ಮಳೆ ನಿಂತ ಹಿನ್ನೆಲೆ ಬೆಳೆಗಳ ಆರೈಕೆಯಲ್ಲಿ ರೈತರು

KannadaprabhaNewsNetwork |  
Published : Jun 13, 2025, 05:53 AM IST
10ಎಚ್ಎಸ್ಎನ್8ಎ :  | Kannada Prabha

ಸಾರಾಂಶ

ಮುಂಗಾರು ಪೂರ್ವ ಮಳೆಗೆ ತತ್ತರಿಸಿದ್ದ ಇಳೆಗೆ ಇದೀಗ ಒಣ ಹವೆ ಸೃಷ್ಟಿಯಾಗಿದ್ದು ರೈತರು ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಮಗ್ನರಾಗಿದ್ದಾರೆ. ಕೆಲ ದಿನಗಳಿಂದ ಮಳೆ ಇಲ್ಲದ ಕಾರಣ ರೈತರು ಜಮೀನುಗಳತ್ತ ಮುಖ ಮಾಡಿದ್ದು ಹೊಗೆಸೊಪ್ಪು ಗಿಡಗಳಿಗೆ ರಸಗೊಬ್ಬರ ನೀಡಿ ಕಳೆ ತೆಗೆಯುತ್ತಿದ್ದಾರೆ. ಕೆಲವು ಕಡೆ ಮಳೆಯಿಂದಾಗಿ ಗಿಡಗಳಿಗೆ ಸೊರಗು ರೋಗ ಕಾಣಿಸಿಕೊಂಡಿದೆ. ಔಷಧಿ ಸಿಂಪಡಣೆ ಮಾಡಿ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳಲು ನಿರತರಾಗಿದ್ದಾರೆ. ಆಲೂಗಡ್ಡೆಯನ್ನು ಮಳೆ ಕಾರಣ ಸದ್ಯಕ್ಕೆ 350 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದೆ. ಭಾರಿ ಮಳೆ ಪರಿಣಾಮ ಆಲೂಗಡ್ಡೆ ಬಿತ್ತನೆಗೆ ಹಿನ್ನಡೆಯಾಗಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ಮುಂಗಾರು ಪೂರ್ವ ಮಳೆಗೆ ತತ್ತರಿಸಿದ್ದ ಇಳೆಗೆ ಇದೀಗ ಒಣ ಹವೆ ಸೃಷ್ಟಿಯಾಗಿದ್ದು ರೈತರು ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಮಗ್ನರಾಗಿದ್ದಾರೆ.ತಾಲೂಕಿನಲ್ಲಿ ಈ ಸಲ ವಾಡಿಕೆಗಿಂತ ಅಧಿಕವಾಗಿ ಮುಂಗಾರು ಪೂರ್ವ ಮಳೆ ಬಿದ್ದಿದೆ. ಪರಿಣಾಮವಾಗಿ ಅತಿಯಾದ ತೇವಾಂಶದಿಂದ ಬಿತ್ತಿದ ಬೆಳೆಗಳನ್ನು ಕಳೆದುಕೊಳ್ಳುವ ಆತಂಕ ರೈತರಲ್ಲಿ ಮನೆ ಮಾಡಿತ್ತು. ಈಗ ಮಳೆ ಬಿಡುವು ನೀಡಿದ್ದು ಬೆಳೆಗಳ ಆರೈಕೆಯಲ್ಲಿ ತೊಡಗಿದ್ದಾರೆ.ತಾಲೂಕಿನಲ್ಲಿ ಈ ಸಲ ಜನವರಿ 1ರಿಂದ ಜೂನ್ ಮೊದಲ ವಾರದ ತನಕ 182.6 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. 347 ಮಿ.ಮೀ. ಮಳೆಯಾಗಿದ್ದು ವಾಡಿಕೆಗಿಂತ 90 ಮಿಮೀ ಅಧಿಕವಾಗಿ ಸುರಿದಿದೆ. ಕಸಬಾ ಹೋಬಳಿಯಲ್ಲಿ 182.6 ಮಿ.ಮೀ. ಬದಲಿಗೆ 323.1 ಮಿ.ಮೀ. ಬಿದ್ದಿದ್ದು ವಾಡಿಕೆಗಿಂತ 77 ಮಿ.ಮೀ. ಹೆಚ್ಚು ಬಿದ್ದಿದೆ. ದೊಡ್ಡಮಗ್ಗೆಯಲ್ಲಿ 181.9 ಮಿ.ಮೀ. ಬದಲಿಗೆ 402.4 ಮಿ.ಮೀ. ಬಿದ್ದಿದ್ದು ವಾಡಿಕೆಗಿಂತ 121 ಮಿ.ಮೀ. ಅಧಿಕವಾಗಿ ಬಿದ್ದಿದೆ. ಕೊಣನೂರು 174.5 ಮಿ.ಮೀ. ಬದಲಿಗೆ 337.6 ಮಿ.ಮೀ. ಬಿದ್ದಿದ್ದು ವಾಡಿಕೆಗಿಂತ 93 ಮಿ.ಮೀ. ಹೆಚ್ಚಿದೆ. ರಾಮನಾಥಪುರ 182.7 ಮಿ.ಮೀ. ಬದಲಿಗೆ 319.1 ಮಿ.ಮೀ. ಬಿದ್ದಿದ್ದು ವಾಡಿಕೆಗಿಂತ 75 ಮಿ.ಮೀ. ಹೆಚ್ಚಿದೆ. ಮಲ್ಲಿಪಟ್ಟಣದಲ್ಲಿ 169.0 ಮಿ.ಮೀ. ಬದಲಿಗಿ 355.7 ಮಿ.ಮೀ. ಬಿದ್ದಿದ್ದು ವಾಡಿಕೆಗಿಂತ 110 ಮಿ.ಮೀ. ಅಧಿಕವಾಗಿ ಸುರಿದಿದೆ. ಹೀಗಾಗಿ ಬಿತ್ತನೆ ಮಾಡಿದ ಆರಂಭದಲ್ಲೇ ನಿರಂತರವಾಗಿ ಮಳೆ ಬಿದ್ದ ಕಾರಣ ಬೆಳೆಗಳ ಬೆಳವಣಿಗೆಗೆ ತೊಡಕಾಗಿದೆ.ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಹಾಗೂ ಆಲೂಗಡ್ಡೆ ಬಿತ್ತನೆಗೆ ಮುಂಗಾರು ಪೂರ್ವ ಮಳೆ ಕಂಟಕವಾಗಿ ಪರಿಣಮಿಸಿತು. ಸಸಿಮಡಿ ಬೆಳೆಸಿದ್ದ ರೈತರು ಕಳೆದ ತಿಂಗಳು ಉತ್ತಮವಾಗಿ ಮಳೆ ಬಿದ್ದ ಖಷಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ತಂಬಾಕು ನಾಟಿ ಮಾಡಿದ್ದರು. ಇನ್ನೇನು ರಸಗೊಬ್ಬರ ನೀಡಿ ಗಿಡಗಳನ್ನು ಆರೈಕೆ ಮಾಡಬೇಕು ಎನ್ನುವಷ್ಟರಲ್ಲಿ ನಾಟಿ ಮಾಡಿದ ಒಂದು ವಾರದ ಅಂತರದಲ್ಲಿ ಮುಂಗಾರು ಪೂರ್ವ ಮಳೆ ಎಡಬಿಡದೆ ಸುರಿಯಲಾರಂಭಿಸಿತು. ಅತಿಯಾದ ಮಳೆಗೆ ತಂಬಾಕು ನಾಟಿ ಮಾಡಿದ ಗಿಡಗಳು ಬೇರು ಬಿಡದೆ ಕೊಳೆಯಲಾರಂಭಿಸಿದವು. ಹೀಗಾಗಿ ತಗ್ಗು ಪ್ರದೇಶದ ಜಮೀನುಗಳಲ್ಲಿ ತಂಬಾಕು ಸಸಿಗಳು ಜಲಾವೃತಗೊಂಡು ಸಾಕಷ್ಟು ಕಡೆ ನಾಟಿ ಮಾಡಿದ ಗಿಡಗಳ ಬೆಳವಣಿಗೆಗೆ ಹೊಡೆತ ಬಿದ್ದಿದೆ. ಸೊರಗು ರೋಗ:

ಇದೀಗ ಕೆಲ ದಿನಗಳಿಂದ ಮಳೆ ಇಲ್ಲದ ಕಾರಣ ರೈತರು ಜಮೀನುಗಳತ್ತ ಮುಖ ಮಾಡಿದ್ದು ಹೊಗೆಸೊಪ್ಪು ಗಿಡಗಳಿಗೆ ರಸಗೊಬ್ಬರ ನೀಡಿ ಕಳೆ ತೆಗೆಯುತ್ತಿದ್ದಾರೆ. ಕೆಲವು ಕಡೆ ಮಳೆಯಿಂದಾಗಿ ಗಿಡಗಳಿಗೆ ಸೊರಗು ರೋಗ ಕಾಣಿಸಿಕೊಂಡಿದೆ. ಔಷಧಿ ಸಿಂಪಡಣೆ ಮಾಡಿ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳಲು ನಿರತರಾಗಿದ್ದಾರೆ.ಆಲೂ ಬಿತ್ತನೆ ಕುಸಿತ:

ಈ ಬಾರಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಅಧಿಕವಾಗಿ ಸುರಿದ ಪರಿಣಾಮ ಆಲೂಗಡ್ಡೆ ಬಿತ್ತನೆ ಪ್ರಮಾಣ ಕುಸಿದಿದೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ 800 ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕಾರಣ ಸದ್ಯಕ್ಕೆ 350 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದೆ. ಭಾರಿ ಮಳೆ ಪರಿಣಾಮ ಆಲೂಗಡ್ಡೆ ಬಿತ್ತನೆಗೆ ಹಿನ್ನಡೆಯಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ 19700 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಗುರಿ ಹೊಂದಲಾಗಿದ್ದು ಸದ್ಯಕ್ಕೆ 11150 ಹೆಕ್ಟೇರ್ ಬಿತ್ತನೆಯಾಗಿದೆ. 35700 ಹೆಕ್ಟೇರ್ ಗುರಿ ಹೊಂದಲಾಗಿದ್ದ ಏಕದಳ ಧಾನ್ಯ ಬೆಳೆಗಳನ್ನೂ ಸಹ 11150 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. 1575 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಿದ್ದು ದ್ವಿದಳ ಧಾನ್ಯ ಬೆಳೆಗಳನ್ನು 655 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಇನ್ನುಳಿದಂತೆ ಉದ್ದು ಆಲಸಂದೆ, ಹೆಸರು 700 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮುಂಗಾರು ಪೂರ್ವ ಮಳೆ ಅಬ್ಬರದಿಂದಾಗಿ ಬಹುತೇಕ ಬಿತ್ತನೆಯಾದ ಉದ್ದು ಹೆಸರು ಆಲಂಸದೆ ನೆಲ ಬಿಟ್ಟು ಮೇಲೇಳದೆ ಕೊಳೆತು ನಾಶವಾಗಿದೆ. ಸಾಕಷ್ಟು ಭಾಗದಲ್ಲಿ ಬಿತ್ತನೆ ಬೀಜ ಮೊಳಕೆಯೊಡೆಯದೆ ಮಣ್ಣುಪಾಲಾಗಿದೆ.ಹೇಳಿಕೆ1

ಮುಂಗಾರು ಪೂರ್ವ ಮಳೆ ಅತಿಯಾಗಿ ಸುರಿದ ಪರಿಣಾಮ ನಾಟಿ ಮಾಡಿದ ತಂಬಾಕು ಗಿಡಗಳಿಗೆ ತೇವಾಂಶ ಹೆಚ್ಚಿ ನೆಲಕಚ್ಚಿತು. ಮಳೆಯಾಶ್ರಿತ ಹೊಲದಲ್ಲಿ ಬೆಳೆದ ಗಿಡಗಳಿಗೆ ಈಗ ರಸಗೊಬ್ಬರ ನೀಡಿ ಕಳೆ ತೆಗೆದು ಆರೈಕೆ ಮಾಡಲಾಗಿದೆ.

ಕುಮಾರ್, ರೈತ (10ಎಚ್‌ಎಸ್ಎನ್8ಎ )

ಹೇಳಿಕೆ2

ಮುಂಗಾರು ಪೂರ್ವ ಮಳೆ ಈ ಬಾರಿ ವಾಡಿಕೆಗಿಂತ ಅಧಿಕವಾಗಿ ಸುರಿದಿದೆ. 4800 ಹೆಕ್ಟೇರ್ ಗುರಿ ಬದಲಿಗೆ 6200 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ನಾಟಿ ಮಾಡಿಲಾಗಿದೆ. ಮಳೆಯಿಂದ ಶೀತಾಂಶ ಹೆಚ್ಚಿ ಶೇ. 10ರಷ್ಟು ಹೊಗಸೊಪ್ಪು ಗಿಡಗಳಿಗೆ ಹಾನಿಯಾಗಿದೆ. - ಕವಿತಾ, ತಾ.ಸಹಾಯಕ ಕೃಷಿ ನಿರ್ದೇಶಕಿ, ಅರಕಲಗೂಡು (10ಎಚ್ಎಸ್ಎನ್8ಬಿ)ಹೇಳಿಕೆ 3

ಆಲೂಗಡ್ಡೆ ಬಿತ್ತನೆ ಹಂಗಾಮಿನಲ್ಲಿ ಕಳೆದ ಎರಡು ವಾರಗಳಿಂದ ಸತತವಾಗಿ ಮಳೆಯಾದ ಕಾರಣ ಬಿತ್ತನೆಗೆ ತೊಡಕಾಗಿದೆ. ಹೀಗಾಗಿ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಮಳೆಯಿಂದಾಗಿ ಆಲೂಗಡ್ಡೆ ಬಿತ್ತನೆ ಬದಲಿಗೆ ರೈತರು ಮುಸುಕಿನ ಜೋಳ ಮತ್ತಿತರ ಬೆಳೆಗಳ ಬಿತ್ತನೆ ಮಾಡಿದ್ದಾರೆ. - ರಾಜೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಅರಕಲಗೂಡು (10ಎಚ್ಎಸ್ಎನ್8ಸಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಧಿ ಬಗ್ಗೆ ನಿರಂತರ ಅಪಪ್ರಚಾರ ಸಲ್ಲ
33 ಅಂಕ ನೀಡಿಕೆ ಬಗ್ಗೆ ಬರಗೂರು ಅಸಮಾಧಾನ