ಬಿಇಒಗೆ ಎರಡು ಕಾಲು ವರ್ಷದಿಂದ ಸ್ವಂತ ವಾಹನವೇ ಇಲ್ಲ

KannadaprabhaNewsNetwork |  
Published : Jun 22, 2025, 11:47 PM IST
ಬಿಇಒಗೆ ಎರಡು ಕಾಲು ವರ್ಷದಿಂದ ಸ್ವಂತ ವಾಹನವೇ ಇಲ್ಲ | Kannada Prabha

ಸಾರಾಂಶ

ನಗರದ ಬಿಇಒ ಕಳೆದ ಎರಡು ವರ್ಷಗಳಿಂದಲೂ ಸರ್ಕಾರಿ ವಾಹನವಿಲ್ಲದೆ ಶಾಲೆಗಳಿಗೆ ಭೇಟಿ ಹಾಗೂ ಕಚೇರಿಗೆ ಕೆಲಸಗಳಿಗೆ ಹೋಗಲು ಪರದಾಡುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ ಶಿಕ್ಷಕರು ಹಾಗೂ ಸಿಬ್ಬಂದಿಗಳ ಬೈಕ್‌ ಹಾಗೂ ಕಾರನ್ನು ಕೇಳಿ ಪಡೆದು, ಕರ್ತವ್ಯ ಮಾಡುವ ದುಸ್ಥಿತಿ ಬಂದೊದಗಿದೆ!.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ನಗರದ ಬಿಇಒ ಕಳೆದ ಎರಡು ವರ್ಷಗಳಿಂದಲೂ ಸರ್ಕಾರಿ ವಾಹನವಿಲ್ಲದೆ ಶಾಲೆಗಳಿಗೆ ಭೇಟಿ ಹಾಗೂ ಕಚೇರಿಗೆ ಕೆಲಸಗಳಿಗೆ ಹೋಗಲು ಪರದಾಡುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ ಶಿಕ್ಷಕರು ಹಾಗೂ ಸಿಬ್ಬಂದಿಗಳ ಬೈಕ್‌ ಹಾಗೂ ಕಾರನ್ನು ಕೇಳಿ ಪಡೆದು, ಕರ್ತವ್ಯ ಮಾಡುವ ದುಸ್ಥಿತಿ ಬಂದೊದಗಿದೆ!. ಹಿಂದಿನ ಬಿಇಒ ರಾಜಶೇಖರ್‌ಗೂ ಸರ್ಕಾರಿ ವಾಹನದ ಭಾಗ್ಯ ಇರಲಿಲ್ಲ. ೨೦೨೪ ರ ಸೆ.೧೩ ರಂದು ವರ್ಗಾವಣೆಯಾಗಿ ಬಿಇಒ ಟಿ.ಆರ್.ಸ್ವಾಮಿ ಬಂದು ಅಧಿಕಾರ ಪಡೆದುಕೊಂಡಿದ್ದಾರೆ. ಆದರೆ ಕಳೆದ 2023 ರ ಫೆ.15 ರಿಂದಲೂ ಬಿಇಒಗೆ ಸರ್ಕಾರಿ ವಾಹನವಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ಶಿಕ್ಷಕರು ಹಾಗೂ ಸಿಬ್ಬಂದಿಗಳ ಬೈಕ್‌ ಅಥವಾ ಕಾರನ್ನು ಕಾಡಿ ಬೇಡಿ ಪಡೆದು ಶಾಲೆಗಳಿಗೆ ಭೇಟಿ ಹಾಗೂ ಕಚೇರಿಗಳಿಗೆ ಹೋಗುವ ದುಸ್ಥಿತಿ ಶಾಲಾ ಶಿಕ್ಷಣ ಇಲಾಖೆ ತಂದೊಡ್ಡಿದೆ. ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋಟ್ಯಾಂತರ ರು. ಅನುದಾನ ನೀಡುತ್ತಿವೆ. ಆದರೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಲಾಗಿದ್ದ ಸರ್ಕಾರಿ ವಾಹನ ೧೫ ವರ್ಷಗಳಾದ ಕಾರಣ ಬಳಸಲು ಯೋಗ್ಯವಿಲ್ಲದ ಕಾರಣ ಸ್ಕ್ರ್ಯಾಪ್‌ ಆಗಿದೆ. ತಾಲೂಕಿನಲ್ಲಿ ೨೫೭ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿವೆ. ಶಾಲೆಗಳ ಭೇಟಿಗೆ ಅಥವಾ ಸರ್ಕಾರಿ ಕೆಲಸಗಳಿಗೆ ಚಾಮರಾಜನಗರಕ್ಕೆ ಹೋಗಬೇಕಾದರೆ ಬಿಇಒ ಪಾಡು ಹೇಳತೀರದಾಗಿದೆ ಎಂದು ಹೆಸರೇಳಲಿಚ್ಚಿಸಿದ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗೆ ಸರ್ಕಾರ ವಾಹನ ಅಥವಾ ಹೊರಗುತ್ತಿಗೆ ವಾಹನ ನೀಡಲು ಜಿಲ್ಲಾಡಳಿತ ಮುಂದಾಗಿಲ್ಲ. ಸ್ಥಳೀಯ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೂಡ ಜಿಲ್ಲಾಧಿಕಾರಿಗಳಿಗ ಪತ್ರ ಬರೆದು ಕ್ಷೇತ್ರ ಶಿಕ್ಷಣಾಧಿಕಾರಿ ವಾಹನ ಸ್ಕ್ರ್ಯಾಪ್‌ ಆಗಿದೆ. ಬದಲಿ ವಾಹನ ಕೊಡಿ ಎಂದಿದ್ದಾರೆ. ಅಲ್ಲದೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅನುದಾನ ನೀಡಲಿ:

ಕ್ಷೇತ್ರ ಶಿಕ್ಷಣಾಧಿಕಾರಿಗೆ ಹೊರಗುತ್ತಿಗೆ ಆಧಾರದಲ್ಲಿ ವಾಹನ ಪಡೆಯಲು ಜಿಪಂ ಮತ್ತು ತಾಪಂ ಪ್ರಾವಿಷನ್‌ ನೀಡುತ್ತಿಲ್ಲ. ಹೊರ ಗುತ್ತಿಗೆ ಆಧಾರದ ಮೇಲೆ ವಾಹನ ಪಡೆಯಲು ಪ್ರಾವಿಷನ್‌ ನೀಡಲು ಇರುವ ಅಡ್ಡಿಯಾದರೂ ಏನು ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ತಾಲೂಕಿನ ೨೫೭ ಸರ್ಕಾರಿ ಶಾಲೆಗಳಿವೆ. ಶಾಲಾ ಭೇಟಿ ನೀಡಲು ಆಗದಂತ ಸ್ಥಿತಿಗೆ ಜಿಲ್ಲಾಡಳಿತವೇ ತಂದೊಡ್ಡಿದೆ. ಶಾಲಾ ಭೇಟಿಗೆ ಹಾಗೂ ಸಭೆ ಸಮಾರಂಭಗಳಿಗೆ ಹೋಗಬೇಕಾದರೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ಪಾಡು ಹೇಳತೀರದಾಗಿದೆ.

ಸರ್ಕಾರಿ ವಾಹನ ಕಳೆದ ಎರಡು ಕಾಲು ವರ್ಷಗಳಿಂದಲೂ ಇಲ್ಲ. ಹೊರಗುತ್ತಿಗೆ ಆಧಾರದ ಮೇಲೆ ವಾಹನ ಪಡೆಯಲು ತಾಪಂ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾಮಾನ್ಯ ಸಭೆಯಲ್ಲೂ ಚರ್ಚೆ ಕೂಡ ಆಗಿದೆ. ತಾಪಂ ಅನುಮೋದನೆ ಕೊಟ್ಟರೆ ಹೊರ ಗುತ್ತಿಗೆಯಲ್ಲಿ ವಾಹನ ಪಡೆಯಲು ಅನುಕೂಲವಾಗುತ್ತದೆ. ಶಾಲಾ ಭೇಟಿಗೆ ಹಾಗೂ ಕಚೇರಿಗಳಿಗೆ ಹೋಗಲು ಕಾರು, ಬೈಕ್‌ ಪಡೆದುಕೊಂಡು ಹೋಗುತ್ತಿದ್ದೇನೆ.-ಟಿ.ಆರ್.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ