ಧಾರವಾಡ: ಪ್ರಸ್ತುತ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಯನ್ನು ಸಚಿವ ಸಂತೋಷ ಲಾಡ್, ವಿಪ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಇತರೆ ಗಣ್ಯರು ನೆರವೇರಿಸಿದರು.
ಧಾರವಾಡ: ಕೃಷಿ ಮೇಳದ 2ನೇ ದಿನ ಭಾನುವಾರ ಮುಖ್ಯ ವೇದಿಕೆಯಲ್ಲಿ "ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಯ ಪಾತ್ರ‍್ರ” ವಿಚಾರಗೋಷ್ಠಿ ನಡೆಯಿತು.ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿ ಕೃಷಿಯನ್ನು ಉದ್ಯಮವನ್ನಾಗಿ ಅಳವಡಿಸಿಕೊಂಡು ನವೋದ್ಯಮಿಗಳಾಗಲು ಯುವಕರಿಗೆ ಕರೆ ನೀಡಿ, ಉತ್ತಮ ಆರೋಗ್ಯಕ್ಕಾಗಿ ಆಹಾರ ಭದ್ರತೆ ಜೊತೆಗೆ ಪೌಷ್ಟಿಕ ಭದ್ರತೆಗೆ ಒತ್ತು ನೀಡಬೇಕೆಂದರು.ಕೃವಿವಿ ನಿವೃತ್ತ ಡೀನ್ ಡಾ. ಎಚ್.ಬಿ. ಬಬಲಾದ, ಬದಲಾದ ಕೃಷಿ ಪದ್ಧತಿಗಳಿಂದ ಮಣ್ಣಿನ ಸಾವಯವ ಇಂಗಾಲ ಶೇ. 0.35 ಕ್ಕಿಂತ ಕಡಿಮೆಯಾಗಿರುವ ಕಾರಣ, ರೈತರು ಪರಿಸರ ಸ್ನೇಹಿ ಕೃಷಿ ಪದ್ಧತಿಗಳಾದ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿದರು.
ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ. ಎ.ಎಸ್. ಆನಂದ, ಯುವಕರು ಆಧುನಿಕತೆಗೆ ಮೊರೆಹೋಗಿ ಕೃಷಿಯಿಂದ ವಿಮುಖರಾಗದೆ ಕೃಷಿಯಲ್ಲಿ ಸೂಕ್ತ ಪರಿವರ್ತನೆಗಳನ್ನು ಮಾಡಿಕೊಂಡು ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದರು.ಬೆಂಗಳೂರು ವಿವಿ ಕುಲಪತಿ ಡಾ. ಎಸ್. ವಿ. ಸುರೇಶ, ತೀವ್ರ ರಾಸಾಯನಿಕ ಗೊಬ್ಬರ ಬಳಕೆಯಿಂದ ಆಹಾರ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ರೈತರು ಸಾವಯವ ಕೃಷಿಯತ್ತ ಹೆಜ್ಜೆಯಿಡಬೇಕೆಂದು ಮನವಿ ಮಾಡಿದರು.ರಾಯಚೂರು ಕೃಷಿ ವಿವಿ ಕುಲಪತಿ ಕುಲಪತಿ ಡಾ. ಎಂ. ಹನುಮಂತಪ್ಪ, ಕೃಷಿಯಲ್ಲಿ ರಾಸಾಯನಿಕಗಳ ಜೊತೆ ಸಾವಯವದ ಸೂಕ್ತ ಸಮತೋಲನ ಕಾಪಾಡಿಕೊಳ್ಳುವಂತೆ ಮತ್ತು ಮಾರುಕಟ್ಟೆಯ ಅಗತ್ಯತೆಯನ್ನು ಅರಿತು ಕೃಷಿ ಕೈಗೊಳ್ಳಬೇಕು ಎಂದರು.ಡಾ. ಶ್ರೀಪಾದ ಕುಲಕರ್ಣಿ ಸ್ವಾಗತಿಸಿದರು, ಡಾ. ಸಿ.ಪಿ. ಚಂದ್ರಶೇಖರ ವಂದಿಸಿದರು. ಡಾ. ಸುರೇಖಾ ಸಂಕನಗೌಡರ ನಿರೂಪಿಸಿದರು.