಭೈರಾ ದೇವಡಿಗ ಎನ್ನುವವರ ಮನೆಯೊಳಗೆ ನೀರು ನುಗ್ಗಿ ಹಾನಿಯಾಗಿದೆ.

ಮೂಡಭಟ್ಕಳ ಗ್ರಾಮದ ಕಲ್ಸಂಕ ಹೊಳೆ ಸಂಪೂರ್ಣ ತುಂಬಿ ಹರಿಯುತ್ತಿದ್ದು ರಸ್ತೆಯ ಹೊಳೆಯ ನೀರು ಹರಿಯುತ್ತಿದೆ. ಜನ, ಜಾನುವಾರುಗಳನ್ನು ಅಪಾಯವಾಗದಂತೆ ದಾಟಿಸುತ್ತಿದ್ದು ರಾತ್ರಿ ಇನ್ನು ಮಳೆ ಹೆಚ್ಚಾದರೆ ಮನೆಗಳಿಗೆ ನೀರು ನುಗ್ಗುವ ಅಪಾಯವಿದ್ದು ಭೇಟಿ ನೀಡಿದ ಕಂದಾಯ ಅಧಿಕಾರಿಗಳು ಸ್ಥಳೀಯ ಮನೆಯವರನ್ನು ಸಂಪರ್ಕಿಸಿ ಜನರನ್ನು ರಾತ್ರಿಯಾಗುವದರೊಳಗಾಗಿ ಕಾಳಜಿ ಕೇಂದ್ರಕ್ಕೆ ಬರುವಂತೆ ತಿಳಿಸಿದ್ದಾರೆ.

ಸ್ಥಳದಲ್ಲಿ ನೋಡಲ್ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಪಂಚಾಯತ್ ಪಿಡಿಒ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು, ಪಂಚಾಯತ್ ಸದಸ್ಯರು ಇದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಹೆಬಳೆ ಗ್ರಾಮದ ನಾರಾಯಣ ಮಂಜಪ್ಪ ನಾಯ್ಕ ಎನ್ನುವವರ ಮನೆಯೊಳಗೆ ನೀರು ನುಗ್ಗಿದ್ದು ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!