ಬೆಸ್ಕಾಂ ವ್ಯಾಪ್ತಿಯ ಗ್ರಾಹಕರ ವಿದ್ಯುತ್‌ ಬಿಲ್‌ನಲ್ಲಿ ಸಾಕಷ್ಟು ದೋಷ : ಹೆವಿಲೋಡ್‌ ಬರೆ!

KannadaprabhaNewsNetwork |  
Published : Aug 13, 2024, 01:15 AM ISTUpdated : Aug 13, 2024, 10:54 AM IST
ಬೆಸ್ಕಾಂನ ಶುಲ್ಕಗಳು. | Kannada Prabha

ಸಾರಾಂಶ

ಬೆಸ್ಕಾಂ ವ್ಯಾಪ್ತಿಯ ಗ್ರಾಹಕರ ವಿದ್ಯುತ್‌ ಬಿಲ್‌ನಲ್ಲಿ ಸಾಕಷ್ಟು ದೋಷಗಳು ಕಂಡು ಬರುತ್ತಿದ್ದು, ಅತಿ ಕಡಿಮೆ ವಿದ್ಯುತ್‌ ಬಳಕೆ ಮಾಡುತ್ತಿರುವ ಗ್ರಾಹಕರಿಗೂ ಹೆವಿ ಲೋಡ್‌ ದಂಡದ ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ ವಿಧಿಸಲಾಗುತ್ತಿದೆ.  

ಶ್ರೀಕಾಂತ್ ಎನ್‌.ಗೌಡಸಂದ್ರ

 ಬೆಂಗಳೂರು :  ಬೆಸ್ಕಾಂ ವ್ಯಾಪ್ತಿಯ ಗ್ರಾಹಕರ ವಿದ್ಯುತ್‌ ಬಿಲ್‌ನಲ್ಲಿ ಸಾಕಷ್ಟು ದೋಷಗಳು ಕಂಡು ಬರುತ್ತಿದ್ದು, ಅತಿ ಕಡಿಮೆ ವಿದ್ಯುತ್‌ ಬಳಕೆ ಮಾಡುತ್ತಿರುವ ಗ್ರಾಹಕರಿಗೂ ಹೆವಿ ಲೋಡ್‌ ದಂಡದ ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ ವಿಧಿಸಲಾಗುತ್ತಿದೆ. ಹೆಚ್ಚು ವಿದ್ಯುತ್‌ ಬಳಕೆ ಮಾಡಿದವರೆಗೆ ಯಾವುದೇ ದಂಡ ವಿಧಿಸುತ್ತಿಲ್ಲ. ತನ್ಮೂಲಕ ಅಸಮರ್ಪಕ ಶುಲ್ಕವನ್ನು ಹೇರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಉದಾ: ಕೇವಲ 19 ಯುನಿಟ್‌ ವಿದ್ಯುತ್‌ ಬಳಕೆ ಮಾಡಿರುವ ಗ್ರಾಹಕರೊಬ್ಬರಿಗೆ ಬರೋಬ್ಬರಿ (ಬಿಲ್‌ ಸಂಖ್ಯೆ 142306248010157) ₹711 ಶುಲ್ಕ ವಿಧಿಸಲಾಗಿದೆ.

ಪ್ರತಿ ಯುನಿಟ್‌ಗೆ ₹5.90 ನಂತೆ ₹112 ಶುಲ್ಕ ಹಾಗೂ ನಿಗದಿತ ಶುಲ್ಕ ₹360 ಸೇರಿದರೂ ₹472 ಶುಲ್ಕ ವಿಧಿಸಬೇಕು. ಆದರೆ 3 ಕೆ.ವಿ. ಸಾಮರ್ಥ್ಯದ ಸಂಪರ್ಕ ಪಡೆದಿರುವ ಗ್ರಾಹಕ ಕೇವಲ 19 ಯುನಿಟ್‌ ಬಳಕೆ ಮಾಡಿದ್ದರೂ ಹೆವಿ ಲೋಡ್‌ ದಂಡದ ಹೆಸರಿನಲ್ಲಿ ₹225 ದಂಡ ವಿಧಿಸಲಾಗಿದೆ.

ನಾವು ಮನೆಯಲ್ಲಿ ವಾಸವಿರುವುದೇ ಇಲ್ಲ. ನಿಗದಿತ ಶುಲ್ಕಕ್ಕಿಂತ ವಿದ್ಯುತ್‌ ಶುಲ್ಕವೇ ಕಡಿಮೆ ಬರುತ್ತದೆ. ಹೀಗಿರುವಾಗ ಹೆವಿ ಲೋಡ್‌ ದಂಡ ವಿಧಿಸಿದರೆ ಹೇಗೆ ಎಂದು ಬ್ಯಾಟರಾಯನಪುರ (ಡಬ್ಲ್ಯೂ6) ವ್ಯಾಪ್ತಿಯ ಬೆಸ್ಕಾಂ ಗಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಅದೇ ಕಟ್ಟಡದಲ್ಲಿನ ಮತ್ತೊಬ್ಬ ಗ್ರಾಹಕರಿಗೆ (ಬಿಲ್‌ ಸಂಖ್ಯೆ 142306248010166) 190 ಯುನಿಟ್‌ ವಿದ್ಯುತ್‌ ಬಳಕೆಗೆ 3 ಕೆ.ವಿ. ಬದಲಿಗೆ 5.8 ಕೆ.ವಿಯಷ್ಟು ಲೋಡ್‌ ಬಳಕೆ ಮಾಡಿದ್ದಾರೆ ಎಂದು ಹೇಳಿ ₹495 ದಂಡ ವಿಧಿಸಲಾಗಿದೆ. ಹೀಗಾಗಿ 190 ಯುನಿಟ್‌ನಲ್ಲಿ ಗೃಹಜ್ಯೋತಿ ಅಡಿ 186 ಯುನಿಟ್‌ಗಳ ಶುಲ್ಕ ಮನ್ನಾ ಆಗಿದ್ದರೂ, ₹521 ತೆರಬೇಕಾಗಿ ಬಂದಿದೆ.

ಈ ಮೊದಲು ಎಂದೂ ಈ ರೀತಿ ಶುಲ್ಕ ಬಂದಿಲ್ಲ. ನಾವು ಯಾವುದೇ ಹೊಸ ಎಲೆಕ್ಟ್ರಿಕ್‌ ಸಾಧನವನ್ನೂ ಖರೀದಿಸಿಲ್ಲ. ಹೀಗಿದ್ದರೂ ಕಳೆದ ಮೂರು ತಿಂಗಳಿಂದ ಈಚೆಗೆ ಈ ಸಮಸ್ಯೆ ಬರುತ್ತಿದೆ ಎಂದು ಗ್ರಾಹಕರು ಆರೋಪಿಸಿದರು.

ಹೆಚ್ಚು ಬಳಕೆ ಮಾಡಿದವರಿಗೆ ದಂಡವಿಲ್ಲ:  ಇನ್ನು ಇದೇ ಕಟ್ಟಡದಲ್ಲಿ ಒಬ್ಬ ಗ್ರಾಹಕರು 236 ಯುನಿಟ್‌ ಬಳಕೆ ಮಾಡಿದ್ದಾರೆ. ದಾಖಲಿತ ಬೇಡಿಕೆ 2.47 ಕೆ.ವಿ. ಎಂದು ದಾಖಲಿಸಿ ₹1,932 ಶುಲ್ಕ ವಿಧಿಸಲಾಗಿದೆ. ಯಾವುದೇ ದಂಡ ವಿಧಿಸಿಲ್ಲ. ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಹೆವಿ ಲೋಡ್‌ ದಂಡ ವಿಧಿಸುತ್ತಿಲ್ಲ. ವಿದ್ಯುತ್‌ ಅನ್ನೇ ಬಳಕೆ ಮಾಡದವರಿಗೆ ಹೆವಿ ಲೋಡ್‌ ಹೆಸರಿನಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಏನಿದು ಹೆವಿ ಲೋಡ್‌ ದಂಡ?

ಒಂದು ವರ್ಷದ ಸರಾಸರಿ ವಿದ್ಯುತ್‌ ಬಳಕೆ ಆಧರಿಸಿ ವಿದ್ಯುತ್‌ ಬಳಕೆ ಪ್ರಮಾಣ ಹೆಚ್ಚಿದ್ದರೆ ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ವಿಧಿಸುವುದು ಸಾಮಾನ್ಯ. ಜತೆಗೆ ವಿದ್ಯುತ್‌ ಸಂಪರ್ಕ ಪಡೆಯುವಾಗ ಎಷ್ಟು ಕೆ.ವಿ. ಸಾಮರ್ಥ್ಯದ ಸಂಪರ್ಕ ಪಡೆದಿರುತ್ತಾರೋ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಾಗ ಹೆವಿ ಲೋಡ್‌ ದಂಡವನ್ನೂ ವಿಧಿಸಲಾಗುತ್ತದೆ.

ಆದರೆ, 3 ಕೆ.ವಿ. ವೋಲ್ಟೇಜ್‌ ಸಾಮರ್ಥ್ಯದ ವಿದ್ಯುತ್‌ ಸಂಪರ್ಕ ಪಡೆದಿದ್ದರೂ ಕೇವಲ 19 ಯುನಿಟ್ ಬಳಕೆಗೆ ಹೆಚ್ಚುವರಿ ಲೋಡ್‌ ಹೆಸರಿನಲ್ಲಿ ದಂಡ ವಿಧಿಸಲಾಗಿದೆ. ಇಂತಹ ದೋಷಗಳು ಹಲವು ಕಡೆ ಮರುಕಳಿಸುತ್ತಿವೆ ಎಂದು ದೂರಲಾಗಿದೆ.

ಬೆಸ್ಕಾಂ ಹೇಳುವುದೇನು?

ಗ್ರಾಹಕರು ಏಕ ಕಾಲದಲ್ಲಿ ಬಹು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದರಿಂದ ಮಂಜೂರಾದ ವೋಲ್ಟೇಜ್ ಅನ್ನು ಮೀರಿದ್ದಕ್ಕಾಗಿ ದಂಡವನ್ನು ವಿಧಿಸಲಾಗುತ್ತದೆ. ಕುಟುಂಬಗಳಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಇದಕ್ಕೆ ಕಾರಣ ಆಗಿರಬಹುದು. ಜತೆಗೆ 10 ವರ್ಷಕ್ಕಿಂತ ಹಳೆಯ ಮೀಟರ್‌ಗಳಿಂದಲೂ ಸಮಸ್ಯೆ ಆಗಿರಬಹುದು. ಹೀಗಾಗಿ ಹೊಸ ಮೀಟರ್‌ ಅಳವಡಿಕೆ ಮಾಡಿಕೊಳ್ಳಲು ಹಾಗೂ ಹೆಚ್ಚು ವೋಲ್ಟೇಜ್‌ ಸಾಮರ್ಥ್ಯಕ್ಕೆ ಅಪ್ಡೇಟ್‌ ಆಗಲು ಸಲಹೆ ನೀಡುತ್ತೇವೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, 3 ಕಿ.ವ್ಯಾಟ್‌ ಸಾಮರ್ಥ್ಯದ ಸಂಪರ್ಕ ಹೊಂದಿರುವ ಮನೆಯಲ್ಲಿ ಕೇವಲ 19 ಯುನಿಟ್‌ ಬಳಕೆ ಮಾಡಿದ್ದರೂ ದಂಡ ಹೆವಿ ಲೋಡ್‌ ದಂಡ ವಿಧಿಸಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ದಂಡ ವಿಧಿಸುವುದು ಯಾಕೆ?

ಬೆಸ್ಕಾಂ ಸಾಮಾನ್ಯವಾಗಿ ಮಂಜೂರಾದ ವೋಲ್ಟೇಜ್ ಅನ್ನು ಪರಿಗಣಿಸಿ ತನ್ನ ಬೇಡಿಕೆಯನ್ನು ನಿರ್ಧರಿಸುತ್ತದೆ. ಹೆಚ್ಚುವರಿ ವಿದ್ಯುತ್‌ ಬಳಕೆಯಿಂದ ಪೂರೈಕೆ ಸಮಸ್ಯೆ ಮತ್ತು ಲೋಡ್ ಶೆಡ್ಡಿಂಗ್‌ಗೆ ಕಾರಣವಾಗಬಹುದು. ಹಾಗಾಗಿ ಇಂತಹ ತೊಂದರೆ ಹಾಗೂ ಇದರಿಂದ ಆಗುವ ನಷ್ಟ ಸರಿದೂಗಿಸಲು ದಂಡ ವಿಧಿಸಲಾಗುತ್ತದೆ. ಇದು ವಿಶೇಷವಾಗಿ ಪೀಕ್‌ ಸಮಯದಲ್ಲಿ ಹೆಚ್ಚು ವಿದ್ಯುತ್‌ ಬಳಕೆ ಮಾಡುವ ಸಮಸ್ಯೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ