ರಾಮನಗರ: ಸರಕಾರ ನಗರದ ಅರ್ಚಕರಹಳ್ಳಿ ಬಳಿ ನಿರ್ಮಿಸಲು ಮುಂದಾಗಿರುವ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡಲು ಸಮಿತಿ ರಚಿಸಿ ಭೂಮಿ ಕಳೆದುಕೊಂಡ ರೈತರ ನೆರವಿಗೆ ಧಾವಿಸುವಂತೆ ಚನ್ನಪಟ್ಟಣ ಕುಡಿಯುವ ನೀರು, ಕಟ್ಟೆ ವಿರಕ್ತ ಮಠದ ಶಿವರುದ್ರ ಶ್ರೀಗಳು ಆಗ್ರಹಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣಕ್ಕೆ ರೈತರಿಂದ ಯಾವುದೇ ವಿರೋಧವಿಲ್ಲ. ಆದರೆ, ಸರಕಾರ ನ್ಯಾಯ ಸಮ್ಮತ ಪರಿಹಾರ ನೀಡಬೇಕು. ಉದ್ದೇಶಿತ ವಿವಿ ನಿರ್ಮಾಣಕ್ಕೆ ರೈತರ ಫಲವತ್ತಾದ ಭೂಮಿ ಬಳಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಪ್ರಸ್ತುತ ಮಾರುಕಟ್ಟೆ ಹಾಗೂ ವೈಜ್ಞಾನಿಕ ಆಧಾರದ ಮೇಲೆ ಪರಿಹಾರ ಒದಗಿಸಿಕೊಡಬೇಕು ಎಂದು ಹೇಳಿದರು.
ಕನ್ನಮಂಗಲದೊಡ್ಡಿ ರಸ್ತೆಯಿಂದ ರಂಗರಾಯರದೊಡ್ಡಿ ರಸ್ತೆ ತನಕ ಜಮೀನು ಕಳೆದುಕೊಳ್ಳುವ ರೈತರಿಗೆ 50:50 ಅನುಪಾತದಲ್ಲಿ ನಿವೇಶನಗಳನ್ನು ನೀಡಬೇಕು. ಜಮೀನು ಕಳೆದುಕೊಳ್ಳುವ ರೈತ ಕುಟುಂಬದವರಿಗೆ ಉದ್ದೇಶಿತ ರಾಜೀವ್ ಗಾಂಧಿ ವಿವಿ ಆರೋಗ್ಯ ವಿಶ್ವ ವಿದ್ಯಾಲಯದಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.ಭೂ ಸ್ವಾಧೀನ ನಿವೇಶನಗಳ ಹಂಚಿಕೆ ಉದ್ಯೋಗ ಸೌಲಭ್ಯ ಸಂಬಂಧ ರೈತರ ಅಧಿಕಾರಿಗಳ ಜನಪ್ರತಿನಿಧಿಗಳ ಸಮನ್ವಯ ಸಮಿತಿ ರಚಿಸಬೇಕು. ಅರ್ಚಕರಹಳ್ಳಿ ಸರಕಾರಿ ಶಾಲೆಗೆ ಜಾಗದ ಕೊರತೆಯಿದ್ದು, ಶಾಲೆ ಹಾಗೂ ಕ್ರೀಡಾಂಗಣಕ್ಕೆ 5 ಎಕರೆ ಜಾಗವನ್ನು ಮಂಜೂರು ಮಾಡಬೇಕು ಎಂದು ಹೇಳಿದರು.
ಭೂಮಿ ಕಳೆದುಕೊಂಡಿರುವ ಬಹುತೇಕ ರೈತರು ಕಳೆದ 30-40 ವರ್ಷಗಳಿಂದ ತೆಂಗು, ಅಡಿಕೆ ಬೆಳೆದು ಜೀವನ ಸಾಗಿಸುತ್ತಿದ್ದರು. ಪ್ರಕರಣ ನ್ಯಾಯಾಲಯದಲ್ಲಿರಬೇಕಾದರೆ ಅಧಿಕಾರಿಗಳು ಏಕಾಏಕಿ ನುಗ್ಗಿ ಮರಗಳನ್ನು ಕತ್ತರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆಗೆ ಭೂಮಿ ಕಳೆದುಕೊಂಡವರಿಂದ ಯಾವುದೇ ತಕರಾರು ಹಾಗೂ ವಿರೋಧವಿಲ್ಲ. ಆದರೆ, ನ್ಯಾಯುತವಾಗಿ ಸರಕಾರ ಬೇಡಿಕೆ ಈಡೇರಿಸಬೇಕು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಮಠಾಧ್ಯಕ್ಷ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಉರಗಳ್ಳಿ ಮಠಾಧ್ಯಕ್ಷ ಶಿವಶಂಕರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಪೊಲೀಸ್ ಶಂಕರಪ್ಪ, ನಗರಸಭಾ ಮಾಜಿ ಅಧ್ಯಕ್ಷೆ ವಿಜಯಕುಮಾರಿ, ಮುಖಂಡರಾದ ಗುರುಮಾದಯ್ಯ, ವಿಜಯಕುಮಾರ್, ಸೋಮೇಶ್, ಮಹದೇವಯ್ಯ, ರಾಜಶೇಖರ್, ಶಿವಸ್ವಾಮಿ, ಮಲ್ಲೇಶ್, ನಾರಾಯಣ್, ಗೌರಮ್ಮ ಮುಂತಾದವರಿದ್ದರು.