ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ ನೇತೃತ್ವದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಆದರ್ಶ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿತು.
ಕನಕಗಿರಿ: ಎನ್‌ಎಸ್‌ಕ್ಯೂಎಫ್ ವಿಷಯವನ್ನು ಮುಂದುವರಿಸುವಂತೆ ಧಾರವಾಡ ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೆ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ ನೇತೃತ್ವದ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಇಲ್ಲಿನ ಆದರ್ಶ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿತು.
ನಂತರ ಬಿಇಒ ಕನ್ನಡಪ್ರಭದೊಂದಿಗೆ ಮಾತನಾಡಿ, ನ್ಯಾಯಾಲಯ ಹಾಗೂ ಮೇಲಧಿಕಾರಿಗಳ ಆದೇಶದ ಮೇರೆಗೆ ಕನಕಗಿರಿ ಆದರ್ಶ (ಆರ್‌ಎಂಎಸ್‌ಎ) ಶಾಲೆಯ ೧೩ ಮಕ್ಕಳು ಎನ್‌ಎಸ್‌ಕ್ಯೂಎಫ್ (National Skills Qualifications Framework) ವಿಷಯ ಪಡೆದುಕೊಳ್ಳುವ ವಿಚಾರವಾಗಿ ಇತ್ತೀಚೆಗೆ ಧಾರವಾಡದ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ವಿದ್ಯಾರ್ಥಿಗಳು ಇಚ್ಛಿಸಿದ ಎನ್‌ಎಸ್‌ಕ್ಯೂಎಫ್ ವಿಷಯವನ್ನು ಮುಂದುವರಿಸುವಂತೆ ನ್ಯಾಯಾಲಯ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ವಿಷಯದ ಪಾಠ ಬೋಧನೆಗಾಗಿ ಶಿಕ್ಷಕರಿಗೆ ಜವಾಬ್ದಾರಿ ವಹಿಸಲಾಗಿದೆ. ಇಲಾಖೆಯ ಮಾರ್ಗಸೂಚಿಯಂತೆ ಡಿಸೆಂಬರ್ ತಿಂಗಳೊಳಗೆ ಎಲ್ಲ ಪಾಠಗಳನ್ನು ಪೂರ್ಣಗೊಳಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಬೇಕು. ಈ ನಡುವೆ ಯಾವ ಅಪಸ್ವರ, ದೂರು, ದುಮ್ಮಾನಗಳು ಬರದಂತೆ ಜಾಗೃತಿ ವಹಿಸಿಬೇಕು. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ, ಬೋಧನೆ ಮಾಡಬೇಕು. ಎನ್‌ಎಸ್‌ಕ್ಯೂಎಫ್ ವಿಷಯದ ಹೆಚ್ಚಿನ ಅಧ್ಯಯನಕ್ಕಾಗಿ ಬಳ್ಳಾರಿ ಅಥವಾ ಕೊಪ್ಪಳದ ಶಾಲೆಗಳಿಗೆ ಹೋಗಿಬರಲು ಆದೇಶಿಸಲಾಗಿದೆ. ಮಕ್ಕಳ ಓದಿಗೆ ಬೇಕಾದ ಸಾಮಗ್ರಿ, ಐಚ್ಛಿಕ ಜ್ಞಾನ ಮತ್ತು ಹೆಚ್ಚುವರಿ ತರಗತಿಗಳ ಆಯೋಜಿಸುವ ಮೂಲಕ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಶ್ರಮವಹಿಸಬೇಕು ಎಂದು ಬಿಇಒ ಖಡಕ್ ಸೂಚಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಶ್ರೀಕಾಂತ ಗುಡದಣ್ಣವರ, ಆನಂದ ನಾಗಮ್ಮನವರ, ಶಿಕ್ಷಕರಾದ ಅನುಸೂಯಾ, ಪಾಂಡುರಂಗ ಜಾಲಿ, ರುದ್ರಗೌಡ, ಶಾರದಾ, ಸೀರಿನ್, ಟಿ. ರಂಗನಾಥ, ಯಲ್ಲಪ್ಪ, ಸುರೇಶ ಸೇರಿದಂತೆ ಇತರರಿದ್ದರು. ಎನ್‌ಎಸ್‌ಕ್ಯೂಎಫ್ ತೆಗೆದುಕೊಳ್ಳಲು ಅವಕಾಶ
ಪ್ರಸಕ್ತ ಸಾಲಿನಲ್ಲಿ ೧೦ನೇ ತರಗತಿ ಓದುತ್ತಿರುವ ೩೭ ಮಕ್ಕಳ ಪೈಕಿ ೩೦ ವಿದ್ಯಾರ್ಥಿಗಳು ಎನ್‌ಎಸ್‌ಕ್ಯೂಎಫ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದ ೭ ವಿದ್ಯಾರ್ಥಿಗಳು ಹಿಂದಿ ವಿಷಯ ಆಯ್ಕೆ ಮಾಡಿಕೊಂಡಿದ್ದಾರೆ. ಇವರಲ್ಲಿಯೂ ಯಾರಾದರೂ ಎನ್‌ಎಸ್‌ಕ್ಯೂಎಫ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಆದರ್ಶ ಶಾಲೆ ಮುಖ್ಯಶಿಕ್ಷಕ ಶಿವಕುಮಾರ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.