ಕನ್ನಡ ಪ್ರಭ ವಾರ್ತೆ ನಾಯಕನಹಟ್ಟಿಸ್ಥಳೀಯ ನಿವಾಸಿಗಳು ಕೈಜೋಡಿಸಿದರೆ ಮಾತ್ರ ಪಟ್ಟಣದ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ. ಮಂಜುಳಾ ಅಭಿಪ್ರಾಯಪಟ್ಟರು. ಭಾರತೀಯ ಸ್ಟೇಟ್ ಬ್ಯಾಂಕ್, ಜಿಲ್ಲಾ ಬ್ಯಾಂಕ್ ಗಳ ವತಿಯಿಂದ ಪಟ್ಟಣದ ಎ.ಕೆ. ಕಾಲೋನಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕರಣ ದಾಖಲಿಸಿ ಕಸ ಬೇರ್ಪಡಿಸುವ ರೂಢಿಯನ್ನು ನಾಗರಿಕರಿಗೆ ಕಲಿಸುವಷ್ಟು ಸಮಯ ಸ್ಥಳೀಯ ಸಂಸ್ಥೆಗಳಿಗೆ ಇಲ್ಲ. ಹಾಗಾಗಿ, ನಾವು ವಾಸಿಸುವ ಸ್ಥಳ, ಊರು, ಪಟ್ಟಣ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಬೇಕಾದರೆ ಜನರು ಈಗಿನಿಂದಲೇ ಬದಲಾಗಬೇಕು ಎಂದರು.
ಪಟ್ಟಣ ಪಂಚಾಯತಿ ಸದಸ್ಯ ಜೆ.ಆರ್ ರವಿಕುಮಾರ್ ಮಾತನಾಡಿ, ಪರಿಸರ ಸ್ವಚ್ಛತೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಹಾಗಾಗಿ ಎಲ್ಲರೂ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡಬೇಕು ಎಂದರು.ಚಿತ್ರದುರ್ಗ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕುಮಾರ್ ಬಾಬು ಮಾತನಾಡಿ, ಬಸ್ ನಿಲ್ದಾಣ, ರಸ್ತೆ ಬದಿಗಳಲ್ಲಿ, ನೀರಿನ ಮೂಲಗಳು, ಮಾರುಕಟ್ಟೆ ಪ್ರದೇಶ, ಧಾರ್ಮಿಕ ಸ್ಥಳಗಳಲ್ಲಿ ಶ್ರಮದಾನ ಚಟುವಟಿಕೆಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಇದರಿಂದ ಸಾಂಕ್ರಾಮಿಕ ರೋಗದಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಬಿ. ಅರುಣ್‍ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್‍ಬಿಐ ವ್ಯವಸ್ಥಾಪಕರಾದ ಪಂಕಜ್ ಕುಮಾರ್, ಮಹೇಶ್ವರಪ್ಪ, ಗ್ರಾಪಂ ಮಾಜಿ ಸದಸ್ಯ ಆರ್.ಶ್ರೀಕಾಂತ್, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್ ಮೀಸೆ, ಶಿಕ್ಷಕ ಸದಾಶಿವಯ್ಯ, ಬ್ಯಾಂಕಿನ ಸಿಬ್ಬಂದಿ ಪ್ರಸಾದ್, ಮಂಜುನಾಥ್, ಚಂದ್ರಣ್ಣ ಇದ್ದರು.