ರೈತರ ಬದುಕಿನ ಬಗ್ಗೆ ಬೆಸ್ಕಾಂಗೆ ನೈಜ ಕಾಳಜಿ ಇಲ್ಲ

KannadaprabhaNewsNetwork |  
Published : Feb 11, 2025, 12:45 AM IST
ಪೋಟೋ೧೦ಸಿಎಲ್‌ಕೆ೨ ಚಳ್ಳಕೆರೆ ತಾಲ್ಲೂಕಿನ ತಳಕು ಬೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನ ತಳಕು ಬೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ತಳಕು ಬೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ । ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ: ಸತಾರ್ ಕನ್ನಡಪ್ರಭ ವಾರ್ತೆ ಚಳ್ಳಕೆರೆಪ್ರತಿನಿತ್ಯ ಗ್ರಾಮೀಣ ಭಾಗಗಳಲ್ಲಿ ಸಮಯದ ಮಿತಿ ಇಲ್ಲದೆ ನಿರಂತರವಾಗಿ ವಿದ್ಯುತ್ ಕೈಕೊಡುತ್ತಿದ್ದು, ನೀರಾವರಿ ಪ್ರದೇಶದ ಜಮೀನಿನ ಬೆಳೆಯನ್ನು ಉಳಿಸಿಕೊಳ್ಳಲು ಕಷ್ಟವಾಗಿದೆ. ಅದೇ ರೀತಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುತ್ತಿದ್ದು, ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ, ರಾಜ್ಯ ಸಂಚಾಲಕ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ನೇತೃತ್ವದಲ್ಲಿ ಸೋಮವಾರ ತಳಕು ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಗಲು-ರಾತ್ರಿಯಲ್ಲಿ ವಿದ್ಯುತ್ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವುದೇ ಕಷ್ಟವಾಗಿದೆ. ಎಲ್ಲೆಡೆ ಮಳೆಯಾಗಿ ಡ್ಯಾಂಗಳು ತುಂಬಿದ್ದರೂ ಬೆಸ್ಕಾಂ ಇಲಾಖೆ ಮಾತ್ರ ಸಮರ್ಪಕವಾಗಿ ವಿದ್ಯುತ್ ನೀಡಲು ಮೀನಾಮೇಷ ಏಣಿಸುತ್ತಿದೆ. ರೈತರ ಬದುಕಿನ ಬಗ್ಗೆ ನೈಜ ಕಾಳಜಿ ಬೆಸ್ಕಾಂ ಇಲಾಖೆಗೆ ಇಲ್ಲ. ಆದ್ದರಿಂದ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ ಎಂದರು.

ರಾಜ್ಯ ಸಂಚಾಲಕ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ತಳಕು ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಿದ್ಯುತ್ ಸಂಪರ್ಕ ಪೂರ್ಣಪ್ರಮಾಣದಲ್ಲಿ ಸಿಗುತ್ತಿಲ್ಲ. ಪ್ರತಿನಿತ್ಯವೂ ರೈತರು ಹಾಗೂ ವಿದ್ಯಾರ್ಥಿಗಳು ವಿದ್ಯುತ್‌ಗಾಗಿ ಕಾಯುವ ಸ್ಥಿತಿ ಉಂಟಾಗಿದೆ. ಯಾವುದೇ ಸಾರ್ವಜನಿಕ ಮಾಹಿತಿ ನೀಡದೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಆದ್ದರಿಂದ ತಳಕು ಬೆಸ್ಕಾಂ ಕಚೇರಿ ಮುತ್ತಿಗೆ, ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಮೊಳಕಾಲ್ಮೂರು, ಹಿರಿಯೂರು, ಚಳ್ಳಕೆರೆ ಬೆಸ್ಕಾಂ ಉಪವಿಭಾಗದ ಕಾರ್ಯಪಾಲಕ ಅಭಿಯಂತರ ರಾಮಚಂದ್ರ ಡಿ.ಸತಾರ್, ಪ್ರತಿನಿತ್ಯ ವಿದ್ಯುತ್ ಸರಬರಾಜಿನಲ್ಲಿ ಬಾರಿ ಪ್ರಮಾಣದಲ್ಲಿ ವ್ಯತ್ಯಯವಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿ, ಮುಷ್ಕರ ನಡೆಸುತ್ತಿದ್ದಾರೆ. ರೈತರ ಮುಷ್ಕರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವೆ, ಕೆಲವೊಂದು ಸಣ್ಣಪುಟ್ಟ ಲೋಪವಿದ್ದರೆ ಕಚೇರಿ ಹಂತದಲ್ಲೇ ಸರಿ ಪಡಿಸಲಾಗುವುದು. ರೈತರಿಗೆ ಅವಶ್ಯವಿರುವ ವಿದ್ಯುತ್ ನೀಡುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಲಾಗುವುದು. ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮುಷ್ಕರದಲ್ಲಿ ಭಾಗವಹಿಸಿದ್ದೀರಿ, ಈ ಸಮಸ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಈ ವೇಳೆ ಬೆಸ್ಕಾಂ ಎಇಇ ಮಮತ, ಎಸ್‌ಒ ಸೂರಲಿಂಗಪ್ಪ, ರೈತರಾದ ಆರ್.ಬಿ.ನಿಜಲಿಂಗಪ್ಪ, ಮಂಜಣ್ಣ, ತಿಪ್ಪೇಸ್ವಾಮಿ, ಪ್ರಶಾಂತ್‌ ರೆಡ್ಡಿ, ರಂಗಾರೆಡ್ಡಿ, ರಾಮರೆಡ್ಡಿ, ನರಸಿಂಹಪ್ಪ, ಅಶೋಕ್, ನಾಗೇಂದ್ರ, ಬಿ.ವಿ.ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್‌ರೆಡ್ಡಿ, ವೀರಣ್ಣ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ