ಹಳಿಯಾಳ: ಮಹಿಳೆಯರು ಮುಂಜಾಗ್ರತಾ ಕ್ರಮವಾಗಿ ಗ್ಯಾಸ್ ಸುರಕ್ಷತಾ ಕ್ರಮ ಅನುಸರಿಸಿಕೊಂಡು ಅಡುಗೆ ಮಾಡಬೇಕು. ಕಟ್ಟಿಗೆ ಒಲೆಯಾಗಲಿ ಅಥವಾ ಅಗ್ನಿಗೆ ಸಂಬಂಧಿಸಿದ ಯಾವುದೇ ಸಾಮಗ್ರಿಗಳನ್ನು ಸಿಲಿಂಡರ್ ಜೊತೆ ಇಡಬಾರದು ಎಂದು ಅಂಗಡಿ ಗ್ಯಾಸ್ ಸರ್ವಿಸ್ ವಿತರಣಾ ಕಂಪನಿ ಮುಖ್ಯಸ್ಥೆ ಸುಮಂಗಲಾ ಚಂದ್ರಕಾಂತ ಅಂಗಡಿ ಹೇಳಿದರು.
ಅಡುಗೆ ಅನಿಲ ಇಡುವ ಮನೆಗಳಲ್ಲಿ ಅಡುಗೆ ಕೋಣೆ ಸ್ವಚ್ಛವಾಗಿರಿಸಿಕೊಂಡು ಗಾಳಿ, ಬೆಳಕು ಇರಬೇಕು. ಸಿಲಿಂಡರ್, ರೆಗ್ಯುಲೇಟರ್, ಗ್ಯಾಸ್ ಸ್ಟವಗಳಲ್ಲಿ ಲೋಪವಾದರೆ ಶೀಘ್ರದಲ್ಲಿಯೇ ಗ್ಯಾಸ್ ವಿತರಕರನ್ನು ಸಂಪರ್ಕಿಸಬೇಕು. ನಮ್ಮ ಗ್ರಾಹಕರ ಹಿತ ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಇಂಡೇನ್ ಆಯಿಲ್ ಕಾರ್ಪೊರೇಷನ್ ಬೆಳಗಾವಿ ವಲಯದ ಮಾರಾಟ ವಿಭಾಗದ ಅಧಿಕಾರಿ ಸಂಜೀವಕುಮಾರ ಮಾತನಾಡಿ, ಸಿಲಿಂಡರ್, ಸ್ಟವ್, ರೆಗ್ಯುಲೇಟರ್, ಅನಿಲ ಪೈಪ್‌ಗಳ ಬಳಕೆ, ಸುರಕ್ಷತೆ ಬಗ್ಗೆ ಸರ್ಕಾರ ಹಾಗೂ ಅಡುಗೆ ಅನಿಲ ವಿತರಕರು ಏಜೆನ್ಸಿಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ ಜನರು ಪೂರ್ಣವಾಗಿ ಜಾಗೃತರಾಗಿಲ್ಲ. ಅಡುಗೆ ಅನಿಲ ಗ್ರಾಹಕರು ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ. ಈ ತರಹದ ಉದಾಸೀನ ಪ್ರವೃತ್ತಿ ಸರಿಯಲ್ಲ. ಅಡುಗೆ ಅನಿಲ ಬಳಸುವಾಗ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದೆ ಎಂದರು.ತರಬೇತಿ ಶಿಬಿರದಲ್ಲಿ ಮಹಿಳೆಯರು ಗ್ಯಾಸ್ ಸುರಕ್ಷತಾ ಕ್ರಮಗಳನ್ನು ಹೇಗೆ ಅನುಸರಿಸಬೇಕು? ಮುಂಜಾಗ್ರತಾ ಕ್ರಮಗಳೇನು? ಎಂಬುವುದರ ಕುರಿತು ಪ್ರಾತ್ಯಕ್ಷಿಕೆ ತೋರಿಸಿ ಅರಿವು ಮೂಡಿಸಲಾಯಿತು.
ಅಂಗಡಿ ಗ್ಯಾಸ ಸರ್ವಿಸ್ ವ್ಯವಸ್ಥಾಪಕ ರಮೇಶ ಹಂಜಗಿ, ಮೆಕ್ಯಾನಿಕ್ ಶಹಬಾಜ್ ಇದ್ದರು.