ಗೋಕರ್ಣ: ಬುಧವಾರ ಸಂಜೆಯಿಂದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಸರ್ಕಾರಿ ಆಸ್ಪತ್ರೆಯಿಂದ ಭದ್ರಕಾಳಿ ಕಾಲೇಜಿನವರೆಗೆ ರಾಜ್ಯ ಹೆದ್ದಾರಿಯ ಮೇಲೆ ಎರಡು ಅಡಿಗೂ ಹೆಚ್ಚು ಮಣ್ಣಿನ ರಾಶಿ ಬಿದ್ದಿದ್ದು, ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಹಲವರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದರಂತೆ ಹೆಸ್ಕಾಂ ಗ್ರೀಡ್ ಬಳಿಯೂ ಆಗಿದ್ದು, ಈ ಹಿಂದೆ ಅನೇಕ ಬಾರಿ ಈ ಸ್ಥಳದಲ್ಲಿ ಧರೆಯ ಮಣ್ಣು ತೆಗೆದ ಪರಿಣಾಮ ಅವಾಂತರ ಉಂಟಾಗುತ್ತಿದೆ. ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಪಂ ನಿರ್ಲಕ್ಷ್ಯದಿಂದ ತೊಂದರೆಯಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.
ಇನ್ನು ಮಳೆ ಅವಾಂತರದಲ್ಲಿ ಕೆಲವೆಡೆ ಕಂಪೌಂಡ್ ಗೋಡೆಗಳು ಕುಸಿದು ಬಿದ್ದಿದ್ದು, ಕೃಷಿ ಭೂಮಿಗೆ ನೀರು ನುಗ್ಗಿದೆ.ಒಟ್ಟಾರೆ ಮಳೆಯ ಅಬ್ಬರದಲ್ಲಿ ನೈಸರ್ಗಿಕ ಅವಘಡಗಳು ಒಂದೆಡೆಯಾದರೆ, ಕೃತಕ ಅವಘಡಗಳು ಹೆಚ್ಚಾಗಿದೆ.
ಆಡುಕಟ್ಟೆ ಶಾಲೆಯ ಎದುರಿನ ಮಾವಿನ ಮರದ ಟೊಂಗೆ ಮುರಿದು ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಇಲ್ಲದ ಸಮಯದಲ್ಲಿ ಅವಘಡ ನಡೆದಿದ್ದರಿಂದ ಅನಾಹುತ ತಪ್ಪಿದೆ. ಬೀಳುವ ಹಂತದಲ್ಲಿರುವ ಮರವನ್ನು ತೆರವುಗೊಳಿಸುವಂತೆ ಶಾಲಾ ಅಭಿವೃದ್ಧಿ ಸಮಿತಿಯವರು ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೂ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.ಹನೇಹಳ್ಳಿ, ನಾಡುಮಾಸ್ಕೇರಿ, ಗಂಗಾವಳಿ, ಬಂಕಿಕೊಡ್ಲ, ತದಡಿ, ತೊರ್ಕೆ, ಮಾದನಗೇರಿ, ಹಿರೇಗುತ್ತಿ ಭಾಗದಲ್ಲಿ ಸಹ ಮಳೆಯ ಆರ್ಭಟದಿಂದ ಜನಜೀವನಕ್ಕೆ ತೊಡಕಾಗಿದೆ. ಹಲವಡೆ ರಸ್ತೆಗೆ ನೀರು ನುಗ್ಗಿತ್ತು. ಕೃಷಿ ಪ್ರದೇಶ ಜಲಾವೃತಗೊಂಡಿತ್ತು.