ಕನ್ನಡಪ್ರಭ ವಾರ್ತೆ ಅಥಣಿ
ಸೇವೆ ಮತ್ತು ತ್ಯಾಗ ನಮ್ಮ ರಾಷ್ಟ್ರದ ಆದರ್ಶಗಳು ಎಂದು ಮೈಸೂರಿನ ಹಾಸ್ಯ ಕಲಾವಿದ ಪ್ರೊ.ಕೃಷ್ಣೇಗೌಡ ಹೇಳಿದರು.ಪಟ್ಟಣದಲ್ಲಿ ಇನ್ನರ್‌ವ್ಹಿಲ್ ರೋಟರಿ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಸಾಧಕ ರೈತ ಮಹಿಳೆಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡುತ್ತಿರುವ ಸಮಾಜಮುಖಿ ಸೇವೆ ಶ್ಲಾಘನೀಯ. ಅಥಣಿಯಲ್ಲಿ ಇನ್ನರ್‌ವ್ಹಿಲ್ ಸದಸ್ಯರು ಕಳೆದ 25 ವರ್ಷಗಳಿಂದ ಪರಿಸರ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಮತ್ತು ವಿವಿಧ ರಂಗಗಳಲ್ಲಿ ವಿನೂತನ ಸೇವೆಗಳನ್ನು ಸಲ್ಲಿಸುವ ಮೂಲಕ ಇಂದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಶ್ಲಾಘಿಸಿದ ಅವರು, ತಮ್ಮ ಹಾಸ್ಯ ಚಟಾಕಿಗಳ ಮೂಲಕ ಸಭಿಕರನ್ನು ರಂಜಿಸಿದರು.ರಾಯಚೂರಿನ ಸಾಧಕ ರೈತ ಮಹಿಳೆ ಡಾ.ಕವಿತಾ ಮಿಶ್ರಾ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಶ್ರೇಷ್ಠ, ಕನಿಷ್ಠ ಎಂಬುವುದು ಇಲ್ಲ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೇ ಯಶಸ್ಸು ದೊರಕುತ್ತದೆ. ಡಾಕ್ಟರ್ ಮತ್ತು ಇಂಜಿನಿಯರ್‌ಗಳು ಮಾತ್ರ ಕೋಟಿ ಕೋಟಿ ಗಳಿಸಿದರೆ ಸಾಲದು, ದೇಶಕ್ಕೆ ಅನ್ನ ನೀಡುವ ರೈತನ ಕೂಡ ಕೋಟಿಯಲ್ಲಿ ಮಾತನಾಡಬೇಕು ಎಂದರು.ಪ್ರತಿಯೊಬ್ಬ ರೈತನ ಕೂಡ ವೈದ್ಯರು ಇಂಜಿನಿಯರ್, ಇನ್ನಿತರ ಉದ್ಯಮಿಗಳಂತೆ ಅವರು ಕೂಡ ಕೋಟ್ಯಧೀಶರಾಗಬೇಕು. ಕೃಷಿ ಜೊತೆಗೆ ಹೈನುಗಾರಿಕೆ ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆಯಂತಹ ಉಪಕಸುಬುಗಳನ್ನು ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ತಿಳಿಸಿದರು.ಅಥಣಿ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ನೇತೃತ್ವ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯು ಅಥಣಿಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ರೋಟರಿ ಸಂಸ್ಥೆಯ ಜೊತೆಗೆ ಮಹಿಳೆಯರು ನಡೆಸಿಕೊಂಡು ಬರುತ್ತಿರುವ ಇನ್ನರ್‌ವ್ಹಿಲ್ ಸಂಸ್ಥೆಯು ಕೂಡ ಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮತ್ತು ಸಮಾಜಮುಖಿ ಸೇವೆಗಳನ್ನು ಮಾಡುತ್ತ ಬಂದಿದೆ ಎಂದು ವಿವರಿಸಿದರು.ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಇನ್ನರ್‌ವ್ಹಿಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪೂರ್ಣಿಮಾ ಪಾಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ಇನ್ನರ್‌ವ್ಹಿಲ್ ಸಂಸ್ಥೆಯ ಅಧ್ಯಕ್ಷರಾಗಿ ಸೇವಿ ಸಲ್ಲಿಸಿದ 25 ಜನ ಅಧ್ಯಕ್ಷರಿಗೆ ರಜತ ಮಹೋತ್ಸವದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇಳೆ ಇನ್ನರ್‌ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ತೃಪ್ತಿ ಕುಲಕರ್ಣಿ, ಮಧುಶ್ರೀ ಮಂಗಸೂಳಿ, ಲಲಿತಾ ಮೇಕನಮರಡಿ, ಸುವೇದಾ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರೋಟರಿ ಸಂಸ್ಥೆಯ ಇನ್ನೊಂದು ಭಾಗವಾಗಿರುವ ಇನ್ನರ್‌ವಿಲ್ ಸಂಸ್ಥೆಯ 25 ವರ್ಷಗಳ ಸಮಾಜ ಸೇವಾ ಕಾಯಕ ದೊಡ್ಡದು. ಗಜಾನನ ಮಂಗಸೂಳಿ ಅವರ ನೇತೃತ್ವದಲ್ಲಿ ರೋಟರಿ ಮತ್ತು ಇನ್ನರ್ವಿಲ್ ಸಂಸ್ಥೆಗಳ ಮೂಲಕ ಸಮಾಜಮುಖಿ ಸೇವೆ ಇನ್ನಷ್ಟು ನಿರಂತರವಾಗಿ ಜರುಗಲಿ.-ಪ್ರಭು ಚನ್ನಬಸವ ಸ್ವಾಮೀಜಿ,
ಮೋಟಗಿಮಠ.